Mamata Banerjee | ಸಿಎಂ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಕಾನೂನು ಸಮರ
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಭವಾನಿಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಮಂಗಳವಾರ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭವಾನಿಪುರ ಕ್ಷೇತ್ರವು ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ ಅವರ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು. ಇದರಲ್ಲಿ ಭರ್ಜರಿ ಜಯ ಸಾಧಿಸಿದ ಸುವೇಂದು ಅಧಿಕಾರಿ ಅವರು, ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ತೀವ್ರ ಕುತೂಹಲ ಮೂಡಿಸಿದ್ದ ಈ ಚುನಾವಣಾ ಕಣದಲ್ಲಿ ಮಮತಾ ಬ್ಯಾನರ್ಜಿ ಅವರು ಸುವೇಂದು ಅಧಿಕಾರಿ ವಿರುದ್ಧ ಸುಮಾರು 15,000 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಒಂದೇ ವಾರದಲ್ಲಿ ಘೋಷ್ ದಿಢೀರ್ ವಜಾ!
ಕೇವಲ ಒಂದು ವಾರದ ಹಿಂದಷ್ಟೇ ಪಕ್ಷದ ಯುವ ಘಟಕದ ಅಧ್ಯಕ್ಷೆಯನ್ನಾಗಿ ನೇಮಕವಾಗಿದ್ದ ಜಾದವ್‌ಪುರ ಸಂಸದೆ ಸಾಯೋನಿ ಘೋಷ್ ಅವರನ್ನು ಈಗ ದಿಢೀರ್ ಆಗಿ ಹುದ್ದೆಯಿಂದ ವಜಾಗೊಳಿಸಲಾಗಿದೆ. ಇದಷ್ಟೇ ಅಲ್ಲದೆ, ಕೋಲ್ಕತ್ತಾ ದಕ್ಷಿಣ ಸಂಸದೆ ಮಾಲಾ ರಾಯ್ ಅವರನ್ನು ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಅವರ ಜಾಗಕ್ಕೆ ನದಿಯಾ ಜಿಲ್ಲೆಯ ಕಾಲಿಗಂಜ್ ಶಾಸಕಿ ಅಲಿಫಾ ಅಹ್ಮದ್ ಅವರನ್ನು ತರಲಾಗಿದೆ.
ಮಮತಾ ಬ್ಯಾನರ್ಜಿ ಅವರು ಜೂನ್ 5 ರಂದು ಹೊಸ ಸಮಿತಿಯಲ್ಲಿ ಸ್ಥಾನ ನೀಡಿದ್ದ ಸಾಯೋನಿ ಘೋಷ್ ಮತ್ತು ಮಾಲಾ ರಾಯ್ ಇಬ್ಬರೂ ಈಗ ಬಂಡಾಯಗಾರರ ಗುಂಪು ಸೇರಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಟಿಎಂಸಿಯ ಒಟ್ಟು 28 ಲೋಕಸಭಾ ಸಂಸದರ ಪೈಕಿ ಬರೋಬ್ಬರಿ 20 ಸಂಸದರು ಮಮತಾ ಬ್ಯಾನರ್ಜಿ ವಿರುದ್ಧ ತಿರುಗಿಬಿದ್ದಿದ್ದಾರೆ. ಶನಿವಾರವಷ್ಟೇ ಹಿರಿಯ ಸಂಸದ ಸುದೀಪ್ ಬಂದೋಪಾಧ್ಯಾಯ ಕೂಡ ಈ ಬಂಡಾಯಗಾರರ ಕೈಜೋಡಿಸಿದ್ದರು.
ಸುದೀಪ್ ಬಂಡೋಪಾಧ್ಯಾಯ ನಿಭಾಯಿಸುತ್ತಿದ್ದ ಉತ್ತರ ಕೋಲ್ಕತ್ತಾ ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಬೆಲೆಘಾಟಾ ಸಂಸದ ಕುನಾಲ್ ಘೋಷ್ ಅವರನ್ನು ನೇಮಿಸಲಾಗಿದೆ. ಇನ್ನು ಮಮತಾ ಬ್ಯಾನರ್ಜಿ ಅವರಿಗೆ ನಿಷ್ಠರಾಗಿ ಉಳಿದಿರುವ ಕೇವಲ 8 ಲೋಕಸಭಾ ಸಂಸದರ ವಿಭಾಗಕ್ಕೆ ಹಿರಿಯ ಸಂಸದ ಸೌಗತ ರಾಯ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ನೇಮಕ ಮಾಡಿ ಮಮತಾ ಬ್ಯಾನರ್ಜಿ ತಮ್ಮ ಕೋಟೆಯನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸುತ್ತಿದ್ದಾರೆ(ಏಜೆನ್ಸೀಸ್).