ಕೊಲ್ಹಾಪುರಕ್ಕೆ ಮರಳಲಿದೆ ಮುದ್ದು ಆನೆ 'ಮಾಧುರಿ': ಮಹಾದೇವಿಯ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ ಎಂದ ವಂತಾರಾ! Vantara  
ದೇಶ

ಕೊಲ್ಹಾಪುರಕ್ಕೆ ಮರಳಲಿದೆ ಮುದ್ದು ಆನೆ 'ಮಾಧುರಿ': ಮಹಾದೇವಿಯ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ ಎಂದ ವಂತಾರಾ! Vantara

ಪ್ರಮುಖ ಮುಖ್ಯಾಂಶಗಳು

  • ಕೊಲ್ಹಾಪುರಕ್ಕೆ ವಾಪಸ್ ಆಗಲಿದೆ ಮಾಧುರಿ ಆನೆ
  • ಕೊಲ್ಹಾಪುರಕ್ಕೆ ಮರಳಿದ ಮೇಲೂ ವಂತಾರಾದಿಂದ ಮಾಧುರಿಗೆ ನಿರಂತರ ಬೆಂಬಲ
  • ಮಾಧುರಿ ಯೋಗಕ್ಷೇಮವೇ ನಮ್ಮ ಮೊದಲ ಆದ್ಯತೆ ಎಂದ ವಂತಾರಾ
  • ಪ್ರತಿ ಹದಿನೈದು ದಿನಕ್ಕೊಮ್ಮೆ ವೈದ್ಯಕೀಯ ತಪಾಸಣೆ ಮಾಡುವುದಾಗಿ ವಂತಾರಾ ಭರವಸೆ
ಜಾಮ್​ನಗರ (ಗುಜರಾತ್​ ) : ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಮರಳಲು ನ್ಯಾಯಾಲಯದ ಆದೇಶ ದೊರೆತಿರುವ 'ಮಾಧುರಿ' (ಮಹಾದೇವಿ) ಆನೆಯ ಆರೋಗ್ಯ ಮತ್ತು ಯೋಗಕ್ಷೇಮವನ್ನು ಕಾಪಾಡಲು ತನ್ನ ಸಂಪೂರ್ಣ ಬೆಂಬಲವನ್ನು ಮುಂದುವರಿಸುವುದಾಗಿ ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ ಅವರ ಕನಸಿನ ಕೂಸಾದ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ವಂತಾರಾ ( Vantara ) ಖಚಿತಪಡಿಸಿದೆ.
ಕೊಲ್ಹಾಪುರದಲ್ಲಿ 'ಮಹಾದೇವಿ' ಎಂದು ಪ್ರೀತಿಯಿಂದ ಕರೆಯಲ್ಪಡುವ ಮಾಧುರಿ ಆನೆಯನ್ನು, ಉನ್ನತ ಮಟ್ಟದ ಸಮಿತಿಯ (HPC) ನಿರ್ದೇಶನ ಹಾಗೂ ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ 2025ರ ಜುಲೈ 30ರಂದು ಗುಜರಾತಿನ ಜಾಮ್‌ನಗರದಲ್ಲಿರುವ ವಂತಾರಾ ಕೇಂದ್ರಕ್ಕೆ ಕರೆತರಲಾಗಿತ್ತು. ವಂತಾರಾವು ಸ್ವತಃ ಈ ಆನೆಯನ್ನು ತಮ್ಮ ವಶಕ್ಕೆ ಕೋರಿರಲಿಲ್ಲ, ಬದಲಿಗೆ, ನ್ಯಾಯಾಲಯ ಮತ್ತು ಸಮಿತಿಯ ನಿರ್ದೇಶನದ ಮೇರೆಗೆ ಆನೆಯನ್ನು ಸ್ವೀಕರಿಸಿ ಅತ್ಯುತ್ತಮ ಆರೈಕೆ ಮಾಡಿ, ಇದೀಗ ಮರಳಿ ಗೂಡಿಗೆ ಕಳುಹಿಸಿಕೊಡುತ್ತಿದೆ.
ಕೊಲ್ಹಾಪುರದಲ್ಲಿ ಮಾಧುರಿ ಆನೆಯ ಬಗ್ಗೆ ಇರುವ ಜನರ ಭಾವನೆಗಳನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಮಹಾರಾಷ್ಟ್ರ ಸರ್ಕಾರ, ಅಲ್ಲಿನ ಅಧಿಕಾರಿಗಳು, ಸಂಬಂಧಿತ ವ್ಯಕ್ತಿಗಳು ಮತ್ತು ಸಮಾಜದ ಸದಸ್ಯರೊಂದಿಗೆ ನಡೆಸಿದ ಮಾತುಕತೆಯ ಬಳಿಕ, ಅವರ ಭಾವನೆಗಳನ್ನು ಗೌರವಿಸುವುದಾಗಿ ಮತ್ತು ಸಮರ್ಥ ಪ್ರಾಧಿಕಾರಗಳ ನಿರ್ದೇಶನಗಳಿಗೆ ಬದ್ಧವಾಗಿರುವುದಾಗಿ ವಂತಾರಾ 2025ರ ಆಗಸ್ಟ್ 6ರಂದೇ ತಿಳಿಸಿತ್ತು ಎಂದು ತನ್ನ ಪ್ರಕಟಣೆಯಲ್ಲಿ ವಂತಾರಾ ಹೇಳಿದೆ.
ಇದಾದ ಬಳಿಕ ಗೌರವಾನ್ವಿತ ಸುಪ್ರೀಂ ಕೋರ್ಟ್, ಮಾಧುರಿ ಆನೆ ಸಂಬಂಧ ತಮ್ಮ ಹಕ್ಕುಗಳನ್ನು ಉನ್ನತ ಮಟ್ಟದ ಸಮಿತಿಯ (HPC) ಮುಂದೆ ಮಂಡಿಸುವಂತೆ ಪಕ್ಷಕಾರರಿಗೆ ಸೂಚಿಸಿತ್ತು. ವಾದ-ಪ್ರತಿವಾದಗಳನ್ನು ಆಲಿಸಿ, ವರದಿಗಳನ್ನು ಪಡೆದು ಮತ್ತು ನಂದನಿಯಲ್ಲಿರುವ ಸ್ಥಳವನ್ನು ಪರಿಶೀಲಿಸಿದ ಬಳಿಕ, ಸಮಿತಿಯು 2026ರ ಸೆಪ್ಟೆಂಬರ್ 9ರಂದು ಒಂದು ಸ್ಪಷ್ಟ ಆದೇಶ ಹೊರಡಿಸಿತು. ಇದರನ್ವಯ ಮಾಧುರಿ ಆನೆಯು ಕಟ್ಟುನಿಟ್ಟಿನ ನಿಬಂಧನೆಗಳೊಂದಿಗೆ ಕೊಲ್ಹಾಪುರಕ್ಕೆ ಮರಳಲು ಅನುಮತಿ ನೀಡಲಾಗಿದೆ. ಆನೆಗೆ ಯಾವುದೇ ಮೆರವಣಿಗೆ ಅಥವಾ ಇತರೆ ಕಾರ್ಯಗಳಿಗೆ ಬಳಸಬಾರದು, ದಿನದ 24 ಗಂಟೆಯೂ ಸೂಕ್ತ ಆರೈಕೆ ಸಿಗಬೇಕು ಮತ್ತು ಪ್ರತಿ ಹದಿನೈದು ದಿನಗಳಿಗೊಮ್ಮೆ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂಬ ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ.
ವಂತಾರಾ ಸಂಸ್ಥೆಯು ಉನ್ನತ ಮಟ್ಟದ ಸಮಿತಿಯ (HPC) ಅಧಿಕಾರವನ್ನು ಗೌರವಿಸುತ್ತದೆ ಮತ್ತು ಅದರ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸುತ್ತದೆ. ಮಾಧುರಿಯ ಕುರಿತಾದ ನಮ್ಮ ನಿಲುವು ಯಾವಾಗಲೂ ಪ್ರಾಣಿ ವೈದ್ಯಕೀಯ ವಿಜ್ಞಾನ ಮತ್ತು ಅವಳ ಯೋಗಕ್ಷೇಮದಿಂದಲೇ ಮಾರ್ಗದರ್ಶಿಸಲ್ಪಟ್ಟಿದೆ. ನಿರಂತರ ವೈದ್ಯಕೀಯ ಆರೈಕೆಯಿಂದ ಅವಳ ಆರೋಗ್ಯ ಸ್ಥಿರಗೊಂಡಿದೆಯಾದರೂ, ಅವಳ ದೀರ್ಘಕಾಲದ ಕಾಯಿಲೆಗಳು ಸಂಪೂರ್ಣವಾಗಿ ವಾಸಿಯಾಗಿಲ್ಲ. ಅವಳಿಗೆ ಇನ್ನೂ ಸೂಕ್ತ ಆರೈಕೆ, ಪೂರಕ ನಿರ್ವಹಣೆ ಮತ್ತು ನಿಯಮಿತ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ವಂತಾರಾ ತಿಳಿಸಿದೆ.
ಮಾಧುರಿ ಕೊಲ್ಹಾಪುರಕ್ಕೆ ವಾಪಸ್ ಹೋದ ತಕ್ಷಣಕ್ಕೆ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸೂಕ್ತ ವಾಸಸ್ಥಳ, ಪ್ರಾಣಿ ವೈದ್ಯಕೀಯ ಮೂಲಭೂತ ಸೌಕರ್ಯ, ವೈದ್ಯಕೀಯ ಉಪಕರಣಗಳು, ಔಷಧಗಳು ಮತ್ತು ಇತರ ಅಗತ್ಯ ವಸ್ತುಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಅವಳ ಮರಳುವಿಕೆಗೆ ಸಹಾಯ ಮಾಡಲು ವಂತಾರಾ ಶ್ರಮಿಸಿದೆ. ಎಚ್‌ಪಿಸಿ (HPC) ನಿರ್ದೇಶನದಂತೆ, ವಂತಾರಾದ ಪಶುವೈದ್ಯರು ಪ್ರತಿ ಹದಿನೈದು ದಿನಗಳಿಗೊಮ್ಮೆ ಕೊಲ್ಹಾಪುರಕ್ಕೆ ಭೇಟಿ ನೀಡಿ ಮಾಧುರಿಗೆ ವೈದ್ಯಕೀಯ ತಪಾಸಣೆ ನಡೆಸಿ ಸಮರ್ಥ ಪ್ರಾಧಿಕಾರಗಳಿಗೆ ವರದಿಗಳನ್ನು ಸಲ್ಲಿಸಲಿದ್ದಾರೆ. ಇದು ಆರೈಕೆಯ ನಿರಂತರತೆ ಮತ್ತು ಅವಳು ಎಲ್ಲೇ ವಾಸವಿದ್ದರೂ ಅವಳ ಯೋಗಕ್ಷೇಮವನ್ನು ಕಾಪಾಡುವುದು ನಮ್ಮ ಬದ್ಧತೆಯಾಗಿದೆ ಎಂದು ವಂತಾರಾ ತಿಳಿಸಿದೆ.
ಮಾಧುರಿ ಈಗ ವಾಪಸಾಗುತ್ತಿರುವ ನಂದನಿಯಲ್ಲಿರುವ ಆವರಣ ಮತ್ತು ಸೌಲಭ್ಯದ ಮೇಲೆಯೂ ವಂತಾರಾ ಕೆಲಸ ಮಾಡಿದೆ. ಲಭ್ಯವಿರುವ ಮೂಲಭೂತ ಸೌಕರ್ಯಗಳ ಒಳಗೆ, ಅವಳಿಗಾಗಿ ಅತ್ಯುತ್ತಮ ವ್ಯವಸ್ಥೆಗಳನ್ನು ಮಾಡಲಾಗಿದೆ. ಟೌನ್ ಪ್ಲಾನಿಂಗ್ (ನಗರ ಯೋಜನೆ) ನಿರ್ಬಂಧಗಳ ಕಾರಣದಿಂದಾಗಿ ಈ ಹಂತದಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಹೆಚ್ಚಿನ ಸುಧಾರಣೆಗಳನ್ನು ಮಾಡಲು ಸಾಧ್ಯವಾಗಲಿಲ್ಲ, ಏಕೆಂದರೆ ಟ್ರಸ್ಟ್‌ನ ಭೂಮಿಯ ಮೂಲಕ ಹಾದುಹೋಗುವ ರಸ್ತೆಯು ಅಭಿವೃದ್ಧಿಗೆ ಲಭ್ಯವಿರುವ ಜಾಗವನ್ನು ಮಿತಿಗೊಳಿಸಿದೆ. ಮಾಧುರಿ ಅಲ್ಲಿ ಹೊಂದಿಕೊಂಡ ನಂತರ, ಸೌಲಭ್ಯವನ್ನು ಮೇಲ್ದರ್ಜೆಗೇರಿಸಲು ವಂತಾರಾ ಶ್ರಮಿಸಲಿದೆ. ನ್ಯಾಯಾಲಯಗಳು ಅಥವಾ ಸಮರ್ಥ ಪ್ರಾಧಿಕಾರಗಳು ನಿರ್ದೇಶನ ನೀಡಿದರೆ ವಂತಾರಾ ಅಂತಹ ನವೀಕರಣಕ್ಕೂ ಸಹಾಯ ಮಾಡುತ್ತದೆ ಎಂದು ವಂತಾರಾ ತಿಳಿಸಿದೆ.
ನಿಜವಾದ ಪ್ರಾಣಿ ಕಲ್ಯಾಣಕ್ಕೆ ಸತ್ಯ, ಪ್ರಾಣಿ ವೈದ್ಯಕೀಯ ವಿಜ್ಞಾನ, ಜವಾಬ್ದಾರಿಯುತ ಆರೈಕೆ, ಕಾನೂನು ಪ್ರಕ್ರಿಯೆಗೆ ಗೌರವ ಮತ್ತು ಜೀವವನ್ನು ಎಂದೆಂದಿಗೂ ರಕ್ಷಿಸುವ ದೃಢವಾದ ಬದ್ಧತೆ ಅಗತ್ಯಗಳೆಂದು ವಂತಾರಾ ನಂಬುತ್ತದೆ. ಗೌರವಾನ್ವಿತ ಸುಪ್ರೀಂ ಕೋರ್ಟ್, ಗೌರವಾನ್ವಿತ ಬಾಂಬೆ ಹೈಕೋರ್ಟ್ ಮತ್ತು ಎಚ್‌ಪಿಸಿ (HPC) ನೀಡಿದ ನಿರ್ದೇಶನಗಳಿಗೆ ವಂತಾರಾ ಕೃತಜ್ಞವಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಗಳು ಹಾಗೂ ಅವುಗಳ ಅಧಿಕಾರಿಗಳು ನೀಡಿದ ಬೆಂಬಲಕ್ಕಾಗಿ ನಾವು ಧನ್ಯವಾದ ಅರ್ಪಿಸುತ್ತೇವೆ. ಮಾಧುರಿಯ ಬಗ್ಗೆ ಕಾಳಜಿ ವಹಿಸಿರುವ ಮಠಕ್ಕೂ ಮತ್ತು ಕೊಲ್ಹಾಪುರದ ಜನತೆಗೂ ನಾವು ಅಷ್ಟೇ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮಾಧುರಿಯ ಸ್ಥಿತಿಯನ್ನು ಎಚ್‌ಪಿಸಿಯ ಗಮನಕ್ಕೆ ತರುವಲ್ಲಿ ಪೇಟಾ ಇಂಡಿಯಾ (PETA India) ವಹಿಸಿದ ಪಾತ್ರವನ್ನು ನಾವು ಗುರುತಿಸುತ್ತೇವೆ ಮತ್ತು ಪ್ರಾಣಿ ಕಲ್ಯಾಣದ ಕಾರ್ಯದಲ್ಲಿ ನಮ್ಮ ದೀರ್ಘಕಾಲದ ಒಡನಾಟವನ್ನು ಗೌರವಿಸುತ್ತೇವೆ.
ಮಾಧುರಿಯ ಯೋಗಕ್ಷೇಮವೇ ವಂತಾರಾದ ಮೊದಲ ಕಾಳಜಿಯಾಗಿದೆ. ಅವಳ ಆರೋಗ್ಯ, ಕಲ್ಯಾಣ ಮತ್ತು ಘನತೆಗೆ ನಮ್ಮ ಬದ್ಧತೆಯು ಅವಳು ಎಲ್ಲಿ ವಾಸಿಸುತ್ತಾಳೆ ಎಂಬುದರ ಮೇಲೆ ಅವಲಂಬಿತವಾಗಿಲ್ಲ. ಅವಳಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘವಾದ, ಸುರಕ್ಷಿತ ಮತ್ತು ಸಂತೋಷದ ಜೀವನವನ್ನು ನಾವು ಹಾರೈಸುತ್ತೇವೆ ಎಂದು ವಂತಾರಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.