ಕೇಂದ್ರ ಗೃಹಸಚಿವ ಅಮಿತ್ ಶಾ 
ದೇಶ

ಶೀಘ್ರದಲ್ಲೇ ಭಾರತದಿಂದ ಮಲೇರಿಯಾ ಸಂಪೂರ್ಣ ನಿರ್ಮೂಲನೆ; ಅಮಿತ್ ಶಾ | Amit Shah

ಅಹ್ಮದಾಬಾದ್: ಭಾರತದಲ್ಲಿ ಮಲೇರಿಯಾ ಪ್ರಕರಣಗಳು ಶೇ. 97ರಷ್ಟು ಕಡಿಮೆಯಾಗಿದ್ದು, ಶೀಘ್ರದಲ್ಲೇ ಭಾರತದಿಂದ ಅದು ನಿರ್ಮೂಲನೆ ಆಗಲಿದೆ ಎಂದು ಭಾನುವಾರ(ಡಿ. 28) ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಹೇಳಿದ್ದಾರೆ. 
ಅಹಮದಾಬಾದ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಯೋಜಿಸಿದ್ದ ಅಖಿಲ ಭಾರತ ವೈದ್ಯಕೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿರುವ ಅವರು, ಭಾರತದಲ್ಲಿ ಮಲೇರಿಯಾ ಪ್ರಕರಣಗಳು ಶೇಕಡಾ 97 ರಷ್ಟು ಕಡಿಮೆಯಾಗಿದೆ. ಆಯುಷ್ಮಾನ್ ಭಾರತ್ ಮತ್ತು ಮಿಷನ್ ಇಂದ್ರಧನುಷ್ ನಂತಹ ಕೇಂದ್ರ ಸರ್ಕಾರದ ಯೋಜನೆಗಳಿಂದ ಈ ಯಶಸ್ಸು ಸಾಧ್ಯವಾಗಿದೆ. ಶೀಘ್ರದಲ್ಲೇ ದೇಶದಿಂದ ಮಲೇರಿಯಾವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಕಾಸ್ ಭಾರತ್ -2047ರ ಗುರಿಯನ್ನು ಸಾಧಿಸಲು ಆರೋಗ್ಯವಂತ ಜನರು ಅಗತ್ಯ. ಅದಕ್ಕಾಗಿ ಸರ್ಕಾರಿ ಯೋಜನೆಗಳ ಗುರಿಯನ್ನು ಸಾಧಿಸಲು ವೈದ್ಯರು ಒಟ್ಟಾಗಿ ಕೆಲಸ ಮಾಡಬೇಕು. ಆರೋಗ್ಯ ಕ್ಷೇತ್ರದಲ್ಲಿ ಭಾರತ ತೆಗೆದುಕೊಂಡ ಕ್ರಮಗಳು ಜಗತ್ತಿಗೆ ಮಾದರಿಯಾಗಿವೆ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಡೆಂಗ್ಯೂ ಮರಣ ಪ್ರಮಾಣ ಶೇ.1 ರಷ್ಟು ಮತ್ತು ತಾಯಂದಿರ ಮರಣ ಸಂಖ್ಯೆ ಶೇ.25 ರಷ್ಟು ಕಡಿಮೆಯಾಗಿದೆ ಎಂದು ಶಾ ಮಾಹಿತಿ ನೀಡಿದ್ದಾರೆ.
2014ರಲ್ಲಿ 37,000 ಕೋಟಿ ರೂ.ಗಳೀದ್ದ ಕೇಂದ್ರ ಆರೋಗ್ಯ ಬಜೆಟ್‌ ಈಗ 1.28 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಳವಾಗಿರುವುದೇ ಈ ಸಾಧನೆಗಳಿಗೆ ಕಾರಣ. ನಾವು ಜೆನೆರಿಕ್ ಔಷಧಿಗಳನ್ನು ಕೈಗೆಟುಕುವಂತೆ ಮಾಡಿದ್ದೇವೆ. ಜಿಎಸ್‌ಟಿ ತೆಗೆದುಹಾಕುವ ಮೂಲಕ ಹಲವಾರು ಔಷಧಿಗಳ ಬೆಲೆಯನ್ನು ಕಡಿಮೆ ಮಾಡಿದ್ದೇವೆ. ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಿದ್ದೇವೆ. AIIMS (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ ಎಂದು ಹೇಳಿದ್ದಾರೆ (ಏಜೆನ್ಸೀಸ್).