ಕೋಲ್ಕತ್ತಾ: ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವವದ ತೃಣಮೂಲ ಕಾಂಗ್ರೆಸ್ ಸರ್ಕಾರ, ತಮ್ಮ ಸರ್ಕಾರದ 100 ದಿನಗಳ ಉದ್ಯೋಗ ಯೋಜನೆ ಕರ್ಮಶ್ರೀಯನ್ನು ಮಹಾತ್ಮ ಶ್ರೀ ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ( MGNREGA)ಯನ್ನು 'ವೀಕ್ಷಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್-ಗ್ರಾಮೀನ್ (VB-G RAM G) ಮಸೂದೆ' ಎಂದು ಮರುನಾಮಕರಣ ಮಾಡುವುದರ ವಿರುದ್ಧ ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದರು.
ಗುರುವಾರ ಕೋಲ್ಕತ್ತಾದಲ್ಲಿ ನಡೆದ ವ್ಯಾಪಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ನಾವು ಕರ್ಮಶ್ರೀ ಯೋಜನೆಯನ್ನು ಪ್ರಾರಂಭಿಸಿದ್ದೇವೆ, ಆದರೆ ಗಾಂಧೀಜಿಯವರ ಹೆಸರನ್ನು ಸೇರಿಸಿರಲಿಲ್ಲ, ಅದರ ಬಗ್ಗೆ ನನಗೆ ನಿಜಕ್ಕೂ ವಿಷಾದವಿದೆ. ಎಂಜಿಎನ್‌ಆರ್‌ಇಜಿಎ ಕಾರ್ಯಕ್ರಮದಂತೆಯೇ ರಾಷ್ಟ್ರಪಿತನ ಹೆಸರು ಇರಬೇಕಿತ್ತು. ಈಗ ಕೇಂದ್ರದ ಹೊಸ ಮಸೂದೆಯಲ್ಲಿ ಗಾಂಧೀಜಿಯವರ ಹೆಸರು ಇರುವುದಿಲ್ಲ. ಆದ್ದರಿಂದ ಕರ್ಮಶ್ರೀಯ ಹೆಸರನ್ನು ಮಹಾತ್ಮಶ್ರೀ ಯೋಜನೆ ಎಂದು ಬದಲಾಯಿಸಲಾಗುವುದು. ಕೇಂದ್ರ ಮಹಾತ್ಮಗಾಂಧಿಗೆ ಗೌರವ ನೀಡದಿದ್ದರೆ, ನಾವು ನೀಡುತ್ತೇವೆ ಎಂದು ಹೇಳಿದ್ದರು.
ಈ ಹಿನ್ನೆಲೆ ಇಂದು ಅಧಿಕೃತವಾಗಿ ಮರುನಾಮಕರಣ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಮರುನಾಮಕರಣವು ಮಹಾತ್ಮ ಗಾಂಧಿಯವರ ಪರಂಪರೆಯನ್ನು ಕಾಪಾಡುವುದಲ್ಲದೆ, ನಮ್ಮ ರಾಜ್ಯ ಕಾರ್ಯಕ್ರಮವನ್ನು ಸಾರ್ವಜನಿಕ ಕಲ್ಯಾಣದ ಮನೋಭಾವದೊಂದಿಗೆ ಜೋಡಿಸುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ (ಏಜೆನ್ಸೀಸ್).