ದೆಹಲಿ: ಶನಿವಾರ (ಡಿ.6) ಮಹಾಪರಿನಿರ್ವಾಣ ದಿವಸದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಅನೇಕ ನಾಯಕರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ಮಾನವ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸಲು ಇಂದಿನ ಪೀಳಿಗೆಗೆ ಸ್ಫೂರ್ತಿ ನೀಡಿದ್ದಾರೆ, ಅವರ ಆದರ್ಶವು ಭಾರತದ ಹಾದಿಯನ್ನು ಬೆಳಗಿಸುತ್ತಲೇ ಇರುತ್ತದೆ, ಅವರ ದೂರದೃಷ್ಟಿಯ ನಾಯಕತ್ವ ಮತ್ತು ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕತೆಗೆ ಅಚಲವಾದ ಬದ್ಧತೆ ನಮ್ಮ ರಾಷ್ಟ್ರೀಯ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಸಂವಿಧಾನ ಅಪಾಯದಲ್ಲಿದೆ ಎಂದ ರಾಹುಲ್ ಗಾಂಧಿ..
ಇತ್ತ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿದರು. ಸಂಸತ್ತಿನ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 70 ನೇ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್, ಅಂಬೇಡ್ಕರ್ ಒಬ್ಬ ಸದಾ ಆದರ್ಶಪುರಷರಾಗಿದ್ದು, ಅವರ ಆಲೋಚನೆಗಳು ಭಾರತದ ಪ್ರಜಾಪ್ರಭುತ್ವ ಚೌಕಟ್ಟಿಗೆ ಸದಾ ಮಾರ್ಗದರ್ಶನ ನೀಡುತ್ತವೆ ಎಂದು ಹೇಳಿದರು.
ತಮ್ಮ ಎಕ್ಸ್ ಖಾತೆಯಲ್ಲೂ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ಮಹಾಪರಿನಿರ್ವಾಣ ದಿವಸದಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ವಿನಮ್ರ ನಮನಗಳು, ಅವರ ಕಾಲಾತೀತ ಸಮಾನತೆ, ನ್ಯಾಯ ಮತ್ತು ಮಾನವ ಘನತೆಯ ಪರಂಪರೆಯು ಸಂವಿಧಾನವನ್ನು ರಕ್ಷಿಸುವ ನನ್ನ ಸಂಕಲ್ಪವನ್ನು ಬಲಪಡಿಸುತ್ತದೆ ಮತ್ತು ಹೆಚ್ಚು ಸಮಗ್ರ, ಸಹಾನುಭೂತಿಯ ಭಾರತಕ್ಕಾಗಿ ನಮ್ಮ ಸಾಮೂಹಿಕ ಹೋರಾಟಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಬರೆದಿದ್ದರು.
ಸಂಸತ್ ಭವನದ ಆವರಣದಲ್ಲಿನ ಪ್ರೇರಣಾ ಸ್ಥಳದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಮತ್ತು ಇತರ ಹಿರಿಯ ಸಚಿವರು ಭಾಗವಹಿಸಿದ್ದರು. ಡಿಸೆಂಬರ್ 6, ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಭಾರತದಲ್ಲಿ ಮಹಾಪರಿನಿರ್ವಾಣ ದಿವಸ್ ಎಂದು ಆಚರಿಸಲಾಗುತ್ತದೆ(ಏಜೆನ್ಸೀಸ್).