ಮಹಾರಾಷ್ಟ್ರ ಸಿಎಂ ಬುಲೆಟ್ ಸವಾರಿ: ಮೋದಿ ಕರೆಗೆ ಓಗೊಟ್ಟ ಫಡ್ನವೀಸ್! ಕಾರುಗಳ ಕಾನ್ವಾಯ್ ಬದಿಗೊತ್ತಿ ಇಂಧನ ಉಳಿತಾಯದ ಪಾಠ!
ಮುಂಬೈ: ದೇಶದ ಹಿತದೃಷ್ಟಿಯಿಂದ ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(Devendra Fadnavis Bullet Ride) ಅದ್ಭುತವಾಗಿ ಸ್ಪಂದಿಸಿದ್ದಾರೆ. ಗುರುವಾರ ತಮ್ಮ ಐಷಾರಾಮಿ ಕಾರುಗಳ ಕಾನ್ವಾಯ್ ಅನ್ನು ಬಿಟ್ಟು, ಸ್ವತಃ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮೋಟಾರ್‌ಸೈಕಲ್ ಚಲಾಯಿಸಿಕೊಂಡು ವಿಧಾನಭವನಕ್ಕೆ ಆಗಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯ ಭೀತಿಯ ನಡುವೆ, ಇಂಧನ ಉಳಿತಾಯದ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಬುಲೆಟ್ ಏರಿ ಬಂದ ಸಿಎಂ: ಆಶೀಶ್ ಶೆಲಾರ್ ಸಾಥ್
ತಮ್ಮ ಅಧಿಕೃತ ನಿವಾಸ ವರ್ಷಾದಿಂದ ವಿಧಾನಭವನದವರೆಗೆ ಸಿಎಂ ಫಡ್ನವೀಸ್ ಬುಲೆಟ್ ಓಡಿಸಿಕೊಂಡು ಬಂದರು. ಅವರ ಹಿಂದೆ ಬಿಜೆಪಿ ನಾಯಕ ಮತ್ತು ಸಚಿವ ಆಶೀಶ್ ಶೆಲಾರ್ ಅವರು ಕುಳಿತಿದ್ದರು. ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ ಕೂಡ ಕಾರುಗಳನ್ನು ಬಳಸುವ ಬದಲು 'ಬಜಾಜ್ ಪಲ್ಸರ್ 220 ಬೈಕ್‌ಗಳ ಮೇಲೆ ಅವರನ್ನು ಹಿಂಬಾಲಿಸಿದ್ದು ವಿಶೇಷವಾಗಿತ್ತು.
ಈ ಚಿತ್ರಗಳನ್ನು ಎಕ್ಸ್ನಲ್ಲಿ ಹಂಚಿಕೊಂಡ ಫಡ್ನವೀಸ್, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸ್ಪಂದಿಸಿ, ದೇಶದ ಉಳಿತಾಯ ಕ್ರಮಗಳಿಗಾಗಿ ನನ್ನದೊಂದು ಸಣ್ಣ ಕೊಡುಗೆ. ಪ್ರತಿಯೊಬ್ಬ ನಾಗರಿಕರೂ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಮೂಲಕ ಇಂಧನ ಉಳಿತಾಯಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾನ್ವಾಯ್ ಗಾತ್ರವನ್ನು ಕಡಿತಗೊಳಿಸಿದ್ದರು. ಸಾಮಾನ್ಯವಾಗಿ 15 ಕಾರುಗಳ ಬೆಂಗಾವಲು ಪಡೆಯೊಂದಿಗೆ ಚಲಿಸುತ್ತಿದ್ದ ಮೋದಿ, ಈಗ ಅದನ್ನು ಕೇವಲ 2 ಕಾರುಗಳಿಗೆ ಸೀಮಿತಗೊಳಿಸಿದ್ದಾರೆ. ಪ್ರಧಾನಿಯವರ ಈ ಶಿಸ್ತಿನ ನಡೆಯನ್ನು ಅನುಸರಿಸಿ ಫಡ್ನವೀಸ್ ಈ ಕ್ರಮ ಕೈಗೊಂಡಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಹೊಸ 'SOP' ಜಾರಿ
ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರವು ಸರ್ಕಾರಿ ನೌಕರರು ಮತ್ತು ಸಚಿವರಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ವಿದೇಶಿ ಪ್ರವಾಸ ರದ್ದು: ಸಚಿವರ ಎಲ್ಲಾ ವಿದೇಶಿ ಪ್ರವಾಸಗಳನ್ನು ರದ್ದುಗೊಳಿಸಲಾಗಿದೆ ಮತ್ತು ಹೊಸ ಪ್ರವಾಸಗಳನ್ನು ಯೋಜಿಸದಂತೆ ಸೂಚಿಸಲಾಗಿದೆ.
ಇ-ವಾಹನಗಳ ಬಳಕೆ: ಪೆಟ್ರೋಲ್-ಡೀಸೆಲ್ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಉತ್ತೇಜನ.
ವರ್ಚುವಲ್ ಮೀಟಿಂಗ್: ಭೌತಿಕ ಸಭೆಗಳ ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲು ಆದ್ಯತೆ.
ಸಾರ್ವಜನಿಕ ಸಾರಿಗೆ: ಹಿರಿಯ ಅಧಿಕಾರಿಗಳು ವಾರಕ್ಕೊಮ್ಮೆಯಾದರೂ ಮೆಟ್ರೋ, ಲೋಕಲ್ ಟ್ರೈನ್ ಅಥವಾ ಬಸ್ ಮೂಲಕ ಪ್ರಯಾಣಿಸಬೇಕು.
ಕಾರ್ ಪೂಲಿಂಗ್: ಅಧಿಕಾರಿಗಳು ಪ್ರತ್ಯೇಕವಾಗಿ ಹೋಗುವ ಬದಲು ಒಂದೇ ವಾಹನದಲ್ಲಿ ಪ್ರಯಾಣಿಸಲು ಸೂಚನೆ ನೀಡಲಾಗಿದೆ.
ಫಡ್ನವೀಸ್ ಸವಾರಿ ಮಾಡಿದ 'ರಾಯಲ್ ಎನ್‌ಫೀಲ್ಡ್' ವಿಶೇಷತೆ
ಸಿಎಂ ಫಡ್ನವೀಸ್ ಸವಾರಿ ಮಾಡಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಭಾರತದ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿದೆ.
ಬೆಲೆ: ಸುಮಾರು 1.85 ಲಕ್ಷದಿಂದ 2.21 ಲಕ್ಷ ರೂಪಾಯಿ (ಎಕ್ಸ್ ಶೋರೂಂ).
ಎಂಜಿನ್: 349 ಸಿಸಿ, ಸಿಂಗಲ್ ಸಿಲಿಂಡರ್ ಜೆ-ಸೀರೀಸ್ ಎಂಜಿನ್.
ಸಾಮರ್ಥ್ಯ: 20 ಅಶ್ವಶಕ್ತಿ (HP) ಮತ್ತು 27 Nm ಟಾರ್ಕ್ ಉತ್ಪಾದಿಸುತ್ತದೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಕೂಡ ಬಿಹಾರದ ರ‍್ಯಾಲಿಯೊಂದರಲ್ಲಿ ಇದೇ ಮಾದರಿಯ ಬೈಕ್ ಸವಾರಿ ಮಾಡಿ ಸುದ್ದಿಯಾಗಿದ್ದರು.
ಪಶ್ಚಿಮ ಏಷ್ಯಾದಲ್ಲಿನ ಅಸ್ಥಿರತೆ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಬಹುದಾದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರ್ಕಾರದ ಈ ಮುನ್ನೆಚ್ಚರಿಕಾ ಕ್ರಮ ಮತ್ತು ಮುಖ್ಯಮಂತ್ರಿಗಳೇ ಮಾದರಿಯಾಗಿ ನಿಂತಿರುವುದು ದೇಶಕ್ಕೆ ಹೊಸ ದಿಕ್ಸೂಚಿಯಾಗಿದೆ,(ಏಜೆನ್ಸೀಸ್).