Mamata Banerjee | ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ದೆಹಲಿ: ಸೋಮವಾರ (ಡಿ.9) ಲೋಕಸಭೆಯಲ್ಲಿ ಭಾಷಣ ಮಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಹೆಮ್ಮ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರನ್ನು ಬಂಕಿಮ್ ದಾ ಎಂದು ಉಲ್ಲೇಖಿಸುವ ಮೂಲಕ ಅವಮಾನಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೂಚ್ ಬಿಹಾರ್ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಬಂಗಾಳದ ಶ್ರೇಷ್ಠ ಸಾಂಸ್ಕೃತಿಕ ಪ್ರತಿಮೆಗಳಲ್ಲೊಬ್ಬರಾದ ವ್ಯಕ್ತಿಗೆ ಇದು ಅಗೌರವ ತೋರಿಸಿದಂತೆ, ಆದ್ದರಿಂದ ಕೂಡಲೇ ಪ್ರಧಾನಿ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಮಮತಾ ಒತ್ತಾಯಿಸಿದರು.
ತಮ್ಮ ಟೀಕೆ ರಾಜಕೀಯವಲ್ಲ ಎಂದಿರುವ ಸಿಎಂ ಮಮತಾ, ಬದಲಾಗಿ ಇದು ಬಂಗಾಳದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲಿನ ಗೌರವವನ್ನು ಆಧರಿಸಿದೆ, ಭಾರತದ ಬೌದ್ಧಿಕ ಮತ್ತು ರಾಷ್ಟ್ರೀಯತಾವಾದಿ ಚಳುವಳಿಗಳನ್ನು ರೂಪಿಸಿದ ವ್ಯಕ್ತಿಗಳನ್ನು ಉಲ್ಲೇಖಿಸುವಾಗ ನಾಯಕರಾದವರು ಜಾಗರೂಕರಾಗಿರಬೇಕು ಎಂದು ಕಿವಿ ಮಾತು ಹೇಳಿದರು. ಬಂಕಿಮ್ ಚಂದ್ರ ಎನ್ನುವುದು ಕೇವಲ ಹೆಸರಲ್ಲ, ಒಂದು ಭಾವನೆ, ಅವರು ನಮ್ಮ ಇತಿಹಾಸದಲ್ಲಿ ಸ್ಥಾನ ಪಡೆದಿರುವ ಅತ್ಯುನ್ನತ ವ್ಯಕ್ತಿ. ಯಾರೂ ಅವರನ್ನು ಹಗುರವಾಗಿ ಸಂಬೋಧಿಸಬಾರದು ಎಂದು ಹೇಳಿದರು.
ಪ್ರಧಾನಿ ಮೋದಿ ಹೇಳಿದ್ದೇನು?
ಲೋಕಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚಟ್ಟೋಪಾಧ್ಯಾಯ ಅವರನ್ನು ಬಂಕಿಮ್ ದಾ ಎಂದು ಉಲ್ಲೇಖಿಸಿದಾಗ ಈ ವಿವಾದ ಆರಂಭವಾಯಿತು. ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಟಿಎಂಸಿ ಸಂಸದ ಸೌಗತ ರಾಯ್, ಸ್ನೇಹಿತರು ಅಥವಾ ಪರಿಚಯಸ್ಥರಿಗೆ ಬಳಸುವ ಆಡುಮಾತಿನ ಪದವಲ್ಲ, ಬದಲಾಗಿ ಬಂಕಿಮ್ ಬಾಬು ಎಂಬ ಸರಿಯಾದ ಪದವನ್ನು ಬಳಸಬೇಕೆಂದು ಒತ್ತಾಯಿಸಿದರು.
ಸಂಸದ ರಾಯ್ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನಾನು ಬಂಕಿಮ್ ಬಾಬು ಎಂದು ಹೇಳುತ್ತೇನೆ. ಧನ್ಯವಾದಗಳು, ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ ಎಂದ ಬಳಿಕ, ನಾನು ನಿಮ್ಮನ್ನು ದಾದಾ ಎಂದು ಕರೆಯಬಹುದು, ಸರಿಯೇ? ಅಥವಾ ಅದು ಕೂಡ ಒಂದು ಸಮಸ್ಯೆಯೇ? ಎಂದ ಹಾಸ್ಯಭರಿತವಾಗಿ ಪ್ರಶ್ನಿಸಿದರು.
ತಮ್ಮ ಭಾಷಣವನ್ನು ಮುಂದುವರಿಸಿದ ಪ್ರಧಾನಿ ಮೋದಿ, ವಂದೇ ಮಾತರಂನ ಐತಿಹಾಸಿಕ ಮಹತ್ವದ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು. ಇದು ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಭಾರತದ ಹೋರಾಟಕ್ಕೆ ಸ್ಫೂರ್ತಿ ನೀಡಿದ ಪವಿತ್ರ ಕರೆ ಎಂದು ಬಣ್ಣಿಸುತ್ತಾ, ಈ ಗೀತೆಯ ಪ್ರಭಾವದಿಂದ ಬ್ರಿಟಿಷರು ಎಷ್ಟು ಬೆದರಿಕೆಗೆ ಒಳಗಾಗಿದ್ದರು ಎಂದರೆ ಅದನ್ನು ಹಾಡಲು ಅಥವಾ ಮುದ್ರಿಸಲು ಶಿಕ್ಷೆ ಸೇರಿದಂತೆ ಕಾನೂನು ನಿರ್ಬಂಧಗಳನ್ನು ಸಹ ವಿಧಿಸಿದರು ಎಂದು ಸದನದ ಗಮನಕ್ಕೆ ತಂದರು(ಏಜೆನ್ಸೀಸ್).