ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (ಚಿತ್ರ X) 
ದೇಶ

ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಧುರ್ಮರಣ.. ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಸಂತಾಪ Ajit Pawar

ಪುಣೆ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಇಂದು (ಜ.28) ಬೆಳಿಗ್ಗೆ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಅಜಿತ್ ಪವಾರ್ ಅವರು ಜನ ನಾಯಕರಾಗಿದ್ದರು, ಪಕ್ಷದ ತಳಮಟ್ಟದ ಕಾರ್ಯಕರ್ತರ ಸಂಪರ್ಕವನ್ನು ಹೊಂದಿದ್ದರು. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದಾಗಿತ್ತು. ಆಡಳಿತಾತ್ಮಕ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಮತ್ತು ಬಡವರು ಮತ್ತು ದೀನದಲಿತರ ಸಬಲೀಕರಣದ ಬಗ್ಗೆ ಅವರ ಉತ್ಸಾಹ ಕೂಡ ಗಮನಾರ್ಹವಾದದ್ದು. ಅವರ ಅಕಾಲಿಕ ನಿಧನವು ಕೇವಲ ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ಅಜಿತ್ ಪವಾರ್ ಅವರ ಸಾವು ತುಂಬಲಾರದ ನಷ್ಟ; ದ್ರೌಪದಿ ಮುರ್ಮು

ಮಹಾರಾಷ್ಟ್ರದ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ. ಅಜಿತ್​ ಅವರ ಅಕಾಲಿಕ ನಿಧನವು ತುಂಬಲಾರದ ನಷ್ಟವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗೆ, ವಿಶೇಷವಾಗಿ ಸಹಕಾರಿ ವಲಯದಲ್ಲಿ ಅವರು ನೀಡಿದ ಮಹತ್ವದ ಕೊಡುಗೆಗಳಿಗಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು ಎಂದು ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಆಳವಾದ ಸಂತಾಪ ಸೂಚಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಂತಾಪ

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ನಿಧನದ ಸುದ್ದಿ ತೀವ್ರ ಆಘಾತಕಾರಿ ಮತ್ತು ತೀವ್ರ ದುಃಖಕರವಾಗಿದೆ. ದೀರ್ಘ ಮತ್ತು ಭರವಸೆಯ ರಾಜಕೀಯ ಜೀವನವನ್ನು ಪವಾರ್​ ಹೊಂದಿದ್ದರು. ಮೃತರ ಕುಟುಂಬವು ಅನುಭವಿಸಬೇಕಾದ ಅಪಾರ ದುಃಖವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇಡೀ ಪಾವರ್​ ಕುಟುಂಬ ಮತ್ತು ಬೆಂಬಲಿಗರಿಗೆ ಈ ನೋವನ್ನು ನೀಗಿಸುವ ಶಕ್ತಿ ದೇವರು ಕೊಡಲಿ ಎಂದು ಮಲ್ಲಿಕಾರ್ಜುನ್​ ಖರ್ಗೆ ಟ್ವೀಟ್​ ಮಾಡಿದ್ದಾರೆ.

ರಾಹುಲ್ ಗಾಂಧಿ ಸಂತಾಪ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಅವರ ಸಹ ಪ್ರಯಾಣಿಕರು ಇಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ತೀವ್ರ ದುಃಖಕರವಾಗಿದೆ. ಈ ದುಃಖದ ಕ್ಷಣದಲ್ಲಿ ನಾನು ಮಹಾರಾಷ್ಟ್ರದ ಜನರೊಂದಿಗೆ ನಿಲ್ಲುತ್ತೇನೆ. ಈ ಕಷ್ಟದ ಸಮಯದಲ್ಲಿ ಪವಾರ್​ ಕುಟುಂಬ ಮತ್ತು ಅವರ ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ ಎಂದು ರಾಹುಲ್​ ಗಾಂಧಿ ಟ್ವೀಟ್​ ಮಾಡಿದ್ದಾರೆ.
ಪತನಕ್ಕೆ ಕಾರಣವೇನು?
ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನವು ಅಂತಿಮ ಹಂತದಲ್ಲಿ ತಾಂತ್ರಿಕ ತೊಂದರೆಗಳನ್ನು ಎದುರಿಸಿತು. ಹೀಗಾಗಿ, ತುರ್ತು ಭೂಸ್ಪರ್ಶ ಮಾಡಲು ಪ್ರಯತ್ನಿಸುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿತು. ಇದರ ಪರಿಣಾಮವಾಗಿ ವಿಮಾನ ರನ್‌ವೇಯಲ್ಲಿ ಅಪಘಾತ ಸಂಭವಿಸಿತು ಎಂದು ಹೇಳಲಾಗಿದೆ. ಆದರೆ, ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಅಧಿಕಾರಿಗಳು ಇನ್ನೂ ವಿವರವಾದ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಸದ್ಯ, ಘಟನಾ ಸ್ಥಳದಲ್ಲಿ ಅಧಿಕಾರಿಗಳು ಬೀಡುಬಿಟ್ಟಿದ್ದು, ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬರಲಿದೆ (ಏಜೆನ್ಸೀಸ್​).