ಜಲವಿದ್ಯುತ್ ಯೋಜನೆ ಸುರಂಗ ಕುಸಿತ
- ಉತ್ತರಾಖಂಡದ ಚಮೋಲಿಯಲ್ಲಿ ದುರ್ಘಟನೆ
- ಜಲವಿದ್ಯುತ್ ಯೋಜನೆ ಸುರಂಗ ಕುಸಿತ
- ಸುರಂಗದಲ್ಲಿ 18 ಕಾರ್ಮಿಕರು ಸಿಲುಕಿರುವ ಶಂಕೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗವೊಂದು ಕುಸಿದು (Chamoli Tunnel Collapse) ಬಿದ್ದಿದ್ದು, ಒಳಗೆ ಕೆಲಸ ಮಾಡುತ್ತಿದ್ದ ಸುಮಾರು 18 ಕಾರ್ಮಿಕರು ಸಿಲುಕಿಕೊಂಡಿರುವ ಆತಂಕಕಾರಿ ಸುದ್ದಿ ಹೊರಬಿದ್ದಿದೆ.
ಇದ್ದಕ್ಕಿದ್ದಂತೆ ನುಗ್ಗಿದ ನೀರು!
ಮಾಹಿತಿ ಪ್ರಕಾರ, ಗುರುವಾರ (ಆ.13) ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಅಲಕನಂದಾ ನದಿಯ ಉದ್ದಕ್ಕೂ ನಿರ್ಮಿಸುತ್ತಿರುವ 'ವಿಷ್ಣುಗಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆ'ಯ ಸುರಂಗ ಕುಸಿದಿದೆ ಎಂದು ತಿಳಿದು ಬಂದಿದೆ.
ಸಂಜೆ ಕಾರ್ಮಿಕರು ಎಂದಿನಂತೆ ತಮ್ಮ ಕೆಲಸದಲ್ಲಿ ನಿರತರಾಗಿದ್ದಾಗ, ಸುರಂಗದೊಳಗೆ ಇದ್ದಕ್ಕಿದ್ದಂತೆ ನೀರಿನ ರಭಸ ಮತ್ತು ಹರಿವು ವಿಪರೀತ ಹೆಚ್ಚಾಗಿದೆ. ಇದರೊಂದಿಗೆ ಭಾರೀ ಪ್ರಮಾಣದ ಮಣ್ಣು ಮತ್ತು ಅವಶೇಷಗಳು ಕುಸಿದುಬಿದ್ದ ಪರಿಣಾಮ, ಒಳನಡೆದಿದ್ದ 18 ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಒಳಗೆ ಸಿಲುಕಿಕೊಂಡಿದ್ದಾರೆ. ಭೂಕುಸಿತ ಹಾಗೂ ನೀರಿನ ಅನಿರೀಕ್ಷಿತ ನುಗ್ಗಾಟವೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಮುಂದುವರಿದ ರಕ್ಷಣಾ ಕಾರ್ಯಾಚರಣೆ
ಸುರಂಗ ಕುಸಿದು ಬಿದ್ದ ತಕ್ಷಣ ಸ್ಥಳೀಯ ಆಡಳಿತ ಮತ್ತು ಪೊಲೀಸರಿಗೆ ಮಾಹಿತಿ ತಲುಪಿದೆ. ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರವ್ ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನ್ವಾರ್ ನೇತೃತ್ವದಲ್ಲಿ ರಕ್ಷಣಾ ತಂಡಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿವೆ. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಯುದ್ಧೋಪಾದಿಯಲ್ಲಿ ಅವಶೇಷಗಳನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದೆ.
ಘಟನೆ ನಡೆದ ತಕ್ಷಣ ಎಚ್ಚೆತ್ತ ರಕ್ಷಣಾ ಸಿಬ್ಬಂದಿ, ಸಾಹಸ ಪ್ರದರ್ಶಿಸಿ ಇಲ್ಲಿಯವರೆಗೆ 7 ರಿಂದ 8 ಕಾರ್ಮಿಕರನ್ನು ಯಶಸ್ವಿಯಾಗಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲು, ಮುಂದುವರಿದ ಹುಡುಕಾಟ
ಹೊರತೆಗೆಯಲಾದ ಕಾರ್ಮಿಕರ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಇಬ್ಬರು ಕಾರ್ಮಿಕರನ್ನು ತಕ್ಷಣವೇ ಗೋಪೇಶ್ವರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳದಲ್ಲೇ ಹಲವಾರು ಆಂಬ್ಯುಲೆನ್ಸ್‌ಗಳನ್ನು ಸಿದ್ಧವಾಗಿರಿಸಲಾಗಿದೆ.
ಸುರಂಗದೊಳಗೆ ಇನ್ನೂ ಸಿಲುಕಿರುವ ಉಳಿದ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಪಡೆಗಳು ಹಗಲಿರುಳು ಶ್ರಮಿಸುತ್ತಿವೆ. ನೀರಿನ ಹರಿವು ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸ್ವಲ್ಪ ಅಡ್ಡಿಯಾಗುತ್ತಿದ್ದರೂ, ಸಿಬ್ಬಂದಿ ಎದೆಗುಂದದೆ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಕಾರ್ಮಿಕರ ನಿಖರ ಸ್ಥಿತಿ ಮತ್ತು ರಕ್ಷಣೆಯ ಸಂಪೂರ್ಣ ವಿವರಗಳು ಕಾರ್ಯಾಚರಣೆ ಪೂರ್ಣಗೊಂಡ ನಂತರವಷ್ಟೇ ಅಧಿಕೃತವಾಗಿ ಹೊರಬರಲಿದೆ,(ಏಜನ್ಸೀಸ್).