Municipal Corporation Election
ಮುಂಬೈ: ಮತದಾನ ಹೆಚ್ಚಳಕ್ಕಾಗಿ ವಿನೂತನ ಪ್ರಯತ್ನಕ್ಕೆ ಮುಂದಾಗಿರುವ ವಸೈ-ವಿರಾರ್ ನಗರ ಮುನ್ಸಿಪಲ್ ಕಾರ್ಪೊರೇಷನ್ (ವಿವಿಎಂಸಿ) ಗುರುವಾರ (ಜನವರಿ 15) ನಡೆಯಲಿರುವ ನಾಗರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ನಾಗರಿಕರಿಗೆ ಸಲೂನ್‌ಗಳಲ್ಲಿ ಕೂದಲು ಕತ್ತರಿಸುವ ಸೇವೆಗಳ ಮೇಲೆ ಶೇಕಡಾ 25 ರಷ್ಟು ರಿಯಾಯಿತಿಯನ್ನು ನೀಡುವ ಮೂಲಕ ಸುದ್ದಿಯಲ್ಲಿದೆ.
ಶಾಯಿ ಹಚ್ಚಿದ ಬೆರಳು ತೋರಿಸಿದರೆ 25% ರಿಯಾಯಿತಿ
ವಸಾಯಿ ಹೇರ್ ಡ್ರೆಸ್ಸರ್ಸ್ ಅಸೋಸಿಯೇಷನ್ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಮುನ್ಸಿಪಲ್ ಕಾರ್ಪೊರೇಷನ್ ವಿಶೇಷ ಪ್ರೋತ್ಸಾಹ ಧನ ನೀಡಿದೆ. ಪುರಸಭೆಯ ವ್ಯಾಪ್ತಿಯಲ್ಲಿನ ಸಲೂನ್‌ಗಳಲ್ಲಿ ಶಾಯಿ ಹಚ್ಚಿದ ಬೆರಳನ್ನು ತೋರಿಸುವ ಯಾವುದೇ ನಾಗರಿಕರು ಕೂದಲು ಕತ್ತರಿಸುವ ಸೇವೆಗಳಲ್ಲಿ 25% ರಿಯಾಯಿತಿಗೆ ಅರ್ಹರಾಗಿರುತ್ತಾರೆ ಎಂದು ನಾಗರಿಕ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜವಾಬ್ದಾರಿಯುತ ನಾಗರಿಕರಿಗೆ ಪುರಸ್ಕಾರ ನೀಡುವ ಮೂಲಕ ಮತದಾನದ ದಿನವನ್ನು ನಿಜವಾದ ಪ್ರಜಾಪ್ರಭುತ್ವದ ಹಬ್ಬವನ್ನಾಗಿ ಪರಿವರ್ತಿಸುವುದು ಈ ಉಪಕ್ರಮದ ಗುರಿಯಾಗಿದೆ ಸ್ಥಳಿಯರೊಬ್ಬರು ತಿಳಿಸಿದ್ದು, ಪ್ರತಿಯೊಬ್ಬ ಅರ್ಹ ಮತದಾರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನಿರ್ಭೀತವಾಗಿ ಮತ್ತು ಉತ್ಸಾಹದಿಂದ ಭಾಗವಹಿಸುವುದನ್ನು ಪ್ರೋತ್ಸಾಹಿಸಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿವಿಎಂಸಿ ತಿಳಿಸಿದೆ.
ಮಹಾರಾಷ್ಟ್ರದ 29 ಪುರಸಭೆಗಳಲ್ಲಿ ಮತದಾನ
ಮಹಾರಾಷ್ಟ್ರದಾದ್ಯಂತ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲಿ ಗುರುವಾರ ಮತದಾನ ಆರಂಭವಾಗಿದ್ದು, ಮುಂಬೈ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಮಹಾನಗರ ಪಾಲಿಕೆಗಳ 893 ವಾರ್ಡ್‌ಗಳಲ್ಲಿರುವ 2,869 ಸ್ಥಾನಗಳಿಗೆ ಬೆಳಿಗ್ಗೆ 7.30 ಕ್ಕೆ ಬಿಗಿ ಭದ್ರತೆಯ ನಡುವೆ ಮತದಾನ ಪ್ರಾರಂಭವಾಗಿ ಸಂಜೆ 5.30 ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟು 3.48 ಕೋಟಿ ಮತದಾರರು 15,931 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
227 ಸ್ಥಾನಗಳಿಗೆ 1,700 ಅಭ್ಯರ್ಥಿಗಳ ಸ್ಪರ್ಧೆ
74,400 ಕೋಟಿ ರೂ.ಗಳಿಗಿಂತ ಹೆಚ್ಚಿನ ವಾರ್ಷಿಕ ಬಜೆಟ್ ಹೊಂದಿರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ನಲ್ಲಿ, ನಾಲ್ಕು ವರ್ಷಗಳ ವಿಳಂಬದ ಬಳಿಕ ನಡೆಯುತ್ತಿರುವ ಚುನಾವಣೆಯಲ್ಲಿ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಚುನಾವಣೆಗಳ ಮೇಲ್ವಿಚಾರಣೆಗಾಗಿ ಮುಂಬೈನಾದ್ಯಂತ 25,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂಬೈ ಹೊರತುಪಡಿಸಿ, ಇತರ ನಗರ ಸಂಸ್ಥೆಗಳು ಬಹು-ಸದಸ್ಯ ವಾರ್ಡ್‌ಗಳನ್ನು ಹೊಂದಿವೆ. ನಾಳೆ ( ಜನವರಿ 16) ಮತ ಎಣಿಕೆ ನಡೆಯಲಿದೆ.
ಶಿವಸೇನೆಯ ವಿಭಜನೆಯ ಬಳಿಕ ನಡೆಯುತ್ತಿರುವ ಮೊದಲ ಬಿಎಂಸಿ ಚುನಾವಣೆ ಇದಾಗಿದ್ದು, ಉಪಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂಧೆ ಪಕ್ಷದ ಅನೇಕ ಶಾಸಕರೊಂದಿಗೆ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರು. ಅವಿಭಜಿತ ಶಿವಸೇನೆ ಭಾರತದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯ ಮೇಲೆ 25 ವರ್ಷಗಳ ಕಾಲ (1997-2022) ಅಧಿಕಾರ ನಡೆಸಿದೆ(ಏಜೆನ್ಸೀಸ್).