Omraje Nimbalkar | ಧಾರಾಶಿವ್ ಲೋಕಸಭಾ ಕ್ಷೇತ್ರದ ಸಂಸದ ಓಮರಾಜೆ ನಿಂಬಾಳ್ಕರ್
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಬಣಕ್ಕೆ ಚೇತರಿಸಿಕೊಳ್ಳಲಾಗದ ಆಘಾತ ಎದುರಾಗಿದ್ದು, ಧಾರಾಶಿವ್ ಲೋಕಸಭಾ ಕ್ಷೇತ್ರದ ಸಂಸದ ಓಮರಾಜೆ ನಿಂಬಾಳ್ಕರ್ (Omraje Nimbalkar) ಉದ್ಧವ್ ಬಣ ತೊರೆದು, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನಾ ಪಕ್ಷವನ್ನು ಸೇರಿದ್ದಾರೆ.
ಇಂದು ಗೋವರ್ಧನವಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ಬೆಂಬಲಿಗರು ಹಾಗೂ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಿಂಬಾಳ್ಕರ್, ಕ್ಷೇತ್ರದ ಜನರ ಮತ್ತು ಕಾರ್ಯಕರ್ತರ ಆಶಯದಂತೆ ಇನ್ಮುಂದೆ ಡಿಸಿಎಂ ಏಕನಾಥ್ ಶಿಂಧೆ ಅವರ ನಾಯಕತ್ವದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದೇನೆ ಎಂದು ಅಧಿಕೃತವಾಗಿ ಘೋಷಿಸಿದರು.
ಆಪರೇಷನ್ ಟೈಗರ್ ಸಸ್ಪೆನ್ಸ್: ಸ್ಪೀಕರ್‌ಗೆ ಪತ್ರ ಬರೆದ 6 ಸಂಸದರು!
ಓಮರಾಜೆ ನಿಂಬಾಳ್ಕರ್ ಅವರ ಈ ನಿರ್ಧಾರದ ಬೆನ್ನಲ್ಲೇ ಮಹಾರಾಷ್ಟ್ರ ರಾಜಕೀಯದಲ್ಲಿ ಕೇಳಿಬರುತ್ತಿದ್ದ ಆಪರೇಷನ್ ಟೈಗರ್ ವದಂತಿ ನಿಜವಾಗುವತ್ತ ಸಾಗಿದೆ. ದೆಹಲಿಯಲ್ಲಿ ನಡೆದ ಉದ್ಧವ್ ಬಣದ ಸಂಸದೀಯ ಸಭೆಗೆ ಒಟ್ಟು 9 ಸಂಸದರ ಪೈಕಿ 6 ಸಂಸದರು ಗೈರುಹಾಜರಾಗುವ ಮೂಲಕ ತಮ್ಮ ರಾಜಕೀಯ ಸಂದೇಶವನ್ನು ಪರೋಕ್ಷವಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೆ, ಈ ಆರು ಜನ ಬಂಡಾಯ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಮಗೆ ಪ್ರತ್ಯೇಕ ಗುಂಪಾಗಿ ಗುರುತಿಸಿಕೊಳ್ಳಲು ಅನುಮತಿ ನೀಡಬೇಕೆಂದು ಪತ್ರ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ, ಈ ಸಂಸದರು ಶೀಘ್ರದಲ್ಲೇ ಅಧಿಕೃತವಾಗಿ ಶಿಂಧೆ ಬಣದೊಂದಿಗೆ ವಿಲೀನಗೊಂಡು, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ (NDA) ಸರ್ಕಾರಕ್ಕೆ ಬೆಂಬಲ ಘೋಷಿಸಲಿದ್ದಾರೆ ಎನ್ನಲಾಗಿದೆ.
ಒಂದೇ ಶಿವಸೇನಾ, ಅದು ಶಿಂಧೆ ಅವರದ್ದು!
ನಿನ್ನೆ ಕೊಲ್ಲಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉದ್ಧವ್ ಠಾಕ್ರೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈಗ ಮಹಾರಾಷ್ಟ್ರದಲ್ಲಿ ಯಾವುದೇ ಬಣಗಳಿಲ್ಲ. ಮುಂಚೆ ಏಕನಾಥ್ ಶಿಂಧೆ ಬಣ ಎನ್ನಬೇಕಿತ್ತು, ಆದರೆ ಈಗ ಇರುವುದು ಒಂದೇ ಒಂದು ಅಸಲಿ ಶಿವಸೇನಾ, ಅದು ಶಿಂಧೆ ನೇತೃತ್ವದ್ದು ಎಂದು ಲೇವಡಿ ಮಾಡಿದರು. ಇದೇ ವೇದಿಕೆಯಲ್ಲಿ ಕೊಲ್ಲಾಪುರದ ಮಹಾಲಕ್ಷ್ಮಿ (ಅಂಬಾಬಾಯಿ) ದೇವಸ್ಥಾನದ ಕಾರಿಡಾರ್ ಅಭಿವೃದ್ಧಿ ಹಾಗೂ ನವೀಕರಣ ಕಾರ್ಯವನ್ನು ಶ್ಲಾಘಿಸಿದ ಅಮಿತ್ ಷಾ, ಪ್ರಧಾನಿ ಮೋದಿಯವರ ವಿಕಾಸ್ ಭಿ, ವಿರಾಸತ್ ಭಿ (ಅಭಿವೃದ್ಧಿಯ ಜೊತೆಗೆ ಪರಂಪರೆ) ಎಂಬ ದೃಷ್ಟಿಕೋನದಡಿ ಮಹಾರಾಷ್ಟ್ರದ ಎಲ್ಲಾ ಜ್ಯೋತಿರ್ಲಿಂಗಗಳು ಹಾಗೂ ಶಕ್ತಿಪೀಠಗಳನ್ನು ಪುನರಭಿವೃದ್ಧಿ ಮಾಡಲಾಗುತ್ತಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಒಟ್ಟಾರೆಯಾಗಿ, ಸಂಸದರ ಈ ಸರಣಿ ಬಂಡಾಯ ಮತ್ತು ಆಪರೇಷನ್ ಟೈಗರ್ ಅಬ್ಬರ ಉದ್ಧವ್ ಠಾಕ್ರೆ ಅವರ ಶಿವಸೇನಾವನ್ನು ಮತ್ತೊಮ್ಮೆ ಅಸ್ತಿತ್ವದ ಬಿಕ್ಕಟ್ಟಿಗೆ ದೂಡಿದೆ(ಏಜೆನ್ಸೀಸ್).