10ನೇ ತರಗತಿ ವಿದ್ಯಾರ್ಥಿನಿ ಮಹಿಮಾ ರಜಪೂತ್
- ಪ್ರತಿಷ್ಠಿತ ಜಾಗತಿಕ ಬಾಹ್ಯಾಕಾಶ ಮಿಷನ್ಗೆ ಛತ್ತೀಸ್ಗಢದ ರಾಯ್ಪುರ್ ವಿದ್ಯಾರ್ಥಿನಿ ಆಯ್ಕೆ
- 14 ವರ್ಷದ ಬಾಲಕಿ ಮಹಿಮಾ ರಜಪೂತ್ ಆಯ್ಕೆಯಾದ ಬಾಲಕಿ
ನವದೆಹಲಿ: ಡಿಜಿಟಲ್ ಯುಗದಲ್ಲಿ ಭಾರತೀಯ ಪ್ರತಿಭೆಗಳು ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಇತಿಹಾಸ, ದಾಖಲೆಗಳನ್ನು ನಿರ್ಮಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಸಾಲಿನಲ್ಲಿ, ವಿಶ್ವದ 108 ರಾಷ್ಟ್ರಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಅತ್ಯಂತ ಪ್ರತಿಷ್ಠಿತ ಜಾಗತಿಕ ಬಾಹ್ಯಾಕಾಶ ಮಿಷನ್ಗೆ ಛತ್ತೀಸ್ಗಢದ ರಾಯ್ಪುರ್ ಮೂಲದ 14 ವರ್ಷದ ಬಾಲಕಿ ಮಹಿಮಾ ರಜಪೂತ್ ಆಯ್ಕೆಯಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಓದುತ್ತಿರುವ ಮಹಿಮಾ, ಜಾಗತಿಕ ಮಟ್ಟದ ಈ ಮಹತ್ವದ ಮಿಷನ್ಗೆ ಆಯ್ಕೆಯಾಗುವ ಮೂಲಕ ದೇಶ ಮತ್ತು ಹೆತ್ತವರು ಹೆಮ್ಮೆಪಡುವಂತಹ ಸಾಧನೆಗೈದಿದ್ದಾರೆ. ವಿಶ್ವದ 108 ದೇಶಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಅತ್ಯಂತ ಪ್ರತಿಷ್ಠಿತ ಸ್ಪೇಸ್ ಮಿಷನ್ ‘ಶಕ್ತಿ ಸ್ಯಾಟ್’ಗೆ (ShakthiSAT) ಮಹಿಮಾ ರಜಪೂತ್ ಅವರ ಆಯ್ಕೆ ಅನೇಕರ ಗಮನ ಸೆಳೆಯುತ್ತಿದೆ.
ಕಠಿಣ ತರಬೇತಿ, ಆಯ್ಕೆಯ ಹಾದಿ
ತಮ್ಮ ಈ ಅಪೂರ್ವ ಸಾಧನೆಯ ಬಗ್ಗೆ ಮಾತನಾಡಿರುವ ಮಹಿಮಾ ರಜಪೂತ್, "ನನ್ನ ಶಾಲೆಯ ಪ್ರಿನ್ಸಿಪಲ್ ಹಾಗೂ ಮಾರ್ಗದರ್ಶಕ ಶಿಕ್ಷಕರು ನನಗೆ ಈ ಗ್ಲೋಬಲ್ ಮಿಷನ್ ಬಗ್ಗೆ ಮಾಹಿತಿ ನೀಡಿದರು. ಅವರ ಪ್ರೋತ್ಸಾಹದಿಂದಲೇ ನಾನು ಈ ಕಾರ್ಯಕ್ರಮಕ್ಕೆ ರಿಜಿಸ್ಟರ್ ಆದೆ. ಈಗ ನೋಡಿದರೆ ಆಯ್ಕೆ ಆಗಿರುವೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
21 ಮಾಡ್ಯೂಲ್ ಮತ್ತು 365 ಪಾಠ
ಬಾಹ್ಯಾಕಾಶ ವಿಜ್ಞಾನದ ಮೂಲ ತತ್ವಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ವರ್ಷ ಪೂರ ಕಲಿಯುವಂತಹ 365 ಸುದೀರ್ಘ ಪಾಠಗಳನ್ನು ಒಳಗೊಂಡ 21 ಕರಡು ಮಾಡ್ಯೂಲ್‌ಗಳ ತರಬೇತಿ ನೀಡಲಾಗಿತ್ತು ಎನ್ನಲಾಗಿದೆ. ಈ ಮಾಡ್ಯೂಲ್‌ಗಳು ವಿಜ್ಞಾನ, ಉಪಗ್ರಹಗಳ ಕಾರ್ಯವೈಖರಿ ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಮೂಲಭೂತ ಪರಿಕಲ್ಪನೆಗಳನ್ನು ಅತ್ಯಂತ ಸರಳವಾಗಿ ಅರ್ಥೈಸಲು ಸಹಾಯ ಮಾಡಿವೆ.
ಜಗತ್ತಿನ 108 ದೇಶಗಳ ವಿದ್ಯಾರ್ಥಿಗಳಿಗೆ ಕೇವಲ ಥಿಯರಿ ಮಾತ್ರವಲ್ಲದೆ, ಉಪಗ್ರಹಗಳನ್ನು ಪ್ರಾಯೋಗಿಕವಾಗಿ ಹೇಗೆ ತಯಾರಿಸಲಾಗುತ್ತದೆ ಎಂಬ ಅತ್ಯಾಧುನಿಕ ತಂತ್ರಜ್ಞಾನದ ತರಬೇತಿಯನ್ನೂ ಈ ಮಿಷನ್‌ನಲ್ಲಿ ತಿಳಿಸಲಾಗುವುದು.
ಅಷ್ಟಕ್ಕೂ ಏನಿದು ShakthiSAT ಮಿಷನ್?
‘ಶಕ್ತಿ ಸ್ಯಾಟ್’ ಎನ್ನುವುದು ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ, ಉಪಗ್ರಹ ನಿರ್ಮಾಣ ಮತ್ತು ಮಿಷನ್ ಪ್ಲಾನಿಂಗ್ ಅನ್ನು ಪರಿಚಯಿಸುವ ಒಂದು ಗ್ಲೋಬಲ್ ವಿದ್ಯಾರ್ಥಿ ಬಾಹ್ಯಾಕಾಶ ಕಾರ್ಯಕ್ರಮವಾಗಿದೆ. ಮಹಿಮಾ ರಜಪೂತ್ ಸೇರಿ ಜಗತ್ತಿನಾದ್ಯಂತ ಆಯ್ಕೆಯಾಗಿರುವ ಪ್ರಮುಖ ವಿದ್ಯಾರ್ಥಿಗಳು ಈ ವರ್ಷದ ಆ.23ರಂದು ನವದೆಹಲಿಗೆ ಆಗಮಿಸಲಿದ್ದಾರೆ. ಅಲ್ಲಿ ವಿದ್ಯಾರ್ಥಿಗಳೇ ಖುದ್ದಾಗಿ ಉಪಗ್ರಹ ನಿರ್ಮಾಣ ಕಾರ್ಯದಲ್ಲಿ ಪ್ರಾಯೋಗಿಕವಾಗಿ ಭಾಗಿಯಾಗಲಿದ್ದಾರೆ.
ಚಂದ್ರನತ್ತ ಜಾಗತಿಕ ಮಿಷನ್
ಈ ಕಾರ್ಯಾಚರಣೆಯ ಯೋಜನೆಯ ಪ್ರಕಾರ, ವಿದ್ಯಾರ್ಥಿಗಳು ತಯಾರಿಸುವ ಒಂದು ಉಪಗ್ರಹವು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯಲಿದ್ದರೆ, ಮತ್ತೊಂದು ಉಪಗ್ರಹವು ಚಂದ್ರನ ಕಕ್ಷೆಯಲ್ಲಿ ಸುತ್ತುವರೆಯಲಿದೆ. ಐತಿಹಾಸಿಕ ಬಾಹ್ಯಾಕಾಶ ಮಿಷನ್ ಅನ್ನು ಅಕ್ಟೋಬರ್ ತಿಂಗಳಲ್ಲಿ ಉಡಾವಣೆ ಮಾಡಲು ದಿನಾಂಕವನ್ನು ಕೂಡ ಈಗಾಗಲೇ ನಿಗದಿಪಡಿಸಲಾಗಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳಲ್ಲಿ ಹೆಚ್ಚಿದ ವಿಜ್ಞಾನದ ಆಸಕ್ತಿ
ಶಾಲಾ ಹಂತದ ವಿದ್ಯಾರ್ಥಿಗಳಿಗೆ ಉಪಗ್ರಹ ಅಭಿವೃದ್ಧಿಯ ಪ್ರಾಯೋಗಿಕ ಅನುಭವ ನೀಡುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೇಸ್ ಟೆಕ್ನಾಲಜಿಯ ಸಹಯೋಗವನ್ನು ವೃದ್ಧಿಸುವುದು ಈ ಮಿಷನ್ನ ಮುಖ್ಯ ಉದ್ದೇಶವಾಗಿದೆ. 14ರ ಹರೆಯದಲ್ಲೇ ಇಂತಹ ಬಿಗ್ ಪ್ರಾಜೆಕ್ಟ್ಗೆ ಆಯ್ಕೆಯಾಗಿರುವ ಮಹಿಮಾ ರಜಪೂತ್, ಭಾರತದ ಕೋಟ್ಯಂತರ ವಿದ್ಯಾರ್ಥಿಗಳಿಗೆ ಮತ್ತು ಹೆಣ್ಣುಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ದೊಡ್ಡ ಪ್ರೇರಣೆಯಾಗಿ ಹೊರಹೊಮ್ಮಿರುವುದು ನಿಜಕ್ಕೂ ಸ್ಫೂರ್ತಿದಾಯಕ,(ಏಜೆನ್ಸೀಸ್).