Mamata Banerjee | ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ರಾಜ್ಯದ ಪುರೋಹಿತರು ಮತ್ತು ಮ್ಯೂಜಿನ್‌ಗಳಿಗೆ ( ಇಸ್ಲಾಂ ಧರ್ಮದಲ್ಲಿ ಪ್ರಾರ್ಥನೆಗೆ ಕರೆ ನೀಡುವವರು) ನೀಡುತ್ತಿದ್ದ ಮಾಸಿಕ ಗೌರವಧನದಲ್ಲಿ 500 ರೂಪಾಯಿಯನ್ನು ಏರಿಕೆ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಚುನಾವಣೆ ಹೊಸ್ತಿಲಲ್ಲಿ ಮಹತ್ವದ ಘೋಷಣೆ ಹೊರಡಿಸಿದ್ದಾರೆ. ಈವರೆಗೆ ಲಭ್ಯವಿದ್ದ ಧನಸಹಾಯದ ಮೊತ್ತವು ಈಗ ತಿಂಗಳಿಗೆ 2,000 ರೂ.ಗಳಿಗೆ ಏರಿಕೆಯಾಗಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಘೊಷಣೆ ಮಾಡಿರುವ ಸಿಎಂ ದೀದಿ, ಸಮಾಜದ ಆಧ್ಯಾತ್ಮಿಕ ಮತ್ತು ಸಾಮಾಜಿಕ ಜೀವನವನ್ನು ಪೋಷಿಸುವಲ್ಲಿ ಈ ವರ್ಗದ ಸೇವೆ ಅನನ್ಯವಾದುದು ಎಂದು ಶ್ಲಾಘಿಸಿದ್ದಾರೆ. ಈ ಪರಿಷ್ಕರಣೆಯಷ್ಟೆ ಅಲ್ಲದೇ, ಪುರೋಹಿತರು ಮತ್ತು ಮ್ಯೂಜಿನ್‌ಗಳಿಂದ ಸಲ್ಲಿಕೆಯಾಗಿದ್ದ ಎಲ್ಲಾ ಹೊಸ ಅರ್ಜಿಗಳನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಅನುಮೋದಿಸಿದೆ ಎಂದು ಅವರು ತಿಳಿಸಿದ್ದಾರೆ.
ಟಿಎಂಸಿ ಸರ್ಕಾರ 2012 ರಲ್ಲಿ ಅಧಿಕಾರಕ್ಕೆ ಬಂದ ಒಂದು ವರ್ಷದ ಬಳಿಕ ಇಮಾಮ್‌ಗಳು ಮತ್ತು ಮ್ಯೂಜಿನ್‌ಗಳಿಗೆ ಮಾಸಿಕ ಗೌರವಧನವನ್ನು ಘೋಷಿಸಿತ್ತು. ಪ್ರಸ್ತುತ ಇಮಾಮ್‌ಗಳು 2,500 ರೂ. ಭತ್ಯೆ ಪಡೆಯುತ್ತಿದ್ದರೆ, ಮ್ಯೂಜಿನ್‌ಗಳು 2012 ರಿಂದ 1,000 ರೂ. ಸ್ಟೈಫಂಡ್ ಪಡೆಯುತ್ತಿದ್ದರು. ಈ ಹಿಂದೆ ಸರ್ಕಾರವು ನೇರವಾಗಿ ನೀಡುತ್ತಿದ್ದ ಭತ್ಯೆಯನ್ನು ನ್ಯಾಯಾಲಯವು ಸಂವಿಧಾನಬಾಹಿರ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೆಂದು ತೀರ್ಪು ನೀಡಿದಾಗ, ಸರ್ಕಾರವು ಅದನ್ನು ವಕ್ಫ್ ಮಂಡಳಿಯ ಮೂಲಕ ವಿತರಿಸಲು ಕ್ರಮ ಕೈಗೊಂಡಿತ್ತು.
ಇದಾದ ಬಳಿಕ 2021 ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು, ಬಿಜೆಪಿ ಸರ್ಕಾರದ ಮೇಲೆ ಅಲ್ಪಸಂಖ್ಯಾತರ ಓಲೈಕೆಯ ಆರೋಪಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿ, ಮಮತಾ ಬ್ಯಾನರ್ಜಿ 8,000 ಕ್ಕೂ ಹೆಚ್ಚು ಹಿಂದೂ ಪುರೋಹಿತರಿಗೆ ಮಾಸಿಕ 1,000 ರೂ. ನೆರವು ಮತ್ತು ಉಚಿತ ವಸತಿ ಯೋಜನೆಯನ್ನು ಘೋಷಿಸುವ ಮೂಲಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದರು.
ಚುನಾವಣೆಯ ಹೊಸ್ತಿಲಲ್ಲಿ ಹೊರಬಿದ್ದಿರುವ ಈ ಇತ್ತೀಚಿನ ಘೋಷಣೆಯು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು, ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ(ಎಂ) ಈ ನಿರ್ಧಾರವನ್ನು ಮತಕ್ಕಾಗಿ ನೀಡುತ್ತಿರುವ ಉಡುಗೊರೆ ಎಂದು ಕರೆದಿವೆ. ಸರ್ಕಾರವು ಅಭಿವೃದ್ಧಿಗಿಂತ ಹೆಚ್ಚಾಗಿ ಡೋಲ್ ರಾಜಕೀಯ (ಉಚಿತ ಕೊಡುಗೆಗಳ ರಾಜಕೀಯ) ಮೂಲಕ ಮತಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿವೆ(ಏಜೆನ್ಸೀಸ್).