Partha Chatterjee | ಮಮತಾ ಭ್ರಷ್ಟಾಚಾರವನ್ನು ಕಣ್ಣುಮುಚ್ಚಿ ಪ್ರೋತ್ಸಾಹಿಸಿದರು ಎಂದ ಮಾಜಿ ಸಚಿವ ಪಾರ್ಥ ಚಟರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಅನುಭವಿಸಿದ ಹೀನಾಯ ಸೋಲು ಪಕ್ಷದೊಳಗೆ ದೊಡ್ಡ ಸಂಘರ್ಷವನ್ನೇ ನಿರ್ಮಾಣ ಮಾಡಿದ್ದು, ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಅತ್ಯಂತ ಆಪ್ತ ಹಾಗೂ ಟಿಎಂಸಿ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದ ಮಾಜಿ ಸಚಿವ ಪಾರ್ಥ ಚಟರ್ಜಿ (Partha Chatterjee) ಈಗ ದೀದಿ ಮತ್ತು ಅವರ ಸೋದರಳಿಯನ ವಿರುದ್ಧವೇ ಯುದ್ಧ ಸಾರಿದ್ದಾರೆ.
ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಾರ್ಥ ಚಟರ್ಜಿ, ಮಮತಾ ಬ್ಯಾನರ್ಜಿ ಎಲ್ಲಾ ಭ್ರಷ್ಟಾಚಾರಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಮತ್ತು ಇಂದಿನ ಈ ದುಸ್ಥಿತಿಗೆ ಮಮತಾ ಹಾಗೂ ಅಭಿಷೇಕ್ ಬ್ಯಾನರ್ಜಿ ಇಬ್ಬರೂ ನೇರ ಹೊಣೆಗಾರರಾಗಿದ್ದಾರೆ ಎಂದು ಪಾರ್ಥ ಚಟರ್ಜಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಕ್ಷ ಜನಸಾಮಾನ್ಯರಿಂದ ಸಂಪೂರ್ಣವಾಗಿ ದೂರವಾಗಿತ್ತು, ಚುನಾವಣೆಯ ಫಲಿತಾಂಶ ಬಂದ ಮೇಲಾದರೂ ಜನರ ತೀರ್ಪನ್ನು ಸ್ವೀಕರಿಸುವ ಕನಿಷ್ಠ ಸೌಜನ್ಯ ಪಕ್ಷಕ್ಕೆ ಇರಲಿಲ್ಲ ಎಂದು ನೇರವಾಗಿ ಚಾಟಿ ಬೀಸಿದ್ದಾರೆ.
ಪಕ್ಷದಲ್ಲಿ ನಂಬರ್ 2 ಸ್ಥಾನದಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಖಂಡಿಸಿರುವ ಚಟರ್ಜಿ, ಅಭಿಷೇಕ್ ನಮ್ಮ ಪಕ್ಷದ ಸಾಂಪ್ರದಾಯಿಕ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಲು ಯತ್ನಿಸಿದರು, ಚುನಾವಣಾ ಪ್ರಚಾರದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಅಭಿಷೇಕ್ ಬ್ಯಾನರ್ಜಿ ಬಳಸಿದ ಪದಗಳು ಅತ್ಯಂತ ಅವಹೇಳನಕಾರಿಯಾಗಿದ್ದವು, ಅದು ಬಂಗಾಳದ ರಾಜಕೀಯ ಸಂಸ್ಕೃತಿಗೆ ತಕ್ಕುದ್ದಾಗಿರಲಿಲ್ಲ, ಇಷ್ಟಾಗಿಯೂ ಪಕ್ಷ ಹಿರಿಯ ನಾಯಕರೆನಿಸಿಕೊಂಡವರು ಅವರನ್ನು ತಡೆಯಲಿಲ್ಲ ಎಂದು ಪರೋಕ್ಷವಾಗಿ ದೀದಿ ವಿರುದ್ಧ ಚಟರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಕ್ಷ ಎಂಬುದು ಯಾರದೋ ಒಬ್ಬರ ತರಬೇತಿ ಕೇಂದ್ರ ಅಥವಾ ಬೆಳೆಯುವ ಮೈದಾನವಾಗಬಾರದು ಎಂದಿರುವ ಪಾರ್ಥ ಚಟರ್ಜಿ, ಯಾರೂ ಕೂಡ ಒಂದೇ ದಿನದಲ್ಲಿ ನಾಯಕರಾಗಲು ಸಾಧ್ಯವಿಲ್ಲ, ಹೋರಾಟದ ಮೂಲಕ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿ ನಾಯಕರಾಗಬೇಕೇ ಹೊರತು ವಂಶಪಾರಂಪರ್ಯವಾಗಿ ಅಲ್ಲ ಎಂದು ದೀದಿ ಮತ್ತು ಅಭಿಷೇಕ ವಿರುದ್ಧ ಕಿಡಿಕಾರಿದ್ದಾರೆ.
2011 ರಲ್ಲಿ ಯುವ ಮೋರ್ಚಾ ಅಧ್ಯಕ್ಷರಾಗಿ, ಬಳಿಕ 2021 ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅಭಿಷೇಕ್ರ ಈ ವೇಗದ ಬೆಳವಣಿಗೆಯು ಮಮತಾ ಬ್ಯಾನರ್ಜಿಗೆ ದಶಕಗಳಿಂದ ನಿಷ್ಠರಾಗಿದ್ದ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿತ್ತು. ಈ ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು 2021 ರ ಚುನಾವಣೆಗೆ ಮುನ್ನವೇ ಹಿರಿಯ ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದರು. ಆಗ ಟಿಎಂಸಿ ಗೆದ್ದಾಗ ಕೆಲವರು ಮರಳಿ ಬಂದಿದ್ದರಾದರೂ, 2026ರ ಈ ಚುನಾವಣಾ ಸೋಲು ಪಕ್ಷದಲ್ಲಿ ಮತ್ತೊಮ್ಮೆ ಭಾರಿ ಬಂಡಾಯ ಮತ್ತು ಪಕ್ಷಾಂತರಕ್ಕೆ ಕಾರಣವಾಗಿದೆ. ಸದ್ಯ ಪಾರ್ಥ ಚಟರ್ಜಿಯವರ ಈ ಸ್ಫೋಟಕ ಹೇಳಿಕೆಗಳು ಟಿಎಂಸಿ ಪಕ್ಷದೊಳಗಿನ ಭಿನ್ನಮತವನ್ನು ಸಂಪೂರ್ಣವಾಗಿ ಬೀದಿಗೆ ತಂದಿದೆ(ಏಜೆನ್ಸೀಸ್).