ಭೋಪಾಲ್: ಮಧ್ಯಪ್ರದೇಶದಲ್ಲಿ ಭಾರತೀಯ ಚುನಾವಣೆ ಆಯೋಗ ನಡೆಸಿದ್ದ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(SIR) ಕರಡು ಪಟ್ಟಿ ಇಂದು(ಡಿ. 23) ಬಿಡುಗಡೆಯಾಗಿದ್ದು, ಮತಪಟ್ಟಿಯಿಂದ ಸುಮಾರು 42 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿದೆ.
ಚುನಾವಣೆ ಆಯೋಗ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಸುಮಾರು 42.74 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪೈಕಿ 19.19 ಲಕ್ಷ ಪುರುಷರು ಮತ್ತು 23.64 ಲಕ್ಷ ಮಹಿಳೆಯರು ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಮುಖ್ಯ ಚುನಾವಣಾಧಾಕಾರಿ ಸಂಜೀವ್ ಕುಮಾರ್ ಝಾ, ರಾಜ್ಯದಲ್ಲಿ ಒಟ್ಟು 5,74,6,143 ಮತದಾರರಲ್ಲಿ 5 ಕೋಟಿ 31 ಲಕ್ಷ 31 ಸಾವಿರದ 983 ಮತದಾರರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ಉಳಿದ 42 ಲಕ್ಷ 74 ಸಾವಿರದ 160 ಮತದಾರ ಹೆಸರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಅದರಲ್ಲಿ 31.51 ಲಕ್ಷ ಮತದಾರರು ಸ್ಥಳಾಂತರಗೊಂಡಿದ್ದು, 8.46 ಲಕ್ಷ ಮತದಾರರು ಮೃತಪಟ್ಟಿದ್ದು ಹಾಗೂ .77 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿದ್ದರಿಂದ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ.
ಭೋಪಾಲ್ನಲ್ಲಿ 4,38,875 ಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ. ಗೋವಿಂದಪುರ ಮತ್ತು ನರೇಲಾ ಕ್ಷೇತ್ರಗಳು ಗರಿಷ್ಠ ಸಂಖ್ಯೆಯ ಮತದಾರರನ್ನು ತೆಗೆದುಹಾಕಲಾಗಿದೆ. ಗೋವಿಂದಪುರದಲ್ಲಿ 97,052, ನರೇಲಾದಲ್ಲಿ 81,235 ಮತದಾರರ ಹೆಸರು ಅಳಿಸಲಾಗಿದೆ. ಸೆಂಟ್ರಲ್ ಕ್ಷೇತ್ರದಲ್ಲಿ 67,304, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ, 51,058, ನೈಋತ್ಯ ವಿಧಾನಸಭಾ ಕ್ಷೇತ್ರದಲ್ಲಿ, 64,432 ಮತದಾರರ ಹೆಸರನ್ನು ತೆಗೆಯಲಾಗಿದೆ.
ಈ ವೇಳೆ ಮತಪಟ್ಟಿಯಿಂದ ಅರ್ಹ ಮತದಾರರು ಹೊರಗುಳಿದಿದ್ದರೆ, ಒಂದು ತಿಂಗಳೊಳಗೆ ಆಕ್ಷೇಪಣೆ ಸಲ್ಲಿಸಬಹುದು. ಫೆ. 21ರಂದು ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ (ಏಜೆನ್ಸೀಸ್).