Leopard Costume | ಚಿರತೆ ವೇಷ ಧರಿಸಿ ವಿಧಾನಸಭೆಗೆ ಆಗಮಿಸಿದ ಜುನ್ನಾರ್‌ನ ಪಕ್ಷೇತರ ಶಾಸಕ ಶರದ್ ಸೋನಾವಾನೆ
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಜುನ್ನಾರ್‌ನ ಪಕ್ಷೇತರ ಶಾಸಕ ಶರದ್ ಸೋನಾವಾನೆ ಚಿರತೆ ವೇಷ ಧರಿಸಿ ವಿಧಾನಸಭೆಯ ಆವರಣಕ್ಕೆ ಆಗಮಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಯ ವಿಷಯವಾಗಿ ಪ್ರತಿಭಟಿಸಲು ಈ ರೀತಿಯ ಬಟ್ಟೆ ಧರಿಸಿ ಬರಬೇಕಾಯಿತು ಎಂದು ಸೋನಾವಾನೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಚಿರತೆ ದಾಳಿ ಜನರ ಆತಂಕವನ್ನು ಹೆಚ್ಚಿಸಿದೆ ಎನ್ನಲಾಗಿದೆ.
ನಾಗ್ಪುರ ನಗರದ ಪಾರ್ಡಿ ಪ್ರದೇಶದಲ್ಲಿ ಚಿರತೆ ದಾಳಿಯಲ್ಲಿ ಸುಮಾರು ಏಳು ಜನರು ಗಾಯಗೊಂಡ ದಿನದಂದಲೂ ಶಾಸಕ ಸೋನಾವಾನೆ ಈ ವಿನೂತನ ಪ್ರತಿಭಟನೆಗೆ ನಿರ್ಧರಿಸಿದ್ದು, ಅವರ ಈ ಪ್ರಯತ್ನದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದಿದ್ದಾರೆ ಎಂದು ವರದಿಯಾಗಿದೆ.
2014 ರಿಂದಲೇ ಈ ಸಮಸ್ಯೆ
ಇದೇ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನಾವಾನೆ, ಚಿರತೆ ದಾಳಿಯಿಂದಾಗಿ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಾನು 2014 ರಿಂದ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಚಿರತೆ ದಾಳಿಯನ್ನು ವಿಪತ್ತು ಎಂದು ಪರಿಗಣಿಸಬೇಕು. ಜುನ್ನಾರ್ ಮತ್ತು ಅಹಲ್ಯಾನಗರದಲ್ಲಿ ಎರಡು ರಕ್ಷಣಾ ಕೇಂದ್ರಗಳನ್ನು ತಕ್ಷಣವೇ ಸ್ಥಾಪಿಸಬೇಕು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುತ್ತಾರೆ ಎನ್ನುವ ವಿಶ್ವಾಸವನ್ನು ಸೋನಾವಾನೆ ವ್ಯಕ್ತಪಡಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ ಕಳೆದ ಮೂರು ತಿಂಗಳಲ್ಲಿ ಚಿರತೆ ದಾಳಿಯಿಂದ 55 ಜನರು ಪ್ರಾಣ ಕಳೆದುಕೊಂಡಿದ್ದಾರೆ. 2014-15ರ ಚಳಿಗಾಲದ ಅಧಿವೇಶನದಲ್ಲಿಯೇ ನಾನು ಸರ್ಕಾರಕ್ಕೆ ಈ ಕುರಿತಾಗಿ ಎಚ್ಚರಿಕೆ ನೀಡಿದ್ದೆ, ಆದರೂ ಈ ಸಮಸ್ಯೆ ಹಾಗೆಯೇ ಉಳಿದಿದೆ, ಈ ಪ್ರದೇಶದ ಜನರು ಭಯದಲ್ಲಿ ಕಾಲ ಕಳೆಯುವಂತಾಗಿದ್ದು, ಜುನ್ನಾರ್ ತಾಲೂಕು ಮತ್ತು ಅಹಲ್ಯಾನಗರ ಜಿಲ್ಲೆಯಲ್ಲಿ 2,000 ಚಿರತೆಗಳಿಗೆ ಸ್ಥಳಾವಕಾಶ ಕಲ್ಪಿಸಬಹುದಾದ ರಕ್ಷಣಾ ಕೇಂದ್ರಗಳನ್ನು ಸರ್ಕಾರ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಅರಣ್ಯ ಸಚಿವರು ಹೇಳಿದ್ದೇನು..?
ಮಂಗಳವಾರ ಮಾತನಾಡಿದ್ದ ಮಹಾರಾಷ್ಟ್ರ ಸರ್ಕಾರದ ಅರಣ್ಯ ಸಚಿವ ಗಣೇಶ್ ನಾಯಕ್, ಚಿರತೆಗಳು ತಮ್ಮ ನೈಸರ್ಗಿಕ ಆವಾಸಸ್ಥಾನದಲ್ಲಿ ಬೇಟೆಯನ್ನು ಕಂಡುಕೊಳ್ಳಲು ಮತ್ತು ಆಹಾರ ಹುಡುಕಿಕೊಂಡು ಮಾನವ ವಸಾಹತುಗಳಿಗೆ ಅಲೆದಾಡದಂತೆ ತಡೆಯಲು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳನ್ನು ಬಿಡಲು ಪ್ರಸ್ತಾಪಿಸಿದ್ದೇನೆ ಎಂದು ಹೇಳಿದರು.
ಚಿರತೆ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದರೆ, ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕು, ಆದ್ದರಿಂದ ನಾನು ಅಧಿಕಾರಿಗಳಿಗೆ ಹೇಳಿದೆ, ಸತ್ತ ನಂತರ ಪರಿಹಾರ ನೀಡುವ ಬದಲು, ಚಿರತೆಗಳು ಗ್ರಾಮಗಳನ್ನು ಪ್ರವೇಶಿಸದಂತೆ 1 ಕೋಟಿ ರೂ. ಮೌಲ್ಯದ ಮೇಕೆಗಳನ್ನು ಕಾಡಿಗೆ ಬಿಡಿ ಎಂದು ಸಚಿವರು ಹೇಳಿದ್ದಾರೆ(ಏಜೆನ್ಸೀಸ್).