ಪಾಟ್ನಾ: ಬಿಹಾರದಲ್ಲಿ ಭಾನುವಾರ(ಅ. 25) ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುವಾಗ ಸಭಿಕರೊಬ್ಬರು, ಮೋದಿ ನಹೀಂ ಜಾಯೇಗಾ(ಅಧಿಕಾರದಿಂದ ಹೋಗುವುದಿಲ್ಲ) ಎಂದು ಹೇಳಿದ್ದಕ್ಕೆ, ಮೋದಿ ಅಷ್ಟೇ ಅಲ್ಲ, ಅವರಪ್ಪನೂ ಹೋಗಬೇಕಾಗುತ್ತದೆ ಎಂದು ಹೇಳಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಬಿಹಾರದ ಮೊದಲ ಮುಖ್ಯಮಂತ್ರಿ ಶ್ರೀ ಬಾಬು ಎಂದೇ ಖ್ಯಾತರಾಗಿದ್ದ ಕೃಷ್ಣ ಸಿಂಗ್ ಅವರ 139ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು, ಮೋದಿ ನಹೀಂ ಜಾಯೇಗಾ ಎಂದು ಕೂಗಿದ್ದಾರೆ. ತಕ್ಷಣ ಕೋಪಗೊಂಡಂತೆ ಕಂಡು ಬಂದಿರುವ ಖರ್ಗೆಯವರು, ಮೋದಿ ಕಾ ಬಾಪ್ ಭಿ ಜಾಯೇಗಾ(ಅವರ ತಂದೆಯೂ ಹೋಗಬೇಕಾಗುತ್ತದೆ) ಎಂದು ಒಂದೇ ಸಾಲನ್ನು ಮೂರು ಬಾರಿ ಪುನರಾವರ್ತಿಸಿ ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಮೋದಿ ಹೋಗಲ್ಲ ಎಂದು ಕೂಗಿದ ವ್ಯಕ್ತಿಯನ್ನು ಕಾಂಗ್ರೆಸ್ ಕಾರ್ಯಕರ್ತ ಸಂತೋಷ್ ಕುಮಾರ್ ಎಂದು ಗುರುತಿಸಲಾಗಿದೆ. ಈ ವೇಳೆ ಉಳಿದ ಕಾರ್ಯಕರ್ತರು ಅವರನ್ನು ಥಳಿಸಿ ಸಭಾಂಗಣದಿಂದ ಹೊರಹಾಕಿದ್ದಾರೆ.
ಇನ್ನೂ ಸಭಾಂಗಣದಿಂದ ಹೊರ ಹಾಕಿದ ಬಳಿಕ ಮಾತನಾಡಿರುವ ಸಂತೋಷ್ ಕುಮಾರ್, ದಂಗೆ ನಡೆಯದ ಹೊರತು ಮೋದಿ ಹೋಗುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಆದರೆ ವಾಕ್ಯದ ಒಂದು ಭಾಗವನ್ನು ಮಾತ್ರ ಖರ್ಗೆಯವರಿಗೆ ಕೇಳಿತು. ಇದರಿಂದಾಗಿ ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಯಿತು ಎಂದಿದ್ದಾರೆ.
ಮೋದಿಯವರ ಅಪ್ಪನೂ ಹೋಗಬೇಕಾಗುತ್ತದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಖರ್ಗೆಯವರ ವಿರುದ್ಧ ಕಿಡಿಕಾರಿರುವ ಬಿಜೆಪಿ, ಖರ್ಗೆ ಅವರು ಪ್ರಧಾನಿಯವರನ್ನು ಮತ್ತು ಅವರ ದಿವಂಗತ ತಂದೆಯನ್ನು ಮಾತ್ರವಲ್ಲದೆ, ದೇಶವನ್ನೇ ಅವಮಾನಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದೆ.
ಎಕ್ಸ್ನಲ್ಲಿ ಪೋಸ್ಟ್ ಹಾಕಿ ವಾಗ್ದಾಳಿ ನಡೆಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, ಖರ್ಗೆ ಅವರು ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ವರ್ತಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮೋದಿಜಿ ಅಥವಾ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸುತ್ತಿರುವುದು ಇದೇ ಮೊದಲ ಬಾರಿಯಲ್ಲ. ಅವರು ಮೋದಿಯವರ ತಾಯಿಯನ್ನು ನಿಂದಿಸಿದ್ದಾರೆ, 'ಮರಣದ ವ್ಯಾಪಾರಿ', 'ಚಾಯ್ವಾಲಾ'ಎಂದು ಕರೆಯುವ ಮೂಲಕ ಅವರ ಬಡತನವನ್ನು ಅಪಹಾಸ್ಯ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ಪಕ್ಷವು ಪ್ರತಿದಿನವೂ ಅಸಭ್ಯತೆಯ ಎಲ್ಲ ಮಿತಿಗಳನ್ನು ದಾಟುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).