ಮಲಯಾಳಂ ನಟ ಮಣಿಯನ್‌ಪಿಳ್ಳ ರಾಜು (ಚಿತ್ರ Instagram)
ತಿರುವನಂತಪುರಂ: ಮಲಯಾಳಂ ನಟ ಮಣಿಯನ್‌ಪಿಳ್ಳ ರಾಜುರವರ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ರಾಜು ತಮ್ಮ ಕಾರು ನಿಲ್ಲಿಸದೇ (Maniyanpilla Raju) ಸ್ಥಳದಿಂದ ಪರಾರಿಯಾಗಿರುವುದು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆಯ ಏನು?
ಗುರುವಾರ ತಡರಾತ್ರಿ (ಫೆ.05) ಮಣಿಯನ್‌ಪಿಳ್ಳ ರಾಜು ತಿರುವನಂತಪುರಂ ಕ್ಲಬ್‌ನಿಂದ ತಮ್ಮ ಕಾರಿನಲ್ಲಿ ಹೊರಬರುತ್ತಿದ್ದಾಗ, ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸವಾರರು ನೆಲಕ್ಕೆ ಬಿದ್ದು ಗಾಯಗೊಂಡಿದ್ದರೂ ಸಹ ನಟ ಕಾರು ನಿಲ್ಲಿಸದೇ ಹಾಗೇ ತೆರಳಿದ್ದಾರೆ ಎನ್ನುವುದು ಸ್ಥಳೀಯರು ಆರೋಪ.
ಶುಕ್ರವಾರ (ಫೆ.06) ನಟ ಮ್ಯೂಸಿಯಂ ಪೊಲೀಸ್ ಠಾಣೆಗೆ ಆಗಮಿಸಿ ನಡೆದ ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಘಾತದ ಬಳಿಕ ನಾನು ಭಯಭೀತನಾಗಿ ಮನೆಗೆ ಮರಳಿದೆ. ಈ ಹಿಂದೆ ನಾನು ಕ್ಯಾನ್ಸರ್ನಿಂದ ಬದುಕುಳಿದವನು ಮತ್ತು ಪ್ರಸ್ತುತ ಚಿಕನ್ಗುನ್ಯಾದಿಂದ ಬಳಲುತ್ತಿದ್ದೇನೆ ಎಂದು ಹೇಳಿದರು.
ಅಪಘಾತದ ಸಂದರ್ಭದಲ್ಲಿ ಗಾಯಗೊಂಡ ಯುವಕರಿಗೆ ಸಹಾಯ ಮಾಡಲು ಆಗ ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಅಲ್ಲಿದ್ದ ಜನರಿಗೆ ಸಹಾಯ ಮಾಡಲು ತಿಳಿಸಿದ್ದೆ ಎಂದು ಮಾಹಿತಿ ನೀಡಿದರು.
ಘಟನೆಗೆ ಸಂಬಂಧಪಟ್ಟಂತೆ ಮ್ಯೂಸಿಯಂ ಪೊಲೀಸರು ಮಣಿಯನ್‌ಪಿಳ್ಳ ರಾಜು ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 281 ಮತ್ತು 125(ಎ) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 134 (ಎ) ಮತ್ತು 134 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸುಧೀರ್ ಕುಮಾರ್ ಆಗಿ ಜನಿಸಿದ ಮಣಿಯನ್‌ಪಿಳ್ಳ ರಾಜು, 976 ರಲ್ಲಿ 'ಮೊಹಿನಿಯಟ್ಟಂ' ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅವರು 'ಮಣಿಯನ್‌ಪಿಳ್ಳ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯರಾದರು. ವರದಿಗಳ ಪ್ರಕಾರ, ಅವರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದ್ದಾರೆ (ಏಜೆನ್ಸೀಸ್).