Babri Mosque 
ದೇಶ

Babri Mosque | ಬಾಬರಿ ಮಸೀದಿ ಮಾದರಿ ನಿರ್ಮಾಣಕ್ಕೆ ಟಿಎಂಸಿ ಶಾಸಕನ ನಿರ್ಧಾರ; ನಾನೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದ ರಾಜ್ಯಪಾಲರು

ದೆಹಲಿ: ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ಮಾದರಿಯ ಮಸೀದಿ ನಿರ್ಮಿಸುವ ಪಕ್ಷದ ಶಾಸಕ ಹುಮಾಯೂನ್ ಕಬೀರ್ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದ್ದು, ಟಿಎಂಸಿ ಮಸೀದಿ ನಿರ್ಮಾಣ ಕಾರ್ಯದ ವಿಷಯದಲ್ಲಿ ತಲೆ ಹಾಕುವುದಿಲ್ಲ ಎನ್ನುವ ಸಂದೇಶವನ್ನು ಶಾಸಕರಿಗೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಂಗಾಳ ಸಚಿವ ಬ್ರಾತ್ಯ ಬಸು, ಶಾಸಕ ಹುಮಾಯೂನ್ ಕಬೀರ್ ಅವರ ವಿಷಯವನ್ನು ಪಕ್ಷದ ಹಿರಿಯ ನಾಯಕರು ನೋಡಿಕೊಳ್ಳುತ್ತಾರೆ, ನಾಳೆ ಕಬೀರ್​ ಬಹರಂಪೋರ್‌ನಲ್ಲಿ ಮುಖ್ಯಮಂತ್ರಿಯವರ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಆ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಸಿಎಂ ಬ್ಯಾನರ್ಜಿ ಗುರುವಾರ ಭಾರತ-ಬಾಂಗ್ಲಾದೇಶ ಗಡಿ ಜಿಲ್ಲೆಯಾದ ಮುರ್ಷಿದಾಬಾದ್‌ನಲ್ಲಿ ಸಭೆ ನಡೆಸಲಿದ್ದಾರೆ. ಅಲ್ಲಿಂದ ಬಾಬರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6 ರಂದು ತೃಣಮೂಲ ಕಾಂಗ್ರೆಸ್ ಒಗ್ಗಟ್ಟಿನ ದಿನವನ್ನು ಆಚರಿಸಲು ಕರೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಹುಮಾಯೂನ್ ಕಬೀರ್ ಹೇಳಿಕೆಗಳು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ, ಆದರೂ ಕೂಡ ಸರ್ಕಾರ ಶಾಸಕರನ್ನು ಏಕೆ ಬಂಧಿಸುತ್ತಿಲ್ಲ ಎಂದು ಬಂಗಾಳ ರಾಜ್ಯಪಾಲ ಆನಂದ ಬೋಸ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಕ್ಷೇತ್ರ, ಗುಪ್ತಚರ ಸಂಸ್ಥೆಗಳು ಮತ್ತು ಸ್ಥಳೀಯ ನಾಯಕರಿಂದ ನನಗೆ ಬಂದಿರುವ ವರದಿಗಳು, ಮುರ್ಷಿದಾಬಾದ್​ನ್ನು ಯಾರೋ ಉದ್ದೇಶಪೂರ್ವಕವಾಗಿ ಹಗರಣದ ಕೇಂದ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿದರು. ಇದು ಕೇವಲ ಪೂಜಾ ಸ್ಥಳ ನಿರ್ಮಾಣದ ವಿಷಯವಲ್ಲ ಎಂದಿರುವ ರಾಜ್ಯಪಾಲರು, ಕೋಮು ಭಾವನೆಗಳನ್ನು ಕೆರಳಿಸಿದರೆ, ಕಬೀರ್​​ರನ್ನು ​ಮುಂಚಿತವಾಗಿ ಬಂಧಿಸಬೇಕಾಗುತ್ತದೆ. ಸರ್ಕಾರ ಕ್ರಮಕ್ಕೆ ಮುಂದಾಗದಿದ್ದರೆ, ರಾಜ್ಯಪಾಲರಾಗಿ ನಾನೇ ನನ್ನ ಅಧಿಕಾರ ಚಲಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಮುರ್ಷಿದಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಮಮತಾ ಬ್ಯಾನರ್ಜಿ ಜಿಲ್ಲಾಧಿಕಾರಿಗಳು ಮತ್ತು ಅನೇಕ ಸ್ಥಳೀಯ ನಾಯಕರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 6 ರ ಬಾಬರಿ ಮಸೀದಿಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲು ಶಾಸಕ ಕಬೀರ್​ಗೆ ಪೊಲೀಸ್ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಮುರ್ಷಿದಾಬಾದ್‌ ಜಿಲ್ಲೆಯ ರೆಜಿನಗರ ಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣಾ ಟಿಕೆಟ್‌ಗೆ ಚೌಕಾಶಿ ಮಾಡಲು ಶಾಸಕ ಕಬೀರ್​ ಈ ಒತ್ತಡ ತಂತ್ರ ಹೆಣೆದಿದ್ದಾರೆ, ಇದು ಶಾಸಕರ ನಾಟಕ ಎಂದು ತೃಣಮೂಲ ಕಾಂಗ್ರೆಸ್‌ನ ಜಿಲ್ಲಾ ನಾಯಕರೊಬ್ಬರು ಹೇಳಿಕೆ ನೀಡಿದ್ದು, ಈ ಹಿಂದೆಯೂ ಹುಮಾಯೂನ್ ಕಬೀರ್ ತಮ್ಮ ಆಯ್ಕೆಯ ಕ್ಷೇತ್ರ ಪಡೆಯಲು ಪಕ್ಷದ ಮೇಲೆ ಒತ್ತಡ ಹೇರಿದ್ದರು ಆದರೆ ಈ ಬಾರಿ ಪರಿಸ್ಥಿತಿ ಮೊದಲಿನ ರೀತಿಯಲ್ಲಿಲ್ಲ ಎಂದಿದ್ದಾರೆ(ಏಜೆನ್ಸೀಸ್​).