ಗೆಲುವಿನ ನಗೆ ಬೀರಿದ ಕಾಂಗ್ರೆಸ್​ ಅಭ್ಯರ್ಥಿ ಅಭಿಜಿತ್ ವಂಜಾರಿ!  
ದೇಶ

ಮಹಾರಾಷ್ಟ್ರ ಎಂಎಲ್‌ಸಿ ಚುನಾವಣೆ: RSS ಭದ್ರಕೋಟೆ ಭೇದಿಸಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್​ ಅಭ್ಯರ್ಥಿ ಅಭಿಜಿತ್ ವಂಜಾರಿ! | Abhijeet Wanjari

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ನಾಗ್ಪುರ ವಿಭಾಗದ ಪದವೀಧರರ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಭಿಜಿತ್ ಗೋವಿಂದರಾವ್ ವಂಜಾರಿ ಸತತ ಎರಡನೇ ಬಾರಿಗೆ ಭರ್ಜರಿ ಜಯ ಸಾಧಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ವಕೀಲರು ಹಾಗೂ ಶಿಕ್ಷಣ ತಜ್ಞರೂ ಆಗಿರುವ ವಂಜಾರಿ, ಈ ಹಿಂದೆ 2020ರಲ್ಲೂ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿ ಮೇಲ್ಮನೆ ಪ್ರವೇಶಿಸಿದ್ದರು.

2020ರ ಚುನಾವಣೆಯಲ್ಲಿ ಅಭಿಜಿತ್ ವಂಜಾರಿ ಅವರ ಗೆಲುವು ಅತ್ಯಂತ ಮಹತ್ವಪೂರ್ಣವಾಗಿತ್ತು. ಕಾರಣ ಇದು ದಶಕಗಳಿಂದ ಬಿಜೆಪಿ ಭದ್ರಕೋಟೆ. ಅಂದು ಮಹಾ ವಿಕಾಸ್ ಅಗಾಡಿ ಒಕ್ಕೂಟದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಂಜಾರಿ, 18,000ಕ್ಕೂ ಅಧಿಕ ಮತಗಳ ಭಾರಿ ಅಂತರದಿಂದ ಗೆದ್ದು ದಾಖಲೆ ಬರೆದಿದ್ದರು. ಪ್ರಸ್ತುತ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ರಾಜಕೀಯ ಹಿನ್ನೆಲೆ

ರಾಜಕೀಯ ಕುಟುಂಬದಲ್ಲೇ ಜನಿಸಿರುವ ಅಭಿಜಿತ್ ವಂಜಾರಿ ಅವರ ತಂದೆ ದಿವಂಗತ ಗೋವಿಂದರಾವ್ ಮರೋತ್ರಾವ್ ವಂಜಾರಿ ಅವರು ದಕ್ಷಿಣ ನಾಗ್ಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರಸಂತ್ ತುಕಾಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದಿಂದ ಬಿ.ಎ ಹಾಗೂ ಎಲ್.ಎಲ್.ಬಿ ಪದವಿ ಪಡೆದಿರುವ ವಂಜಾರಿ, ಆ ವಿವಿಯ ಸೆನೆಟ್ ಮತ್ತು ನಿರ್ವಹಣಾ ಮಂಡಳಿಯಲ್ಲೂ ಸೇವೆ ಸಲ್ಲಿಸಿದ್ದಾರೆ.

ಅವರ ರಾಜಕೀಯ ಪಯಣವು ವಿದ್ಯಾರ್ಥಿ ದೆಸೆಯಿಂದಲೇ ಆರಂಭವಾಯಿತು. 1998ರಿಂದ 2002ರವರೆಗೆ ಮಹಾರಾಷ್ಟ್ರ ಪ್ರದೇಶ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಮಹಾರಾಷ್ಟ್ರ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ನಾಗ್ಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರರಾಗಿ ದೀರ್ಘಕಾಲ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಆರಂಭಿಕ ಹಂತದಲ್ಲಿ 2005ರ ದಕ್ಷಿಣ ನಾಗ್ಪುರ ವಿಧಾನಸಭಾ ಉಪಚುನಾವಣೆ ಹಾಗೂ 2014ರ ಪೂರ್ವ ನಾಗ್ಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಸ್ಪರ್ಧಿಸಿ ಸೋತಿದ್ದರೂ, ತಮ್ಮ ದಣಿವರಿಯದ ಹೋರಾಟದಿಂದ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು.

ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳು

ಕೇವಲ ರಾಜಕೀಯಕ್ಕಷ್ಟೇ ಸೀಮಿತವಾಗದೆ, ಶಿಕ್ಷಣ ಕ್ಷೇತ್ರದಲ್ಲೂ ವಂಜಾರಿ ಸಕ್ರಿಯರಾಗಿದ್ದಾರೆ. ವಿದರ್ಭ ಪ್ರದೇಶದಲ್ಲಿ ಇಂಜಿನಿಯರಿಂಗ್, ಫಾರ್ಮಸಿ, ಕಾನೂನು, ಮ್ಯಾನೇಜ್‌ಮೆಂಟ್, ಕಲೆ ಮತ್ತು ವಿಜ್ಞಾನ ಸೇರಿದಂತೆ ವಿವಿಧ ಕಾಲೇಜುಗಳನ್ನು ನಡೆಸುತ್ತಿರುವ ಅಮರ ಸೇವಾ ಮಂಡಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಗೋವಿಂದ್ ಅರ್ಬನ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿಯೂ ಜವಾಬ್ದಾರಿ ವಹಿಸಿದ್ದಾರೆ.

ಗೋವಿಂದರಾವ್ ವಂಜಾರಿ ಫೌಂಡೇಶನ್ ಮೂಲಕ ಆರೋಗ್ಯ ಶಿಬಿರಗಳು, ರಕ್ತದಾನ ಶಿಬಿರಗಳು, ಸಸಿ ನೆಡುವ ಅಭಿಯಾನಗಳು ಮತ್ತು ಯುವಜನ ಅಭಿವೃದ್ಧಿ ಕಾರ್ಯಕ್ರಮಗಳಂತಹ ಹಲವಾರು ಸಾಮಾಜಿಕ ಕಲ್ಯಾಣ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾಗ್ಪುರ ಪದವೀಧರರ ಕ್ಷೇತ್ರದಿಂದ ಅವರ ಈ ನಿರಂತರ ಸೇವೆ ಮತ್ತು ನಾಯಕತ್ವವು ಯುವ ಮತದಾರರಲ್ಲಿ ಮತ್ತು ಪದವೀಧರರಲ್ಲಿ ಅವರ ಮೇಲಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಅಂದರೆ ತಪ್ಪಾಗದು(ಏಜೆನ್ಸೀಸ್​).