ಮಹಾರಾಷ್ಟ್ರ ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ: ಎಸ್‌ಐಟಿ ತನಿಖೆಗೆ ಸಿಎಂ ಫಡ್ನವೀಸ್ ಆದೇಶ; ಪರೀಕ್ಷೆ ದಿಢೀರ್ ಮುಂದೂಡಿಕೆ! 
ದೇಶ

ಮಹಾರಾಷ್ಟ್ರ TET ಪ್ರಶ್ನೆಪತ್ರಿಕೆ ಸೋರಿಕೆ ಹಗರಣ: ಎಸ್‌ಐಟಿ ತನಿಖೆಗೆ ಸಿಎಂ ಫಡ್ನವೀಸ್ ಆದೇಶ; ಪರೀಕ್ಷೆ ದಿಢೀರ್ ಮುಂದೂಡಿಕೆ! CM Devendra Fadnavis SIT Probe

ಮುಂಬೈ: ಮಹಾರಾಷ್ಟ್ರದಲ್ಲಿ ಭಾನುವಾರ (ಜೂನ್ 28) ನಡೆಯಬೇಕಿದ್ದ ಪ್ರತಿಷ್ಠಿತ ಶಿಕ್ಷಕರ ಅರ್ಹತಾ ಪರೀಕ್ಷೆಯ (TET 2026) ಪ್ರಶ್ನೆಪತ್ರಿಕೆಯು ಪರೀಕ್ಷೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಶನಿವಾರ ಆಘಾತಕಾರಿಯಾಗಿ ಸೋರಿಕೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಭೇದಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದು, ಹಗರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(CM Devendra Fadnavis SIT Probe) ಅವರು ವಿಶೇಷ ತನಿಖಾ ದಳ (SIT) ರಚನೆಗೆ ಆದೇಶಿಸಿದ್ದಾರೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ನಡೆಯಬೇಕಿದ್ದ ಪರೀಕ್ಷೆಯನ್ನು ರಾಜ್ಯ ಸರ್ಕಾರ ದಿಢೀರ್ ಮುಂದೂಡಿದೆ.
ರಾಜ್ಯದಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಸಂದರ್ಭದಲ್ಲೇ ಈ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಬೆಳಕಿಗೆ ಬಂದಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಜಂಟಿ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ಎಸ್‌ಐಟಿ ತನಿಖೆ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆಡಳಿತ ಮಂಡಳಿಗಳೊಂದಿಗೆ ತುರ್ತು ಸಭೆ ನಡೆಸಿದ ಸಿಎಂ ದೇವೇಂದ್ರ ಫಡ್ನವೀಸ್, ಠಾಣೆ ಜಿಲ್ಲೆಯ ಜಂಟಿ ಪೊಲೀಸ್ ಕಮಿಷನರ್ ಪಂಜಾಬ್ರಾವ್ ಉಗಾಲೆ ಅವರ ನೇತೃತ್ವದಲ್ಲಿ ಹೈಪ್ರೊಫೈಲ್ ಎಸ್‌ಐಟಿ ತನಿಖೆಗೆ ಆದೇಶ ನೀಡಿದ್ದಾರೆ. ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸದಾನಂದ್ ದಾತೆ ಅವರೊಂದಿಗೆ ಮಾತನಾಡಿದ ಸಿಎಂ, ಲಕ್ಷಾಂತರ ಯುವಕರ ಭವಿಷ್ಯದೊಂದಿಗೆ ಆಟವಾಡಿರುವ ಈ ದಂಧೆಯ ಸೂತ್ರಧಾರರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಠಾಣೆ ಜಿಲ್ಲೆಯ ಭಿವಾಂಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಮೂಲತಃ ಬಿಹಾರ ಮತ್ತು ಹರಿಯಾಣ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದಾಗ ಈ ಕರಾಳ ದಂಧೆ ಬಯಲಾಗಿದೆ. ಬಂಧಿತ ಆರೋಪಿಗಳ ಬಳಿ ಅಸಲಿ ಪ್ರಶ್ನೆಪತ್ರಿಕೆಯ ನಕಲು ಪ್ರತಿಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

6 ಲಕ್ಷ ಅಭ್ಯರ್ಥಿಗಳಿಗೆ ನಿರಾಸೆ: ಪರೀಕ್ಷೆ ಮುಂದೂಡಿಕೆ

ಮಹಾರಾಷ್ಟ್ರ ರಾಜ್ಯ ಪರೀಕ್ಷಾ ಮಂಡಳಿ (MSCE) ಶನಿವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಜೂನ್ 28 ರಂದು ನಿಗದಿಯಾಗಿದ್ದ ಟಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದೆ. ಮಹಾರಾಷ್ಟ್ರದ 37 ಪ್ರಮುಖ ಕೇಂದ್ರಗಳ ವ್ಯಾಪ್ತಿಯ 1,728 ಪರೀಕ್ಷಾ ಉಪಕೇಂದ್ರಗಳಲ್ಲಿ ಒಟ್ಟು 6 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಪರೀಕ್ಷೆ ಬರೆಯಬೇಕಿತ್ತು.
ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಹಾಗೂ ಈ ಹಗರಣದ ಸಮಗ್ರ ತನಿಖೆಗೆ ಅನುಕೂಲ ಮಾಡಿಕೊಡಲು ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡುವುದು ಅನಿವಾರ್ಯವಾಗಿದೆ. ಅಭ್ಯರ್ಥಿಗಳು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಪರೀಕ್ಷೆಯ ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಮರುಪರೀಕ್ಷೆಗೆ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ನೋಂದಣಿ ಶುಲ್ಕವನ್ನು ಪಡೆಯಲಾಗುವುದಿಲ್ಲ ಎಂದು ಪರೀಕ್ಷಾ ಮಂಡಳಿ ಸ್ಪಷ್ಟಪಡಿಸಿದೆ.

ಹೊಸ ಕಠಿಣ ಕಾನೂನಿನಡಿ ಕಳ್ಳರಿಗೆ ನಡುಕ!

ಈ ಹಗರಣದ ಮೂಲ ಎಲ್ಲಿದೆ ಮತ್ತು ಇದರ ಹಿಂದಿರುವ ಜಾಗತಿಕ ಕಿಂಗ್‌ಪಿನ್ ಯಾರು ಎಂಬುದನ್ನು ಪತ್ತೆಹಚ್ಚಲು ಮಹಾರಾಷ್ಟ್ರ ಪೊಲೀಸರ ಹಲವು ವಿಶೇಷ ತಂಡಗಳು ಈಗಾಗಲೇ ಬಿಹಾರ, ಹರಿಯಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗಿವೆ. ಸದ್ಯ ಠಾಣೆಯ ಕೊಂಗಾವ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಇತ್ತೀಚೆಗಷ್ಟೇ ಜಾರಿಗೆ ತರಲಾದ ಮಹಾರಾಷ್ಟ್ರ ಸ್ಪರ್ಧಾತ್ಮಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ಕಾಯ್ದೆ-2024 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹೊಸ ಕಠಿಣ ಕಾನೂನಿನ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಲು ಅವಕಾಶವಿದ್ದು, ದಂಧೆಕೋರರಿಗೆ ಭಾರಿ ನಡುಕ ಶುರುವಾಗಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ರಾಜ್ಯ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದು, ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದೆ,(ಏಜೆನ್ಸೀಸ್​).