Mamata Banerjee | ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಎಸ್‌ಐಆರ್ ಆತಂಕದಿಂದ ದಿನಕ್ಕೆ 3-4 ಜನರು ಸಾವಿಗೆ ಶರಣು; ಆಯೋಗ ಮತ್ತು ಸರ್ಕಾರದತ್ತ ಬೊಟ್ಟು ಮಾಡಿದ ದೀದಿ | Mamata Banerjee

ಕೋಲ್ಕತ್ತಾ: ಎಸ್​ಐಆರ್​ ವಿಷಯವಾಗಿ ಪಶ್ಚಿಮ ಬಂಗಾಳ ಸರ್ಕಾರ ಜನರಲ್ಲಿ ಆತಂಕ ಉಂಟ ಮಾಡುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಿದ ಒಂದು ದಿನದ ಬಳಿಕ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಮಾತನಾಡಿದ್ದಾರೆ.
ಶುಕ್ರವಾರ (ಜ.23) ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯ ಹಿನ್ನಲೆಯಲ್ಲಿ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಮಮತಾ, ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಆತಂಕದಿಂದಾಗಿ ರಾಜ್ಯದಲ್ಲಿ ಪ್ರತಿದಿನ ಮೂರರಿಂದ ನಾಲ್ಕು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಮತ್ತು ಈಗಾಗಲೇ 110 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಸಾವುಗಳಿಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಹೊಣೆಗಾರರನ್ನಾಗಿಸಿದ್ದಾರೆ.

ಬಂಗಾಳದ ವಿರುದ್ಧ ಪಿತೂರಿ: ದೀದಿ

ಬಿಜೆಪಿ ಬಂಗಾಳದ ವಿರುದ್ಧ ಪಿತೂರಿ ನಡೆಸುತ್ತಿದ್ದು, ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್, ಸುಭಾಷ್ ಚಂದ್ರ ಬೋಸ್ ಮತ್ತು ಬಿ ಆರ್ ಅಂಬೇಡ್ಕರ್​​ರನ್ನು ಅವಮಾನಿಸಲಾಗುತ್ತಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದರು. 49 ನೇ ಅಂತರರಾಷ್ಟ್ರೀಯ ಪುಸ್ತಕ ಮೇಳವನ್ನು ಉದ್ಘಾಟಿಸಿ ಮಾತನಾಡಿದ ದೀದಿ, ಮತದಾರರ ಪಟ್ಟಿಯ ಪರಿಷ್ಕರಣೆಯಿಂದಾಗಿ ಜನರು ಎದುರಿಸುತ್ತಿರುವ ಸಂಕಟದ ಕುರಿತು 26 ಕವಿತೆಗಳ ಸಂಕಲನವಾದ 162 ನೇ ಪುಸ್ತಕವು ಮೇಳದ ಈ ಆವೃತ್ತಿಯಲ್ಲಿ ಹೊರಬರಲಿದೆ ಎಂದು ಹೇಳಿದರು.
ಮುಂದುವರದು ಮಾತನಾಡಿದ ಸಿಎಂ ಮಮತಾ, ಹಿರಿಯ ನಾಗರಿಕರು ಸೇರಿದಂತೆ ಹಲವಾರು ಜನರು ವಿಶೇಷ ತೀವ್ರ ಪರಿಷ್ಕರಣಾ ಶಿಬಿರಗಳಲ್ಲಿ ವಿಚಾರಣೆಗಾಗಿ ಸಾಲುಗಟ್ಟಿ ನಿಲ್ಲಬೇಕಾಗುತ್ತದೆ ಮತ್ತು ಪ್ರತಿದಿನ ಐದು-ಆರು ಗಂಟೆಗಳ ಕಾಲ ಕಾಯಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು(ಏಜೆನ್ಸೀಸ್​).

ಎಸ್‌ಐಆರ್ ಗಡುವನ್ನು ವಿಸ್ತರಿಸುವ ಸಾಧ್ಯತೆ

ಚುನಾವಣಾ ಆಯೋಗ ಫೆಬ್ರವರಿ 14 ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು, ಆದರೆ, ಈ ಕಾಲಮಿತಿಯನ್ನು ಈಗ ವಿಸ್ತರಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಸುಪ್ರೀಂ ಕೋರ್ಟ್ ಹೊರಡಿಸಿದ ಕೆಲ ಸೂಚನೆಗಳಿಂದಾಗಿ ನಿಗದಿತ ಸಮಯದಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಷ್ಟವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸುಪ್ರೀಂ ಕೋರ್ಟ್‌ನ ಎಲ್ಲಾ ಸೂಚನೆಗಳನ್ನು ಈಗಿರುವ ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವುದು ಸವಾಲಿನ ಕೆಲಸ. ಹೆಚ್ಚುವರಿ ಸಮಯ ಬೇಕಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ(ಏಜೆನ್ಸೀಸ್​).