Sambit Patra | ರಾಹುಲ್ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ ಬಿಜೆಪಿ ಸಂಸದ
ನವದೆಹಲಿ: ಲೋಕಸಭೆಯಲ್ಲಿ ಪೇಪರ್ ಲೀಕ್ ತಡೆ ವಿಧೇಯಕದ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಬಿಜೆಪಿ ತಿರುಗೇಟು ನೀಡಿದೆ. ಸಂಸತ್ ಚಲೋ ಸಂದರ್ಭದಲ್ಲಿ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಆದೇಶಿಸಿದ್ದರು ಎಂಬ ರಾಹುಲ್ ಹೇಳಿಕೆಯನ್ನು ಬಿಜೆಪಿ ಸಂಪೂರ್ಣವಾಗಿ ತಳ್ಳಿಹಾಕಿದ್ದು, ಅವರು ಸದನವನ್ನು ತಪ್ಪುದಾರಿಗೆ ಎಳೆದಿದ್ದಾರೆ ಎಂದು ಆರೋಪಿಸಿದೆ.
ಸದನ ಮುಂದೂಡಲ್ಪಟ್ಟ ತಕ್ಷಣ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಆರೋಪಗಳು ಸಂಪೂರ್ಣ ಸುಳ್ಳು ಎಂದರು. ವಿದ್ಯಾರ್ಥಿಗಳ ಸಂಸತ್ ಚಲೋ ಸಂದರ್ಭದಲ್ಲಿ ಪೊಲೀಸರು ಯಾವುದೇ ರೀತಿಯ ಗುಂಡಿನ ದಾಳಿ ನಡೆಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಮಿತ್ ಶಾ ಗುಂಡು ಹಾರಿಸಲು ಆದೇಶಿಸಿದ್ದರು ಎಂಬ ರಾಹುಲ್ ಗಾಂಧಿ ಹೇಳಿಕೆ ವಾಸ್ತವಕ್ಕೆ ದೂರವಾದದ್ದು ಎಂದ ಪಾತ್ರ, ಅಲ್ಲಿ ಯಾವುದೇ ಗುಂಡಿನ ದಾಳಿಯೇ ನಡೆದಿಲ್ಲ ಎಂದಮೇಲೆ, ಅಂತಹ ಆದೇಶ ನೀಡುವ ಪ್ರಶ್ನೆ ಎಲ್ಲಿಂದ ಬರುತ್ತದೆ..? ಎಂದು ಪ್ರಶ್ನಿಸಿದರು.
ಸಾರ್ವಜನಿಕ ಪ್ರತಿಭಟನೆಗಳ ಸಂದರ್ಭದಲ್ಲಿ ಅನುಸರಿಸಲಾಗುವ ನಿಯಮಗಳನ್ನು ವಿವರಿಸಿದ ಅವರು, ಬಲಪ್ರಯೋಗದ ಕುರಿತು ಸ್ಥಳದಲ್ಲೇ ತೀರ್ಮಾನ ತೆಗೆದುಕೊಳ್ಳುವುದು ಅಲ್ಲಿರುವ ಮ್ಯಾಜಿಸ್ಟ್ರೇಟ್ ಹೊರತು ಕೇಂದ್ರ ಗೃಹ ಸಚಿವರಲ್ಲ ಎಂದರು. ಪ್ರತಿಭಟನೆ ಅಥವಾ ರ್ಯಾಲಿ ನಡೆಯುವ ಸ್ಥಳದಲ್ಲಿ ಮ್ಯಾಜಿಸ್ಟ್ರೇಟ್ ಜೊತೆಗೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿರುತ್ತದೆ. ಸ್ಥಳದಲ್ಲೇ ಪರಿಸ್ಥಿತಿಗೆ ತಕ್ಕಂತೆ ಮ್ಯಾಜಿಸ್ಟ್ರೇಟ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಗೃಹ ಸಚಿವರು ಇಂತಹ ಆದೇಶಗಳನ್ನು ನೀಡುವುದಿಲ್ಲ ಎಂದು ಹೇಳಿದ ಪಾತ್ರಾ, ರಾಹುಲ್ ಗಾಂಧಿ ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.
ಅಷ್ಟೇ ಅಲ್ಲದೆ, ಸದನದಲ್ಲಿ ಅಮಿತ್ ಶಾ ಗೈರುಹಾಜರಿಯನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದನ್ನೂ ಪಾತ್ರ ವಿರೋಧಿಸಿದರು. ಗೃಹ ಸಚಿವರು ಪೂರ್ವನಿಯೋಜಿತ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದರು ಮತ್ತು ಅವರ ಕಾರ್ಯಕ್ರಮದ ವಿವರಗಳು ಈಗಾಗಲೇ ಸಾರ್ವಜನಿಕವಾಗಿ ತಿಳಿದಿದ್ದವು ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ತಮ್ಮ ಭಾಷಣದ ವೇಳೆ ವಿದ್ಯಾರ್ಥಿಗಳನ್ನು ವಿಂಗಡಿಸಿ ಮಾತನಾಡಿರುವುದಕ್ಕೆ ಬಿಜೆಪಿ ನಾಯಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದೇಶದಲ್ಲಿ ವಿದ್ಯಾರ್ಥಿಗಳು, ಮೂರ್ಖರು ಮತ್ತು ಕುರುಡು ಬೆಂಬಲಿಗರು ಎಂಬ ಮೂರು ವರ್ಗದ ಜನರಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದು ದೇಶದ ವಿದ್ಯಾರ್ಥಿಗಳಿಗೆ ಮಾಡಿದ ಅಪಮಾನವಾಗಿದ್ದು, ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯೂ ಗೌರವಕ್ಕೆ ಅರ್ಹ ಎಂದು ಪಾತ್ರ ಪ್ರತಿಪಾದಿಸಿದರು.
ಇದಲ್ಲದೆ, ಅಮಿತ್ ಶಾ ಅವರ ಬೆಂಗಾವಲು ಪಡೆಯಲ್ಲಿ 30 ವಾಹನಗಳಿದ್ದವು ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಳ್ಳಿಹಾಕಿದ ಪಾತ್ರ, ತಮ್ಮ ಈ ಪ್ರತಿಪಾದನೆಯನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದರು. ಅಮಿತ್ ಶಾ ಹೆದರಿದ್ದಾರೆ ಎಂಬ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪಾತ್ರ, ಗೃಹ ಸಚಿವರು ನಕ್ಸಲಿಸಂ ವಿರುದ್ಧ ಸರ್ಕಾರದ ಹೋರಾಟದ ನೇತೃತ್ವ ವಹಿಸಿದ್ದಾರೆ ಮತ್ತು ನಕ್ಸಲೀಯರೇ ಅವರಿಗೆ ಹೆದರುತ್ತಾರೆ ಎಂದು ಸಮರ್ಥಿಸಿಕೊಂಡರು.
ಹಿಂದಿನ ಕಾಂಗ್ರೆಸ್ ಸರ್ಕಾರಗಳು ವಿದ್ಯಾರ್ಥಿ ಚಳವಳಿಗಳ ವಿರುದ್ಧ ಬಲಪ್ರಯೋಗ ಮಾಡಿದ್ದವು ಎಂದು ಆರೋಪಿಸಿದ ಬಿಜೆಪಿ ಸಂಸದ, ಪ್ರಸ್ತುತ ಸರ್ಕಾರವು ಗಾಂಧಿ ಪೀಳಿಗೆಯನ್ನು ಉತ್ತೇಜಿಸುವ ಬದಲು ಜೆನ್ ಜಿ ಯುವಕರ ಆಶೋತ್ತರಗಳನ್ನು ಈಡೇರಿಸಲು ಬದ್ಧವಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಆರೋಪಗಳೇನು...?
ಇನ್ನೊಂದೆಡೆ, ನೀಟ್ ಪೇಪರ್ ಲೀಕ್ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂಬ ವಿಚಾರ ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಆದೇಶ ನೀಡಿದ್ದರು. ಅವರು ನಮ್ಮ ದೇಶದ ವಿದ್ಯಾರ್ಥಿಗಳ ದೇಹಕ್ಕೆ ಪೆಲೆಟ್‌ಗಳು ತೂರುವಂತೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಲು ಗೃಹ ಸಚಿವರಿಗೆ ಅಥವಾ ಪ್ರಧಾನ ಮಂತ್ರಿಗೆ ಮಾತ್ರ ಅಧಿಕಾರವಿರುತ್ತದೆ ಎಂದರು.
ರಾಹುಲ್ ಗಾಂಧಿ ಅವರ ಈ ಆರೋಪವನ್ನು ಆಡಳಿತಾರೂಢ ಬಿಜೆಪಿ ಮತ್ತು ಎನ್‌ಡಿಎ ಸದಸ್ಯರು ತೀವ್ರವಾಗಿ ಖಂಡಿಸಿದರು. ಕೇಂದ್ರ ಗೃಹ ಸಚಿವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ, ಕ್ಷಮೆಯಾಚನೆಗೆ ಪಟ್ಟು ಹಿಡಿದರು. ಈ ವೇಳೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸಂಸತ್ತಿನಲ್ಲಿ ಆರೋಪ ಮಾಡುವಾಗ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ನೆನಪಿಸಿದರು(ಏಜೆನ್ಸೀಸ್).