Maharashtra Govt | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮುಂಬೈ: ಶಾಲಾ ಮತ್ತು ಕಾಲೇಜು ಕ್ಯಾಂಪಸ್‌ಗಳಲ್ಲಿ ತಂಬಾಕು, ಪಾನ್ ಮಸಾಲ ಮತ್ತು ಮಾದಕ ವಸ್ತುಗಳ ಅಕ್ರಮ ಮಾರಾಟದ ವಿರುದ್ಧ ಮಹಾರಾಷ್ಟ್ರದ ಸರ್ಕಾರ ಕಠಿಣ ನಿಲುವನ್ನು ತಾಳಿದ್ದು, ಇದು ವಿದ್ಯಾರ್ಥಿಗಳ ಸುರಕ್ಷತೆಗೆ ನೆರವಾಗಲಿದೆ.
ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಶಾಲಾ ಕಾಲೀಜಿನ ಆವರಣದಲ್ಲಿ ಪಾನ್, ತಂಬಾಕು ಸೇರಿದಂತೆ ಇತರ ಮಾದಕ ವಸ್ತುಗಳ ಅಕ್ರಮ ಮಾರಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ಈಗಾಗಲೇ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಗುಟ್ಕಾ, ಪಾನ್ ಮಸಾಲ ಮತ್ತು ಚರಸ್‌ನಂತಹ ನಿಷೇಧಿತ ವಸ್ತುಗಳ ಪೂರೈಕೆದಾರರು ಮತ್ತು ವಿತರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA) ಅನ್ವಯ ಅಸ್ತಿತ್ವದಲ್ಲಿರುವ ಕಾನೂನುಗಳನ್ನು ತಿದ್ದುಪಡಿ ಮಾಡಲು ಸಿದ್ಧತೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು. ಶಿಕ್ಷಣ ಸಂಸ್ಥೆಗಳ ಬಳಿ ಮಾದಕ ವಸ್ತು ಮಾರಾಟ ಮಾಡುವುದು ಗಂಭೀರ ಅಪರಾಧವಾಗಿದ್ದು, ಈ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
MCOCA ತಿದ್ದುಪಡಿ ಪ್ರಗತಿಯಲ್ಲಿದೆ
ಕಾಂಗ್ರೆಸ್ ಶಾಸಕ ಅಸ್ಲಂ ಶೇಖ್ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸಿದ ಫಡ್ನವೀಸ್, ಪ್ರಸ್ತುತ MCOCA (Maharashtra Control of Organised Crime Act 1999) ನಿಬಂಧನೆಗಳ ಅಡಿಯಲ್ಲಿ, ಬೆದರಿಕೆ ಅಥವಾ ದೈಹಿಕ ಹಾನಿಯ ಅಂಶ ಇರಬೇಕು. ನಿಷೇಧಿತ ವಸ್ತುಗಳ ನಿಯಮಿತ ಪೂರೈಕೆದಾರರು ಮತ್ತು ವಿತರಕರ ವಿರುದ್ಧ ಪ್ರಕರಣ ದಾಖಲಿಸಬಹುದಾದ ಕಾನೂನನ್ನು ತಿದ್ದುಪಡಿ ಮಾಡಲು ನಾವು ಈಗಾಗಲೇ ಗೃಹ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.
ಕಾನೂನುಗಳನ್ನು ಬಲಪಡಿಸುವ ಅಗತ್ಯವಿದೆ..
ಈ ವಿಷಯವಾಗಿ ಪ್ರಕರಣಗಳು ದಾಖಲಾಗುತ್ತಿದ್ದರೂ, ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು ದುರ್ಬಲವಾಗಿವೆ, ಅಕ್ರಮ ವ್ಯಾಪಾರವನ್ನು ತಡೆಯಲು ಕಾನೂನನ್ನು ಪರಿಣಾಮಕಾರಿಯಾಗಿ ಮಾಡುವ ಅವಶ್ಯಕತೆಯಿದೆ ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು. ಗುಟ್ಕಾ, ಮಾವಾ, ಸಿಗರೇಟ್, ಸುಪಾರಿ, ಪಾನ್ ಮಸಾಲ, ಚರಸ್ ಮತ್ತು ಗಾಂಜಾ ಪೂರೈಕೆ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ, ಅವುಗಳಲ್ಲಿ ನವಿ ಮುಂಬೈ (1,144), ಅಹ್ಮದ್‌ನಗರ (185), ಜಲ್ನಾ (90), ಅಕೋಲಾ (35), ನಾಸಿಕ್ (133), ಚಂದ್ರಾಪುರ (230), ಸೋಲಾಪುರ (108), ಬುಲ್ಧಾನ (634), ನಾಗ್ಪುರ (49) ಮತ್ತು ಯಾವತ್ಮಲ್ (1,706) ಸೇರಿವೆ ಎಂದು ಅಂಕಿ ಅಂಶದ ಸಮೇತ ಫಡ್ನವೀಸ್ ಮಾಹಿತಿ ನೀಡಿದರು(ಏಜೆನ್ಸೀಸ್).