ಮಾಸದ ಗಾಯಗಳು: 'ವಿಜಯವಾಣಿ' ಜತೆ ಪುತ್ರನ ನೆನಪು ಬಿಚ್ಚಿಟ್ಟ ಕೆ.ಉನ್ನಿಕೃಷ್ಣನ್-ಧನಲಕ್ಷ್ಮೀ ದಂಪತಿ 
ದೇಶ

ಮಾಸದ ಗಾಯಗಳು: 'ವಿಜಯವಾಣಿ' ಜತೆ ಪುತ್ರನ ನೆನಪು ಬಿಚ್ಚಿಟ್ಟ ಕೆ.ಉನ್ನಿಕೃಷ್ಣನ್-ಧನಲಕ್ಷ್ಮೀ ದಂಪತಿ

ಭಾರತದ ವಾಣಿಜ್ಯ ರಾಜಧಾನಿ ಮುಂಬೈ 2008ರ ನವೆಂಬರ್ 26ರ ರಾತ್ರಿ ತನ್ನ ಇತಿಹಾಸದ ಭೀಕರ ಭಯೋತ್ಪಾದಕ ದಾಳಿಗೆ ಸಾಕ್ಷಿಯಾಯಿತು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯ 10 ಶಸ್ತ್ರಸಜ್ಜಿತ ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈ ಪ್ರವೇಶಿಸಿ, ಸುಮಾರು 60 ಗಂಟೆಗಳ ಕಾಲ ಇಡೀ ನಗರವನ್ನು ಒತ್ತೆಯಾಳಾಗಿಸಿಕೊಂಡಿದ್ದರು. ‘26/11’ ಎಂದೇ ಕರೆಯಲ್ಪಡುವ ಈ ಘಟನೆ ಕೇವಲ ಮುಂಬೈ ಮೇಲಿನ ದಾಳಿಯಾಗಿರಲಿಲ್ಲ, ಅದು ಭಾರತದ ಸಾರ್ವಭೌಮತ್ವ ಮತ್ತು ಆಂತರಿಕ ಭದ್ರತಾ ವ್ಯವಸ್ಥೆಗೆ ಎದುರಾದ ಬಹುದೊಡ್ಡ ಸವಾಲಾಗಿತ್ತು.

ನವೆಂಬರ್ 26ರ ರಾತ್ರಿ ಏನೆಲ್ಲ ನಡೆಯಿತು?

ಕರಾಚಿಯಿಂದ 2008ರ ನವೆಂಬರ್ 21ರಂದು ದೋಣಿಯ ಮೂಲಕ ಹೊರಟ ಹತ್ತು ಉಗ್ರರು, ಮಾರ್ಗಮಧ್ಯೆ ಭಾರತೀಯ ಮೀನುಗಾರಿಕಾ ದೋಣಿ ‘ಕುಬೇರ್’ ಅನ್ನು ಅಪಹರಿಸಿ, ಅದರ ಕ್ಯಾಪ್ಟನ್​ನನ್ನು ಹತ್ಯೆಗೈದು ನವೆಂಬರ್ 26ರ ಸಂಜೆ ಮುಂಬೈ ತೀರವನ್ನು ತಲುಪಿದರು. ಬದ್ವಾರ್ ಪಾರ್ಕ್ ಮತ್ತು ಸಸೂನ್ ಡಾಕ್ ಬಳಿ ಇಳಿದ ಉಗ್ರರು ನಾಲ್ಕು ತಂಡಗಳಾಗಿ ವಿಭಜನೆಗೊಂಡು ದಕ್ಷಿಣ ಮುಂಬೈನ ಪ್ರಮುಖ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು.

ಛತ್ರಪತಿ ಶಿವಾಜಿ ಮಹಾರಾಜ್ ಟರ್ವಿುನಸ್ (ಸಿಎಸ್​ಎಂಟಿ): ಅಜ್ಮಲ್ ಕಸಬ್ ಮತ್ತು ಅಬು ಇಸ್ಮಾಯಿಲ್ ಎಂಬ ಇಬ್ಬರು ಉಗ್ರರು ಜನನಿಬಿಡ ರೈಲುನಿಲ್ದಾಣಕ್ಕೆ ನುಗ್ಗಿ ಎಕೆ-47 ರೈಫಲ್​ಗಳಿಂದ ಮನಬಂದಂತೆ ಗುಂಡು ಹಾರಿಸಿದರು. ಇಲ್ಲಿ 58 ಮುಗ್ಧ ಪ್ರಯಾಣಿಕರು ಪ್ರಾಣ ಕಳೆದುಕೊಂಡರು. ನಂತರ ಉಗ್ರರು ಕಾಮಾ ಆಸ್ಪತ್ರೆಯ ಮೇಲೂ ದಾಳಿ ನಡೆಸಿದರು.

ಲಿಯೋಪೋಲ್ಡ್ ಕೆಫೆ ಮತ್ತು ನಾರಿಮನ್ ಹೌಸ್

ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಲಿಯೋಪೋಲ್ಡ್ ಕೆಫೆಯ ಮೇಲೆ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದ ಉಗ್ರರು, ಯಹೂದಿ ಸಮುದಾಯದ ಕೇಂದ್ರವಾದ ‘ನಾರಿಮನ್ ಹೌಸ್’ಗೆ ನುಗ್ಗಿ ಹಲವರನ್ನು ಒತ್ತೆಯಾಳಾಗಿಸಿಕೊಂಡರು. ತಾಜ್ ಮಹಲ್ ಪ್ಯಾಲೇಸ್ ಮತ್ತು ಒಬೆರಾಯ್ ಟ್ರೖೆಡೆಂಡ್ ಹೋಟೆಲ್: ಮುಂಬೈನ ಹೆಮ್ಮೆಯ ಪ್ರತೀಕವಾದ ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೖೆಡೆಂಡ್ ಹೋಟೆಲ್​ಗಳಿಗೆ ನುಗ್ಗಿದ ಉಗ್ರರು ಗ್ರೆನೇಡ್ ಸ್ಪೋಟಿಸಿ, ಬೆಂಕಿ ಹಚ್ಚಿ ನೂರಾರು ಅತಿಥಿಗಳು ಹಾಗೂ ಸಿಬ್ಬಂದಿಯನ್ನು ಒತ್ತೆಯಾಳಾಗಿಸಿಕೊಂಡರು.

ಈ ಭೀಕರ ದಾಳಿಯಲ್ಲಿ 26 ವಿದೇಶಿಯರು ಮತ್ತು 20 ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಅಮಾಯಕರು ಪ್ರಾಣ ಕಳೆದುಕೊಂಡರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡರು. ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹಾಗೂ ಉಗ್ರ ಕಸಬ್​ನನ್ನು ಜೀವಂತವಾಗಿ ಹಿಡಿಯಲು ತನ್ನ ಪ್ರಾಣವನ್ನೇ ಅರ್ಪಿಸಿದ ತುಕಾರಾಂ ಓಂಬ್ಳೆ ಅವರಂತಹ ವೀರಯೋಧರು ದೇಶಕ್ಕಾಗಿ ಹುತಾತ್ಮರಾದರು.

ನವೆಂಬರ್ 29ರ ಬೆಳಗ್ಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ) ಕಮಾಂಡೋಗಳು ‘ಆಪರೇಷನ್ ಬ್ಲಾ್ಯಕ್ ಟೊರ್ನಾಡೊ’ ಮೂಲಕ ಎಲ್ಲ 9 ಉಗ್ರರನ್ನು ಹೊಡೆದುರುಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು, ಕಸಬ್​ನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು.

ಭಯೋತ್ಪಾದನೆ ವಿರುದ್ಧದ ಹೋರಾಟದ ದಿಕ್ಕು

ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವು 26/11ರ ನಂತರ ಕೇವಲ ರಕ್ಷಣಾತ್ಮಕವಾಗಿರದೆ ಆಕ್ರಮಣಕಾರಿ ಮತ್ತು ರಾಜತಾಂತ್ರಿಕ ಆಯಾಮಗಳನ್ನು ಪಡೆದುಕೊಂಡಿತು. ಅಜ್ಮಲ್ ಕಸಬ್​ನನ್ನು ಜೀವಂತವಾಗಿ ಸೆರೆಹಿಡಿದಿದ್ದು ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಅಸ್ತ್ರವಾಯಿತು. ಪಾಕಿಸ್ತಾನದ ನೆಲದಿಂದಲೇ ಈ ಸಂಚು ರೂಪಿಸಲಾಗಿದೆ ಎಂಬುದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಸಾಬೀತುಪಡಿಸಲು ಭಾರತಕ್ಕೆ ಸಾಧ್ಯವಾಯಿತು. ಕಸಬ್​ಗೆ ಪಾರದರ್ಶಕ ನ್ಯಾಯಾಂಗ ವಿಚಾರಣೆ ನಡೆಸಿ 2012ರಲ್ಲಿ ಗಲ್ಲಿಗೇರಿಸಲಾಯಿತು.

ತದನಂತರದ ವರ್ಷಗಳಲ್ಲಿ ಭಾರತವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು ಮತ್ತಷ್ಟು ಕಠಿಣಗೊಳಿಸಿತು. ಅಲ್ಲದೆ, ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರತ್ಯುತ್ತರವಾಗಿ ಸರ್ಜಿಕಲ್ ಸ್ಟ್ರೈಕ್​ ಮತ್ತು ಬಾಲಾಕೋಟ್ ವಾಯುದಾಳಿಯಂತಹ ದಿಟ್ಟ ನಿರ್ಧಾರಗಳ ಮೂಲಕ ಸಹನೆಯ ನೀತಿಯಿಂದ ಪ್ರತಿದಾಳಿಯ ನೀತಿಗೆ ಭಾರತ ಹೊರಳಿತು. ತಾಂತ್ರಿಕವಾಗಿ ಸೈಬರ್ ಭದ್ರತೆ ಮತ್ತು ಹಣಕಾಸು ವರ್ಗಾವಣೆಯ ಮೇಲೆ ಹದ್ದಿನ ಕಣ್ಣಿಡುವ ಮೂಲಕ ಉಗ್ರರ ಜಾಲವನ್ನು ಕತ್ತರಿಸುವ ಕೆಲಸ ನಿರಂತರವಾಗಿ ನಡೆದಿದೆ.

ದಾಳಿಯ ನಂತರ ಆದ ಮಹತ್ವದ ಬದಲಾವಣೆಗಳು

ಭಾರತದ ಗುಪ್ತಚರ ಮತ್ತು ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವನ್ನು 26/11 ದಾಳಿಯು ಮನಗಾಣಿಸಿತು. ಭಯೋತ್ಪಾದಕ ಕೃತ್ಯಗಳ ತನಿಖೆಗಾಗಿ ರಾಜ್ಯಗಳ ಗಡಿಯ ಹಂಗಿಲ್ಲದೆ ಕಾರ್ಯನಿರ್ವಹಿಸುವ ಕೇಂದ್ರೀಯ ಸಂಸ್ಥೆಯಾಗಿ 2008ರ ಡಿಸೆಂಬರ್​ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಸ್ತಿತ್ವಕ್ಕೆ ಬಂದಿತು. ಮುಂಬೈ, ಚೆನ್ನೆ ೖ, ಹೈದರಾಬಾದ್ ಮತ್ತು ಕೋಲ್ಕತ್ತಗಳಲ್ಲಿ ಎನ್​ಎಸ್​ಜಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಕರಾವಳಿಯುದ್ದಕ್ಕೂ ರಾಡಾರ್ ಕೇಂದ್ರಗಳು, ಹೈ-ಸ್ಪೀಡ್ ಗಸ್ತು ಬೋಟ್​ಗಳು ಮತ್ತು ಮೀನುಗಾರಿಕಾ ದೋಣಿಗಳಿಗೆ ಬಯೋಮೆಟ್ರಿಕ್ ಗುರುತಿನ ಚೀಟಿ ಹಾಗೂ ಟ್ರಾನ್ಸ್​ಪಾಂಡರ್​ಗಳನ್ನು ಕಡ್ಡಾಯಗೊಳಿಸಲಾಯಿತು. ವಿವಿಧ ಭದ್ರತಾ ಸಂಸ್ಥೆಗಳ ನಡುವೆ ತಕ್ಷಣವೇ ಮಾಹಿತಿ ಹಂಚಿಕೊಳ್ಳಲು ‘ನ್ಯಾಟ್​ಗ್ರಿಡ್’ ಮತ್ತು ‘ಮಲ್ಟಿ ಏಜೆನ್ಸಿ ಸೆಂಟರ್’ ವ್ಯವಸ್ಥೆಯನ್ನು ಬಲಪಡಿಸಲಾಯಿತು.

ಅದು ಅಸಾಮಾನ್ಯ ತ್ಯಾಗ

| ಹರ್ಷವರ್ಧನ್ ಬ್ಯಾಡನೂರು

ಆ ದಂಪತಿಗೆ ಒಬ್ಬನೇ ಮಗ. ಚೆನ್ನಾಗಿ ಓದಿ, ದೊಡ್ಡ ಕೆಲಸಕ್ಕೆ ಸೇರಿದ. ಕೊನೆಯ ದಿನಗಳಲ್ಲಿ ಆಸರೆಯಾಗುತ್ತಾನೆ ಎಂಬ ಆಸೆ ಆ ದಂಪತಿಗೆ. ಆದರೆ, ಆತ ಆಯ್ಕೆ ಮಾಡಿಕೊಂಡಿದ್ದು ಭಾರತೀಯ ಸೇನೆಯನ್ನು. ಇರುವ ಒಬ್ಬನೇ ಮಗನನ್ನು ಆತನ ಆಸೆಯಂತೆ ಹಿಂಜರಿಕೆಯಲ್ಲೇ ಸೇನೆಗೆ ಕಳುಹಿಸಿಕೊಟ್ಟರು. ದಕ್ಷತೆ, ಶೌರ್ಯ, ಪ್ರಾಮಾಣಿಕತೆಯಿಂದ ಎನ್​ಎಸ್​ಜಿ ಕಮಾಂಡೋ ಆಗಿ ನಂತರ ಮೇಜರ್ ಕೂಡ ಆದರು. ಅದೇ ಸಮಯದಲ್ಲಿ 2008ರ ನವೆಂಬರ್ 26ರಂದು ಮುಂಬೈನಲ್ಲಿ ಉಗ್ರರ ದಾಳಿಯಾಯಿತು. 14 ಒತ್ತೆಯಾಳುಗಳನ್ನು, ಗಾಯಗೊಂಡಿದ್ದ ಕೆಲ ಕಮಾಂಡೋಗಳನ್ನು ರಕ್ಷಿಸಿ, ಉಗ್ರರ ಬೆನ್ನು ಹತ್ತಿದರು. ಆದರೆ, ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದರು. ಅವರೇ ಮೇಜರ್ ಸಂದೀಪ್ ಉನ್ನಿಕೃಷ್ಣನ್. ಈ ದುರಂತ ನಡೆದು ಇಂದಿಗೆ 18 ವರ್ಷ. ಎಲ್ಲರೂ ತಮ್ಮ ಜೀವನದಲ್ಲಿ ಬಿಜಿಯಾಗಿದ್ದಾರೆ. ಆದರೆ, ಮಗನ ನೆನಪಿನಲ್ಲಿರುವ ಕೆ.ಉನ್ನಿಕೃಷ್ಣನ್ ಮತ್ತು ಧನಲಕ್ಷ್ಮೀ ದಂಪತಿ ಇಳಿವಯಸ್ಸಿನಲ್ಲೂ ಮಗನಿಗಾಗಿ, ಮಗನಿಂದಾಗಿ ಓಡಾಡುತ್ತಿದ್ದಾರೆ.

ಲಾಸ್ ಈಸ್ ಪರ್ಸನಲ್: ನಿವೃತ್ತ ಇಸ್ರೋ ಉದ್ಯೋಗಿ 80 ವರ್ಷದ ಕೆ. ಉನ್ನಿಕೃಷ್ಣನ್ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ. ‘ಇವತ್ತು ಸಂದೀಪ್ ಬದುಕಿದ್ದರೆ 49 ವರ್ಷವಾಗಿರುತ್ತಿತ್ತು. ಅವನನ್ನು ಕಳೆದುಕೊಂಡಿರುವುದು ಸಹಿಸಲು ಅಸಾಧ್ಯ. ಪ್ರತಿ ವರ್ಷ ಮಾರ್ಚ್ 15ರಂದು ಮನೆಯ ಬಳಿ ಹುಟ್ಟುಹಬ್ಬ ಆಚರಿಸುತ್ತೇವೆ. ಆತ ಬದುಕಿದ್ದಾಗ ಕೇಕ್ ಕಟ್ ಮಾಡುತ್ತಿರಲಿಲ್ಲ. ಬದಲಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೆವು. ಹೀಗಾಗಿಯೇ ಈಗ ಹೀಗೆ ಹುಟ್ಟುಹಬ್ಬ ಆಚರಿಸುತ್ತಿದ್ದೇವೆ. ಆತ ಕೊನೆಯುಸಿರೆಳೆದ ತಾಜ್ ಹೋಟೆಲ್​ನಲ್ಲಿ ಪ್ರತಿ ನ.28ರಂದು ಇರುತ್ತೇವೆ. ಜತೆಗೆ ಮುಂಬೈ ಪೊಲೀಸರು ಕಳೆದ ವರ್ಷದಿಂದ ದೊಡ್ಡ ಮಟ್ಟದ ಕಾರ್ಯಕ್ರಮ ನಡೆಸುತ್ತಿದ್ದಾರೆ. ಕಾಲೇಜು, ಶಾಲಾ ಕಾರ್ಯಕ್ರಮಗಳಿಗೆ ಆಮಂತ್ರಿಸುತ್ತಾರೆ. ಈಗ ವಯಸ್ಸು 80 ಆಗಿದೆ. ಹೀಗಾಗಿ ಹೆಚ್ಚು ಕಾರ್ಯಕ್ರಮಗಳಿಗೆ ಹೋಗುತ್ತಿಲ್ಲ’. ‘ಸೇನೆ ಸೇರುವುದಷ್ಟೇ ಸಾಧನೆಯಲ್ಲ’ ಎನ್ನುವ ಕೆ.ಉನ್ನಿಕೃಷ್ಣನ್, ‘ದೇಶಕ್ಕಾಗಿ ಮಡಿಯುವುದು ಸಾಧನೆ.

ಸಂದೀಪ್​ನಲ್ಲಿ ನಾಯಕತ್ವದ, ಮತ್ತೊಬ್ಬರಿಗೆ ಸಹಾಯ ಮಾಡುವ ಹಲವು ಒಳ್ಳೆಯ ಗುಣಗಳಿದ್ದವು. ಆತ ಸೇನೆ ಸೇರಿದ ಪ್ರಾರಂಭದಲ್ಲಿ ನಮಗೂ ಭಯವಿತ್ತು. ಆದರೆ, ಆತ ತನ್ನ ಕರ್ತವ್ಯದ ಬಗ್ಗೆ ಅತೀವ ಗೌರವ ಹೊಂದಿದ್ದ. ತಾನು ಹೇಳಿದ್ದನ್ನು ಮಾಡುತ್ತಿದ್ದ. ಪ್ರಾಮಾಣಿಕನಾಗಿದ್ದ. ಒಂದು ಹೆಜ್ಜೆ ಮುಂದಿಟ್ಟ ಬಳಿಕ ಯಾವುದೇ ಕಾರಣಕ್ಕೂ ಹಿಂದಕ್ಕೆ ಹೋಗಬಾರದು ಅಂತ ಮುನ್ನುಗ್ಗಿದ್ದ. ಆತನ ಬೆಟಾಲಿಯನ್ ಪ್ರಕಾರ ಆತ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ, ದೇಶಕ್ಕಾಗಿ ಹುತಾತ್ಮನಾದ. ಹೀಗಾಗಿಯೇ ಜನರು ನಮ್ಮನ್ನು ಇವತ್ತಿಗೂ ಗುರುತಿಸುತ್ತಿದ್ದಾರೆ. ನಮ್ಮನ್ನು ನೋಡಿ ಸೆಲ್ಯೂಟ್ ಮಾಡುತ್ತಾರೆ. ಧನ್ಯವಾದ ತಿಳಿಸುತ್ತಾರೆ. ಮನೆಯ ಹೊರಗೆ ನಮ್ಮ ಕಡೆ ತಿರುಗಿ ಸೆಲ್ಯೂಟ್ ಮಾಡಿ ಹೋಗುತ್ತಾರೆ. ಅದು ನಮ್ಮ ಸಾಧನೆ ಅಲ್ಲ. ಮಗನ ಸಾಧನೆ. ಈ ಇಳಿವಯಸ್ಸಿನಲ್ಲೂ ಇಷ್ಟು ಓಡಾಡಲು ಸಂದೀಪ್ ಕಾರಣ. ಆತ ಮಾಡಿದ ಕೆಲಸಗಳು ಕಾರಣ’ ಎಂದು ಹೆಮ್ಮೆಯಿಂದ ಹೇಳಿದರು.

ಯುದ್ಧವಾದರೆ, ಮೊದಲು ನಾನೇ ನುಗ್ಗುವೆ!

ಮಗನ ಧೈರ್ಯ-ಸ್ಥೈರ್ಯಗಳ ಬಗ್ಗೆ ತಾಯಿ ಧನಲಕ್ಷ್ಮೀ ಉನ್ನಿಕೃಷ್ಣನ್ ಮಾತನಾಡಿ, ‘ಸಂದೀಪ್ 1999ರಲ್ಲಿ ನನ್ನ ಬಳಿ ಬಂದು ‘ಅಮ್ಮ ಯುದ್ಧದ ಪರಿಸ್ಥಿತಿ ಬಂದಾಗ, ನನ್ನ ಜಾಗದಲ್ಲಿ ಬೇರೆಯವರನ್ನು ಕಳುಹಿಸುವುದಿಲ್ಲ. ನಾನೇ ಮುಂದೆ ನಿಂತು ನಮ್ಮವರನ್ನು ಉಳಿಸಲು ಶತಪ್ರಯತ್ನ ಮಾಡುತ್ತೇನೆ’ ಎಂದಿದ್ದ. ಅದನ್ನೇ ಮಾಡಿದ ಕೂಡ. ಎಲ್ಲ ವೃತ್ತಿಯಲ್ಲೂ ನೂರಕ್ಕೆ ನೂರು ಕೊಡಬೇಕು. ಆದರೆ, ಸೈನ್ಯದಲ್ಲಿ ನೂರಕ್ಕೆ ನೂರು ಕೊಡುವುದು ಅಂದರೆ ಅದಕ್ಕೆ ಸಾವನ್ನು ಎದುರಿಸುವ ಧೈರ್ಯ ಬೇಕು. ಆತ ತನ್ನ ಕರ್ತವ್ಯವನ್ನು ನೂರಕ್ಕೆ ನೂರು ಮಾಡಿದ್ದಾನೆ. ಆತ ಮಾಡಿರುವ ಕೆಲಸ ಹೆಮ್ಮೆ ತರುವಂಥದ್ದೇ. ಆದರೆ, ನಾವು ವೈಯಕ್ತಿಕವಾಗಿ ಆತನನ್ನು ಕಳೆದುಕೊಂಡಿದ್ದೇವೆ. ಆ ನಷ್ಟವನ್ನು ಈಗಲೂ ಅನುಭವಿಸುತ್ತಿದ್ದೇವೆ. ದೇಶದ ದೃಷ್ಟಿಯಿಂದ ನೋಡಿದಾಗ ಅದನ್ನು ನಷ್ಟ ಎನ್ನಲಾಗುವುದಿಲ್ಲ’ ಎಂದು ಭಾವುಕರಾದರು. ಅವರೊಂದಿಗೆ ಧ್ವನಿಗೂಡಿಸಿದ ಕೆ.ಉನ್ನಿಕೃಷ್ಣನ್, ‘ನಾವು ದೇಶಭಕ್ತರಲ್ಲ, ದೇಶಭಕ್ತರನ್ನು ರಕ್ಷಿಸುವವರು. ಹೀಗಾಗಿ ನಾವು ಅವರನ್ನೂ ಮೀರಿದವರು. ಈ ದೇಶದಲ್ಲಿ ಹುಟ್ಟಿರುವವರೆಲ್ಲರೂ ದೇಶಭಕ್ತರೇ. ಎಲ್ಲರನ್ನೂ ಕಾಪಾಡುವುದು ನಮ್ಮ ಕರ್ತವ್ಯ ಎನ್ನುತ್ತಿದ್ದ ಸಂದೀಪ್. ಹೀಗಾಗಿ ಆತನಲ್ಲಿ ತನ್ನ ಕೆಲಸದ ಬಗ್ಗೆ ವಿಶೇಷ ಗೌರವ, ಹೆಮ್ಮೆಯಿತ್ತು’ ಎಂದರು.