Vinayak Raut | ಮಾಜಿ ಸಂಸದ ವಿನಾಯಕ್ ರಾವತ್ ವಿರುದ್ಧ ದೂರು ದಾಖಲಿಸಿದ ಸೊಸೆ
ಮುಂಬೈ: ಮಹಾರಾಷ್ಟ್ರದ ಥಾಣೆಯ ಪ್ರಭಾವಿ ರಾಜಕೀಯ ಕುಟುಂಬವೊಂದರ ಕೌಟುಂಬಿಕ ಕಲಹವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮೂಢನಂಬಿಕೆ ಮತ್ತು ಮಾಟಮಂತ್ರ ಆಚರಣೆಯ ಗಂಭೀರ ಆರೋಪಗಳು ಕೇಳಿಬಂದಿವೆ. ಉದ್ಧವ್ ಠಾಕ್ರೆ ಬಣದ ಮಾಜಿ ಸಂಸದ ಹಾಗೂ ಅವರ ಕುಟುಂಬದ ಸದಸ್ಯರು ತಮ್ಮನ್ನು ಮೂಢನಂಬಿಕೆಯ ಆಚರಣೆಗಾಗಿ ಬಲವಂತವಾಗಿ ಗೋಮೂತ್ರ ಕುಡಿಯುವಂತೆ ಮಾಡಿದರು ಹಾಗೂ ತಲೆಯ ಕೂದಲನ್ನು ಕಿತ್ತು ಕಿರುಕುಳ ನೀಡಿದ್ದಾರೆ ಎಂದು ಸೊಸೆ ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಹಿರಿಯ ರಾಜಕಾರಣಿ ವಿನಾಯಕ್ ರಾವತ್, ಅವರ ಪತ್ನಿ ಮತ್ತು ಅವರ ಕೌನ್ಸಿಲರ್ ಮಗ ಗೀತೇಶ್ ರಾವತ್ ವಿರುದ್ಧ ಪೊಲೀಸರು ಮೂಢನಂಬಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಫಿರೋಜ್ ಮತ್ತು ಖಾಜಿ ಎಂಬ ಇಬ್ಬರು ಮಾಟಮಂತ್ರಿಗಳ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.
ತಮ್ಮ ಅತ್ತೆ-ಮಾವ ಮತ್ತು ಪತಿ ತಮಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ ಮತ್ತು ಪದೇ ಪದೇ ಉಪವಾಸ ಕೆಡವಿದ್ದಾರೆ ಎಂದು ಸಂತ್ರಸ್ತೆ ಗಿರಿಜಾ ರಾವತ್ ದೂರಿದ್ದಾರೆ.
ದೈಹಿಕ ಸಂಬಂಧ ಸಾಧ್ಯವಿಲ್ಲ ಎನ್ನುತ್ತಿದ್ದನಂತೆ ಪತಿರಾಯ!
ಮದುವೆಯ ಬಳಿಕ ಹನಿಮೂನ್‌ಗಾಗಿ ಊಟಿಗೆ ತೆರಳಿದ್ದ ವೇಳೆ ಪತಿ ತಮ್ಮೊಂದಿಗೆ ದೈಹಿಕ ಸಂಬಂಧಕ್ಕೆ ನಿರಾಕರಿಸಿದ್ದರು. ಹತ್ತಿರವಾಗಲು ಯತ್ನಿಸಿದಾಗಲೆಲ್ಲಾ ದೂರ ತಳ್ಳುತ್ತಿದ್ದ ಪತಿ, ಭಾರತದಲ್ಲಿದ್ದಾಗ ದೈಹಿಕವಾಗಿ ಒಂದಾಗಲು ಸಾಧ್ಯವಿಲ್ಲ, ವಿದೇಶಕ್ಕೆ ಹೋದಾಗ ಮಾತ್ರ ಇದು ಸಾಧ್ಯ ಎಂದು ಹೇಳುತ್ತಿದ್ದರು ಎಂದು ಗಿರಿಜಾ ಆರೋಪಿಸಿದ್ದಾರೆ.
ಊಟಿಯಿಂದ ಹಿಂತಿರುಗಿದ ನಂತರ, ತಲಗಾಂವ್ ಗ್ರಾಮದಲ್ಲಿ ನಡೆಯಲಿದ್ದ ಆರತಕ್ಷತೆ ಸಮಾರಂಭಕ್ಕೆ ಹೋಗುವಾಗಲೂ ಪತಿ ಸಾರ್ವಜನಿಕವಾಗಿ ತಮ್ಮನ್ನು ಅವಮಾನಿಸಿದ್ದರು, ನಿಧಾನವಾಗಿ ನಡೆಯುತ್ತಿದ್ದೀಯಾ ಎಂದು ಎಲ್ಲರ ಸಮ್ಮುಖದಲ್ಲೇ ರೇಗಾಡಿದ್ದರು ಎಂದು ಗಿರಿಜಾ ತಿಳಿಸಿದ್ದಾರೆ. ಇಂತಹ ಜಗಳಗಳು ನಿರಂತರವಾಗಿ ನಡೆಯುತ್ತಿದ್ದವು ಹಾಗೂ ಪತಿ ಜಾಗ ಅಥವಾ ವಾತಾವರಣದ ಅರಿವಿಲ್ಲದೆ ಕೋಪ ಶಮನವಾಗುವವರೆಗೂ ಜಗಳವಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.
2018 ರಲ್ಲಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋದಾಗಲೂ ಪತಿ ತಮ್ಮನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದ್ದರು. ತಾವು ಈ ಬಗ್ಗೆ ವಿಷಯ ಎತ್ತಿದಾಗ, ತಮ್ಮ ಮೇಲೆ ಹಲ್ಲೆ ನಡೆಸಿ, ನಾವು ಎಂದಾದರೂ ದೈಹಿಕವಾಗಿ ಒಂದಾದರೆ ನಾನು ಸತ್ತುಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಗಿರಿಜಾ ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪಗಳು ಕೇವಲ ಪತಿಯ ಮೇಲಷ್ಟೇ ಅಲ್ಲದೆ, ಕುಟುಂಬದ ಇತರ ಸದಸ್ಯರ ಮೇಲೆಯೂ ಇವೆ. ಮಾನಸಿಕ ಕಿರುಕುಳ, ನಿಂದನೀಯ ನಡವಳಿಕೆ, ಗೃಹಹಿಂಸೆ ಮತ್ತು ಹಲವು ಸಂದರ್ಭಗಳಲ್ಲಿ ತಮ್ಮನ್ನು ಅನಾಥವಾಗಿ ಬಿಟ್ಟುಹೋಗಿದ್ದಾರೆ ಎಂದು ಅವರು ಕುಟುಂಬದ ವಿರುದ್ಧ ದೂರಿದ್ದಾರೆ. ಗಿರಿಜಾ ರಾವುತ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿನಾಯಕ್ ರಾವತ್ ಅವರು ಉದ್ಧವ್ ಠಾಕ್ರೆ ಅವರ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಈ ಗಂಭೀರ ಆರೋಪಗಳ ಕುರಿತು ವಿನಾಯಕ್ ಮತ್ತು ಅವರ ಕುಟುಂಬದವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ(ಏಜೆನ್ಸೀಸ್).