ಹೈದರಾಬಾದ್: ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಭೂದನ್ ಪೋಚಂಪಲ್ಲಿ ಮಂಡಲದ ದೋಥಿಗುಡೆಮ್‌ನಲ್ಲಿರುವ ಹ್ಯಾಜೆಲೊ ಫಾರ್ಮಾ(Hazelo Pharma) ಘಟಕದಲ್ಲಿ ಶುಕ್ರವಾರ(ಆ. 21) ತಡರಾತ್ರಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಜೀವದಹನವಾಗಿದ್ದು, 8 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸ್ಥಾವರದೊಳಗಿನ ರಾಸಾಯನಿಕ ರಿಯಾಕ್ಟರ್ ಸ್ಫೋಟಗೊಂಡ ಬಳಿಕ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದಿದೆ. ದೊಡ್ಡ ಸ್ಫೋಟದ ಶಬ್ದದಿಂದ ಭಯಭೀತರಾದ ನೆರೆಯ ದೋಥಿಗುಡೆಮ್ ಮತ್ತು ಅಂತಮ್ಮಗುಡೆಮ್ ಗ್ರಾಮಗಳ ನಿವಾಸಿಗಳು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಹೋದರು ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಗಾಯಗೊಂಡ ಕಾರ್ಮಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಮೃತರ ಗುರುತುಗಳನ್ನು ಇನ್ನೂ ಖಚಿತಪಡಿಸಿಕೊಳ್ಳಲಾಗಿಲ್ಲ. ಭೂದಾನ್ ಪೋಚಂಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೂರು ತಿಂಗಳ ಅವಧಿಯಲ್ಲಿ ಒಂದೇ ಘಟಕದಲ್ಲಿ ಸಂಭವಿಸುತ್ತಿರುವ ಎರಡನೇ ಸ್ಪೋಟ ಇದಾಗಿದೆ. ಆಡಳಿತ ಮಂಡಳಿಯು ಮೂಲಭೂತ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿರುವುದು ಈ ಪುನರಾವರ್ತಿತ ದುರಂತಗಳಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).