ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ: ಒಂದೇ ಒಂದು ಟೋಪಿಯಿಂದ ಸಿಕ್ಕಿಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ಸ್! 
ದೇಶ

ಸಿನಿಮಾ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ: ಒಂದೇ ಒಂದು ಟೋಪಿಯಿಂದ ಸಿಕ್ಕಿಬಿದ್ದ ಸೋಷಿಯಲ್ ಮೀಡಿಯಾ ಸ್ಟಾರ್ಸ್! Madurai Gold Heist

ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳನ್ನು ಪ್ರಮುಖ ಆರೋಪಿ ನಿಶಾಂತ್‌ನ ಪ್ರೇಯಸಿ ಹಾಗೂ ಇನ್‌ಸ್ಟಾಗ್ರಾಮ್ ಸ್ಟಾರ್ ಮೀನಾಕ್ಷಿ ಮತ್ತು ನಿಶಾಂತ್‌ನ ತಂದೆ ಸುರೇಶ್ ಎಂದು ಗುರುತಿಸಲಾಗಿದೆ.

ಚೆನ್ನೈ: ತಮಿಳುನಾಡಿನ ಮದುರೈನಲ್ಲಿರುವ ಪ್ರತಿಷ್ಠಿತ 'ತನಿಷ್ಕ್' ( Madurai Gold Heist ) ಚಿನ್ನಾಭರಣ ಮಳಿಗೆಯಲ್ಲಿ ನಡೆದಿದ್ದ ಭಾರಿ ದರೋಡೆ ಪ್ರಕರಣಕ್ಕೆ ಇದೀಗ ರೋಚಕ ಟ್ವಿಸ್ಟ್ ಸಿಕ್ಕಿದೆ. ಸಿನಿಮಾ ಕಥೆಯನ್ನೂ ಮೀರಿಸುವಂತೆ ಪ್ಲ್ಯಾನ್ ಮಾಡಿ ನಡೆದಿದ್ದ ಈ ಚಿನ್ನದ ದರೋಡೆಯ ಹಿಂದೆ ಸೋಷಿಯಲ್ ಮೀಡಿಯಾ ಸ್ಟಾರ್‌ಗಳ ಕೈವಾಡವಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಸೇರಿದಂತೆ ಇಬ್ಬರನ್ನು ಮದುರೈ ನಗರ ಪೊಲೀಸರು ಬಂಧಿಸಿದ್ದಾರೆ. ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಆಗಿರುವ ಯೂಟ್ಯೂಬರ್ ನಿಶಾಂತ್ ಸದ್ಯ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಪೊಲೀಸರ ಬಲೆಗೆ ಬಿದ್ದಿರುವ ಆರೋಪಿಗಳನ್ನು ಪ್ರಮುಖ ಆರೋಪಿ ನಿಶಾಂತ್‌ನ ಪ್ರೇಯಸಿ ಹಾಗೂ ಇನ್‌ಸ್ಟಾಗ್ರಾಮ್ ಸ್ಟಾರ್ ಮೀನಾಕ್ಷಿ ಮತ್ತು ನಿಶಾಂತ್‌ನ ತಂದೆ ಸುರೇಶ್ ಎಂದು ಗುರುತಿಸಲಾಗಿದೆ. ಬಂಧಿತ ಮೀನಾಕ್ಷಿ ಆನ್‌ಲೈನ್‌ನಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು (Beauty products) ಪ್ರಮೋಟ್ ಮಾಡುವ ಮೂಲಕ ಅಪಾರ ಫಾಲೋವರ್ಸ್ ಹೊಂದಿರುವ ಇನ್‌ಫ್ಲುಯೆನ್ಸರ್ ಆಗಿದ್ದಾಳೆ.

ಇನ್ನು ದರೋಡೆಯ ಪ್ರಮುಖ ಸೂತ್ರಧಾರನಾದ 25 ವರ್ಷದ ನಿಶಾಂತ್ ಅರುಳ್‌ಪೆರುಂ ಜ್ಯೋತಿ ನಗರದ ನಿವಾಸಿಯಾಗಿದ್ದು, ಯೂಟ್ಯೂಬರ್ ಜತೆಗೆ ಬೈಕ್ ಟ್ಯಾಕ್ಸಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದನು. ಸದ್ಯ ಮೀನಾಕ್ಷಿ ಮತ್ತು ಸುರೇಶ್‌ರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ತಲೆಮರೆಸಿಕೊಂಡಿರುವ ನಿಶಾಂತ್ ಸಿಕ್ಕಿಬಿದ್ದ ನಂತರವಷ್ಟೇ ಕಳ್ಳತನವಾದ ಉಳಿದ ಚಿನ್ನಾಭರಣಗಳ ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹೈ-ಪ್ರೊಫೈಲ್ ದರೋಡೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಮೊದಲ ಸುಳಿವು ಸಿಕ್ಕಿದ್ದೇ ಒಂದು ಟೋಪಿಯ ಮೂಲಕ! ದರೋಡೆ ನಡೆಯುವುದಕ್ಕೂ ಕೆಲವು ದಿನಗಳ ಮೊದಲು ವ್ಯಕ್ತಿಯೊಬ್ಬ ಗ್ರಾಹಕನ ಸೋಗಿನಲ್ಲಿ ಮೂರು ಬಾರಿ ಶೋರೂಂಗೆ ಭೇಟಿ ನೀಡಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪ್ರತಿ ಬಾರಿ ಬಂದಾಗಲೂ ಆತ ಬೇರೆ ಬೇರೆ ಬಟ್ಟೆಗಳನ್ನು ಧರಿಸಿದ್ದನಾದರೂ, ಒಂದೇ ಬಣ್ಣದ ಟೋಪಿಯನ್ನು ಧರಿಸಿದ್ದನು ಮತ್ತು ಆತನ ಒಂದು ಕೈಗೆ ಬ್ಯಾಂಡೇಜ್ ಸುತ್ತಲಾಗಿತ್ತು.

ಶೋರೂಂನಲ್ಲಿ ಚಿನ್ನಾಭರಣಗಳನ್ನು ಹೇಗೆ ಜೋಡಿಸಿ ಇಡಲಾಗಿದೆ ಎಂಬುದನ್ನು ಅರಿಯಲು ಆತ ಈ ರೀತಿ ಭೇಟಿ ನೀಡಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದರು. ಅಲ್ಲದೆ, ನವೆಂಬರ್ 5ರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮುಸುಕುಧಾರಿ ವ್ಯಕ್ತಿಯೊಬ್ಬ ಕಟ್ಟಡದ ಹೊರಗಿನ ಕಬ್ಬಿಣದ ರೇಲಿಂಗ್‌ಗಳನ್ನು ಹತ್ತುತ್ತಿರುವುದು ಕಂಡುಬಂದಿತ್ತು.

ಸಂಪೂರ್ಣ ಸಿದ್ಧತೆಯೊಂದಿಗೆ ನವೆಂಬರ್ 12ರ ಮುಂಜಾನೆ 3:34ರ ಸುಮಾರಿಗೆ ಶೋರೂಂ ಬಳಿ ಬಂದ ಕಳ್ಳ, ಕಟ್ಟಡದ ಹೊರಭಾಗದ ಕಬ್ಬಿಣದ ರೇಲಿಂಗ್‌ಗಳ ಸಹಾಯದಿಂದ ಸರಸರನೆ ಮೂರನೇ ಮಹಡಿಯ ಟೆರೇಸ್‌ಗೆ ಹತ್ತಿದ್ದಾನೆ. ಬಳಿಕ ಅಲ್ಲಿಂದ ಅಪೂರ್ಣಗೊಂಡಿದ್ದ ಲಿಫ್ಟ್ ಶಾಫ್ಟ್ (Elevator shaft) ಮೂಲಕ ಕೆಳಗಿಳಿದು ನೇರವಾಗಿ ಶೋರೂಂ ಒಳಗೆ ಪ್ರವೇಶಿಸಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶೋರೂಂ ಒಳಗೇ ಇದ್ದ ಈ ಖತರ್ನಾಕ್ ಕಳ್ಳ, ಅತ್ಯಂತ ಬೆಲೆಬಾಳುವ ಚಿನ್ನಾಭರಣಗಳನ್ನು ಮಾತ್ರ ಆಯ್ದು ತನ್ನಲ್ಲಿದ್ದ ಬ್ಯಾಗ್‌ಗಳಲ್ಲಿ ತುಂಬಿಕೊಂಡಿದ್ದಾನೆ. ಬಳಿಕ ಅದೇ ಮಾರ್ಗವಾಗಿ ಹೊರಬಂದು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದನು.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದ ಒಂದೇ ಬಣ್ಣದ ಟೋಪಿ, ಕೈಯಲ್ಲಿದ್ದ ಬ್ಯಾಂಡೇಜ್ ಹಾಗೂ ತಾಂತ್ರಿಕ ಸಾಕ್ಷ್ಯಗಳ ಬೆನ್ನುಹತ್ತಿದ ಮದುರೈ ನಗರ ಪೊಲೀಸರಿಗೆ ಇದು ಯೂಟ್ಯೂಬರ್ ನಿಶಾಂತ್‌ನ ಕೃತ್ಯ ಎಂಬುದು ಖಚಿತವಾಗಿದೆ. ಈತನ ಕೃತ್ಯಕ್ಕೆ ಪ್ರೇಯಸಿ ಮೀನಾಕ್ಷಿ ಹಾಗೂ ತಂದೆ ಸುರೇಶ್ ಸಾಥ್ ನೀಡಿರುವುದು ತನಿಖೆಯಲ್ಲಿ ಬಯಲಾಗಿದ್ದು, ಸದ್ಯ ಇಬ್ಬರನ್ನೂ ಕಂಬಿ ಹಿಂದೆ ತಳ್ಳಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್‌ಗಳಾಗಿ ಮೆರೆಯುತ್ತಿದ್ದ ಯುವಕ-ಯುವತಿ ಸುಲಭವಾಗಿ ಹಣ ಮಾಡುವ ದುರಾಸೆಗೆ ಬಿದ್ದು ಇದೀಗ ಜೈಲು ಪಾಲಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್​).