Maharashtra Virat Kohli fan
- ವಿರಾಟ್ ಕೊಹ್ಲಿ ಅಭಿಮಾನಿಗಳಾದ ಮಹಾರಾಷ್ಟ್ರದ ದಂಪತಿ
- ಮಗುವಿನ ನಾಮಕರಣ ಶಾಸ್ತ್ರದ ವೇಳೆ RCB ತಂಡದ ಜೆರ್ಸಿ ಎಳೆದು ನಾಮಕರಣ
- ಮಗುವಿಗೆ ಅವರ ನೆಚ್ಚಿನ ಬ್ಯಾಟರ್ ವಿರಾಟ್ ಎಂದು ಹೆಸರಿಟ್ಟು ಸಂಭ್ರಮ
VIrat Name To Child: ದೇಶದ ವಿವಿಧ ಭಾಗದಲ್ಲಿ ಐಪಿಎಲ್ ಧಮಾಕ ಒಂದು ಕಡೆಯಾದರೆ, ಮತ್ತೊಂದು ಕಡೆ ಆರ್‌ಸಿಬಿ ಮತ್ತು ವಿರಾಟ್ ಅಭಿಮಾನಿಗಳ ಕ್ರೇಜ್. ಕ್ರೀಡಾಪಟುಗಳ ಮೇಲಿನ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳಲು ನಾನಾ ರೀತಿಯಲ್ಲಿ ಕ್ರಿಕೆಟ್ ಪ್ರೇಮಿಗಳು ಪರದಾಡುವ ಘಟನೆಗಳಿವೆ. ಇಂತಹ ಕುರುಡು ಪ್ರೀತಿಯಿಂದ ಕಳೆದ ವರ್ಷ 11 ಮಂದಿ ಮೃತಪಟ್ಟಿದ್ದ ಘಟನೆಯೂ ಇನ್ನು ನೆನಪಲ್ಲಿ ಉಳಿದಿದೆ. ಈ ಮಧ್ಯೆ ಟ್ರೆಂಡಿಂಗ್ನಲ್ಲಿ ಇರೋದು ಈ ಮಹಾರಾಷ್ಟ್ರದ ದಂಪತಿ. ತಮ್ಮ ಮಗನಿಗೆ ಭಾರತದ ಸ್ಟಾರ್ ಬ್ಯಾಟರ್ ಆದ ವಿರಾಟ್ ಕೊಹ್ಲಿ ಹೆಸರು ಇಡುವ ಮೂಲಕ ಸದ್ಯ ಚರ್ಚೆಯಲ್ಲಿದ್ದಾರೆ.
ಸಾಮಾನ್ಯವಾಗಿ ನಾಮಕರಣ ಶಾಸ್ತ್ರದಲ್ಲಿ ಮಗುವಿನ ಹೆಸರನ್ನು ಕಿವಿಯಲ್ಲಿ ಹೇಳುವುದು ಅಥವಾ ಫಲಕದ ಮೇಲೆ ಬರೆಯುವುದು, ಅಕ್ಕಿಯಲ್ಲಿ ಬರೆಸುವುದು ರೂಢಿ. ಜ್ಯೋತಿಷಿಗಳು ಕೊಟ್ಟ ಪದದಲ್ಲೇ ಹೆಸರನ್ನು ಮಕ್ಕಳಿಗೆ ಇಡುವುದು ವಾಡಿಕೆ. ಆದರೆ, ಈ ಮಹಾರಾಷ್ಟ್ರದ ದಂಪತಿ ಎಲ್ಲ ಸಂಪ್ರದಾಯವನ್ನು ಗಾಳಿಗೆ ತೂರಿ, ತಮ್ಮ ಕ್ರಿಕೆಟ್ ಪ್ರೇಮವನ್ನು ಮಗುವಿನ ಹೆಸರಿನ ಮೂಲಕ ತೋರಿಸಿದ್ದಾರೆ.
ಆರ್‌ಸಿಬಿ ಜೆರ್ಸಿ ಎಳೆದು ನಾಮಕರಣ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕೃತ ಟೀ ಶರ್ಟ್ ಅನ್ನು ಎಳೆದು, ಮಗುವಿನ ಹೆಸರನ್ನು ಮುದ್ರಿಸಿ, ಅದನ್ನು ಅತಿಥಿಗಳ ಮುಂದೆ ಅನಾವರಣಗೊಳಿಸಿದರು. ಜೆರ್ಸಿ ಮೇಲೆ ವಿರಾಟ್ ಎಂದು ಹೆಸರು ಬರೆಸಿ ನಾಮಕರಣ ಮಾಡಿದರು.
ಜೆರ್ಸಿ ತೆರೆದ ಕೂಡಲೇ ಅಲ್ಲಿ 'VIRAT' ಎಂಬ ಹೆಸರು ರಾರಾಜಿಸಿತು. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್‌ಸಿಬಿ ಅಭಿಮಾನಿಗಳು ಮತ್ತು ಕೊಹ್ಲಿ ಅಭಿಮಾನಿಗಳು ಈ ದಂಪತಿಯ ಸೃಜನಶೀಲತೆಯನ್ನು ಕೊಂಡಾಡುತ್ತಿದ್ದಾರೆ.
ನೆಟ್ಟಿಗರು ಏನಂದ್ರು?
ನಾನು ನೋಡಿದ ಅತ್ಯಂತ ಸುಂದರ ಮತ್ತು ಬೆಸ್ಟ್ ನಾಮಕರಣ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅವನ ಹೆಸರು ವಿರಾಟ್ ಆಗಿರಬಹುದು ಆದರೆ ಮುಂದೆ ಆತ ಚೆನ್ನೈ ಸೂಪರ್ ಕಿಂಗ್ಸ್ನ ಪ್ರೇಮಿಯಾಗ್ತಾನೆ ನೋಡ್ತಿರಿ ಎಂದು ಸವಾಲೆಸೆದಿದ್ದಾರೆ. ಮತ್ತೊಬ್ಬ ಬಳಕೆದಾರರು ನಾನು ನನ್ನ ಮಗುವಿಗೆ ಇದೇ ಹಸರನ್ನು ಇಡುತ್ತೇನೆ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಹೆಸರಿನ ಅರ್ಥವೇನು?
ವಿರಾಟ್ ಎನ್ನುವ ಹೆಸರು ಶಕ್ತಿ, ಧೈರ್ಯ ಮತ್ತು ಭವ್ಯತೆಯನ್ನು ಸೂಚಿಸುತ್ತದೆ. ಈ ಹೆಸರು ನಾಮಕರಣ ಮಾಡುವುದು ಉತ್ತಮ ಆಯ್ಕೆ. ಈ ಹೆಸರು ಶೌರ್ಯ ಎನ್ನುವ ಅರ್ಥವನ್ನು ನೀಡುತ್ತದೆ. ಜನಪ್ರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕಾರಣದಿಂದ ಈ ಹೆಸರು ಈಗ ಹೆಚ್ಚು ಟ್ರೆಂಡಿಂಗ್‌ನಲ್ಲಿದೆ, (ಏಜೆನ್ಸೀಸ್)