ಗಂಗಾನಗರ: ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ನಡುರಾತ್ರಿ ನಡೆದ ನಿಗೂಢ ಸ್ಫೋಟವೊಂದು ಇಡೀ ದೇಶದ ಭದ್ರತಾ ಪಡೆಗಳನ್ನು ಬೆಚ್ಚಿಬೀಳಿಸಿದೆ. ರಾಜಸ್ಥಾನದ ಗಡಿ ಜಿಲ್ಲೆಯಾದ ಶ್ರೀ ಗಂಗಾನಗರದ ರೈಲು ಹಳಿಯ ಮೇಲೆ ಭೀಕರ ಸ್ಫೋಟ ಸಂಭವಿಸಿದ್ದು, ರೈಲ್ವೆ ಹಳಿಗಳು ಮತ್ತು ಕಂಬಗಳು ಛಿದ್ರಗೊಂಡಿವೆ.
ಸ್ಫೋಟ ಸಂಭವಿಸುವುದಕ್ಕೂ ಕೇವಲ 45 ನಿಮಿಷಗಳ ಮೊದಲಷ್ಟೇ ಪ್ರಯಾಣಿಕರ ರೈಲೊಂದು ಇದೇ ಮಾರ್ಗದಲ್ಲಿ ಹಾದುಹೋಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ. ಘಟನೆಯ ತೀವ್ರತೆಯನ್ನು ಅರಿತ ರೈಲ್ವೆ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಅನೂಪ್‌ಗಢ ಮತ್ತು ಸೂರತ್‌ಗಢ ನಡುವಿನ ರೈಲು ಸಂಚಾರವನ್ನು ತಕ್ಷಣವೇ ಸ್ಥಗಿತಗೊಳಿಸಿದ್ದಾರೆ.
ಅನೂಪ್‌ಗಢ-ಸೂರತ್‌ಗಢ ಮಾರ್ಗದ '50 ಜಿಬಿ' ಪಾಯಿಂಟ್ ಬಳಿ ರಾತ್ರಿ ಸುಮಾರು 9.45ರ ಸುಮಾರಿಗೆ ಈ ಭೀಕರ ಸ್ಫೋಟ ಸಂಭವಿಸಿದೆ. ಇದರ ಶಬ್ದ ಸುಮಾರು 200 ಮೀಟರ್ ದೂರದವರೆಗೂ ಅಬ್ಬರಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇದೇ ಮಾರ್ಗದಲ್ಲಿ ರಾತ್ರಿ 9 ಗಂಟೆಗೆ ಅನೂಪ್‌ಗಢದಿಂದ ಸೂರತ್‌ಗಢಕ್ಕೆ ತೆರಳುತ್ತಿದ್ದ ರೈಲೊಂದು ತೆರಳಿತ್ತು. ರೈಲು ಹೋದ ಕೇವಲ ಮುಕ್ಕಾಲು ಗಂಟೆಯಲ್ಲೇ ಹಳಿಯನ್ನು ಸ್ಫೋಟಿಸಲಾಗಿದೆ. ಇದು ರೈಲನ್ನೇ ಗುರಿಯಾಗಿಸಿ ನಡೆಸಲಾದ ವಿಧ್ವಂಸಕ ಕೃತ್ಯವೇ? ಎಂಬ ಅನುಮಾನಗಳಿಗೆ ಕಾರಣವಾಗಿದೆ.
ಸ್ಫೋಟದ ತೀವ್ರತೆಗೆ ಹಳಿಯ ಕೆಳಗೆ ಸುಮಾರು ಎರಡು ಅಡಿ ಆಳದ ಬೃಹತ್ ಗುಂಡಿ ಬಿದ್ದಿದೆ. ಅಷ್ಟೇ ಅಲ್ಲದೆ, ಹಳಿಯನ್ನು ಹಿಡಿದಿಟ್ಟುಕೊಂಡಿದ್ದ ಎರಡು ಕಾಂಕ್ರೀಟ್ ಕಂಬಗಳು ಹಾಗೂ ಹಲವು ರೈಲ್ವೆ ಸ್ಲೀಪರ್‌ಗಳು ನಜ್ಜುಗುಜ್ಜಾಗಿವೆ.
ಗಡಿ ಭಾಗದಲ್ಲಿ ಈ ಘಟನೆ ನಡೆದಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಅಲರ್ಟ್ ಆಗಿವೆ. ವಿಷಯ ತಿಳಿಯುತ್ತಿದ್ದಂತೆಯೇ ನಡುರಾತ್ರಿ 2 ಗಂಟೆ ಸುಮಾರಿಗೆ ಭಯೋತ್ಪಾದನಾ ನಿಗ್ರಹ ದಳ (ATS), ಅಪರಾಧ ತನಿಖಾ ಇಲಾಖೆ (CID), ಬಾಂಬ್ ನಿಷ್ಕ್ರಿಯ ದಳ (BDS), ವಿಧಿವಿಜ್ಞಾನ ಪ್ರಯೋಗಾಲಯ (FSL) ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿವೆ.
ರೈಲ್ವೆ ರಕ್ಷಣಾ ಪಡೆ (RPF) ಹಾಗೂ ರೈಲ್ವೆ ಇಂಜಿನಿಯರ್‌ಗಳ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹಳಿಗಳ ಹಾನಿಯನ್ನು ಪರಿಶೀಲಿಸಿದೆ. ಭದ್ರತೆಯ ದೃಷ್ಟಿಯಿಂದ ಈ ಮಾರ್ಗದ ರೈಲು ಸೇವೆಯನ್ನು ಬೆಳಗ್ಗೆ 9 ಗಂಟೆಯವರೆಗೆ ಸಂಪೂರ್ಣ ಬಂದ್ ಮಾಡಲಾಗಿತ್ತು. ಹಾನಿಗೊಳಗಾದ ಹಳಿಯನ್ನು ಸರಿಪಡಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಇದೇ ಗಡಿ ಭಾಗದಲ್ಲಿ ಪೊಲೀಸರು ಬರೋಬ್ಬರಿ 7.5 ಕೆಜಿ ಆರ್‌ಡಿಎಕ್ಸ್ ಸ್ಫೋಟಕವನ್ನು ವಶಪಡಿಸಿಕೊಂಡಿದ್ದರು. ಹೀಗಾಗಿ, ಹಳಿ ಸ್ಫೋಟಕ್ಕೂ ಆ ಜಾಲಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಶಂಕೆ ಸಾರ್ವಜನಿಕರಲ್ಲಿ ಮೂಡಿತ್ತು.
ಈ ಕುರಿತು ಮಾಹಿತಿ ನೀಡಿರುವ ಶ್ರೀ ಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ ಹರಿಶಂಕರ್, "ರಾಮಸಿಂಗ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ '50 ಜಿಬಿ' ಗ್ರಾಮದ ಬಳಿ ಶಂಕಿತ ಸ್ಫೋಟ ನಡೆದಿರುವುದು ನಿಜ. ಎರಡು ಸಿಮೆಂಟ್ ಕಂಬಗಳು ಹಾನಿಗೊಳಗಾಗಿವೆ. ಆದರೆ, ಇತ್ತೀಚೆಗೆ ವಶಪಡಿಸಿಕೊಂಡ 7.5 ಕೆಜಿ ಆರ್‌ಡಿಎಕ್ಸ್‌ಗೂ ಈ ಘಟನೆಗೂ ಸಂಬಂಧವಿದೆ ಎಂದು ಹೇಳಲು ಸದ್ಯ ಯಾವುದೇ ಪುರಾವೆಗಳಿಲ್ಲ. ವಿಧಿವಿಜ್ಞಾನ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಯಾವ ಸ್ಫೋಟಕ ಬಳಸಲಾಗಿದೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೆ ಊಹಾಪೋಹಗಳನ್ನು ನಂಬಬೇಡಿ," ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ-ಪಾಕ್ ಗಡಿಯ ಕೂಗಳತೆಯ ದೂರದಲ್ಲೇ ರೈಲು ಹಳಿಯನ್ನು ಟಾರ್ಗೆಟ್ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೇಶದ ಆಂತರಿಕ ಭದ್ರತೆಯನ್ನು ಕದಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆಯೇ? ರೈಲನ್ನು ಉರುಳಿಸುವ ವ್ಯವಸ್ಥಿತ ಸಂಚು ಇದಾಗಿತ್ತೇ? ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ, (ಏಜೆನ್ಸೀಸ್).