ಲಕ್ನೋ ಅಗ್ನಿ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ! ಪಿಎಂ ಮೋದಿ, ಸಿಎಂ ಯೋಗಿ ಪರಿಹಾರ ಘೋಷಣೆ.. 
ದೇಶ

ಲಕ್ನೋ ಅಗ್ನಿ ದುರಂತ: ಸಾವಿನ ಸಂಖ್ಯೆ 14ಕ್ಕೆ ಏರಿಕೆ! ಪಿಎಂ ಮೋದಿ, ಸಿಎಂ ಯೋಗಿ ಪರಿಹಾರ ಘೋಷಣೆ.. Lucknow Fire Tragedy

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ಬರೋಬ್ಬರಿ 14ಕ್ಕೆ ಏರಿಕೆಯಾಗಿದೆ. ಇಲ್ಲಿನ ಅಲಿಗಂಜ್‌(Lucknow Fire Tragedy) ಪ್ರದೇಶದ ಉಷಾ ಮೆಹ್ತಾ ಮಾರ್ಗದಲ್ಲಿರುವ ಮೂರು ಮಹಡಿಯ ವಾಣಿಜ್ಯ ಸಂಕೀರ್ಣವೊಂದರಲ್ಲಿ ಈ ಕರುಣಾಜನಕ ಘಟನೆ ನಡೆದಿದೆ. ಮೃತರ ಪೈಕಿ ಬಹುತೇಕರು ಅನಿಮೇಷನ್ ಮತ್ತು ಗೇಮಿಂಗ್ ಸೆಂಟರ್‌ನಲ್ಲಿದ್ದ ಯುವಕರು ಹಾಗೂ ವಿದ್ಯಾರ್ಥಿಗಳಾಗಿದ್ದಾರೆ. ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಶೌಚಾಲಯಗಳಲ್ಲಿ ಅಡಗಿ ಕುಳಿತಿದ್ದ ಹಲವರು ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಶವವಾಗಿ ಪತ್ತೆಯಾಗಿದ್ದಾರೆ.

ಕಣ್ಣೆದುರೇ ಸಾವು: ಕೊನೆಯದಾಗಿ ಅಣ್ಣನಿಗೆ ಕರೆ ಮಾಡಿದ್ದ ತಮ್ಮ!

ಬೆಂಕಿ ಇಡೀ ಕಟ್ಟಡವನ್ನು ಆವರಿಸಿಕೊಳ್ಳುತ್ತಿದ್ದಂತೆ ಒಳಗೆ ಸಿಲುಕಿದ್ದವರ ಆಕ್ರಂದನ ಮುಗಿಲು ಮುಟ್ಟಿತ್ತು. ಕಟ್ಟಡದ ಹೊರಗೆ ಕಣ್ಣೀರು ಹಾಕುತ್ತಾ ನಿಂತಿದ್ದ ಶಕೀಲ್ ಎಂಬುವವರು ತಮ್ಮನ ಕೊನೆಯ ಫೋನ್ ಕರೆಯನ್ನು ನೆನೆದು ಕಣ್ಣೀರಿಟ್ಟರು. ಅಣ್ಣಾ, ನಾವಿಲ್ಲಿ ಐದಾರು ಜನ ಬಾತ್ ರೂಂ ಒಳಗೆ ಲಾಕ್ ಆಗಿದ್ದೇವೆ, ಕಾಪಾಡು ಅಂತ ತಮ್ಮ ಫೋನ್ ಮಾಡಿದ್ದ. ಅದಾದ ಮೇಲೆ ಅವನ ಫೋನ್ ಸಂಪರ್ಕ ಸಿಗಲೇ ಇಲ್ಲ ಎಂದು ಅವರು ಆಳುತ್ತಾ ಹೇಳಿದ ಮಾತುಗಳು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿದವು. ಪ್ರಾಣ ಉಳಿಸಿಕೊಳ್ಳಲು ಯುವಕರು ಎರಡನೇ ಮತ್ತು ಮೂರನೇ ಮಹಡಿಯ ಕಿಟಕಿಗಳಿಂದ ಕೆಳಗೆ ಜಿಗಿಯುತ್ತಿರುವ ಭೀಕರ ದೃಶ್ಯಗಳು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ನೆಲಮಹಡಿಯಲ್ಲಿ ಪೆಟ್ ಶಾಪ್, ಮೇಲ್ಭಾಗದಲ್ಲಿ ಅನಿಮೇಷನ್ ಸೆಂಟರ್

ಮೊದಲಿಗೆ ಈ ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಇದೆ ಎಂದು ವರದಿಯಾಗಿತ್ತಾದರೂ, ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಇದನ್ನು ಸ್ಪಷ್ಟಪಡಿಸಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿ ಸಾಕುಪ್ರಾಣಿಗಳ ಮಾರಾಟ ಮಳಿಗೆ ಇದ್ದು, ಮೇಲಿನ ಮಹಡಿಗಳಲ್ಲಿ ಅನಿಮೇಷನ್ ಮತ್ತು ಗೇಮಿಂಗ್ ತರಬೇತಿ ಕೇಂದ್ರವಿತ್ತು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನೆಲಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆ ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಅದೃಷ್ಟವಶಾತ್ ರಕ್ಷಣಾ ಕಾರ್ಯಾಚರಣೆಯ ವೇಳೆ ಪೆಟ್ ಶಾಪ್‌ನಲ್ಲಿದ್ದ ಮೂಕ ಪ್ರಾಣಿಗಳನ್ನು ಸುರಕ್ಷಿತವಾಗಿ ಹೊರತರಲಾಗಿದೆ.

ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ

ಘಟನೆಯ ತೀವ್ರತೆ ಅರಿತು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ 14ಕ್ಕೂ ಹೆಚ್ಚು ವಾಹನಗಳು, ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಮತ್ತು ನಾಗರಿಕ ರಕ್ಷಣಾ ತಂಡಗಳು ಜಂಟಿಯಾಗಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದವು. ಹೈಡ್ರಾಲಿಕ್ ಏಣಿಗಳ ಮೂಲಕ ಕಟ್ಟಡದ ಪ್ರತಿಯೊಂದು ಕೋಣೆ ಮತ್ತು ಶೌಚಾಲಯಗಳನ್ನು ಜಾಲಾಡಿದ ಸಿಬ್ಬಂದಿ ಒಳಗಿದ್ದವರನ್ನು ಹೊರತೆಗೆದರು. ಮೇಲಿಂದ ಬಿದ್ದಿದ್ದರಿಂದ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ತಿಳಿಸಿದ್ದಾರೆ.

ಪ್ರಧಾನಿ ಮೋದಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಲಕ್ನೋ ಅಗ್ನಿ ದುರಂತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಮೂಲ್ಯ ಜೀವಗಳು ಬಲಿಯಾಗಿರುವುದು ಅತ್ಯಂತ ನೋವು ತಂದಿದೆ. ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು ಎಂದು ತಿಳಿಸಿರುವ ಪ್ರಧಾನಿ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದಾರೆ.

ಪ್ರವಾಸ ಮೊಟಕುಗೊಳಿಸಿ ಲಕ್ನೋಗೆ ಧಾವಿಸಿದ ಸಿಎಂ ಯೋಗಿ!

ಅಲಿಗಢದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದುರಂತದ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಲಕ್ನೋಗೆ ಮರಳಿದ್ದಾರೆ. ವೇದಿಕೆಯ ಮೇಲೆಯೇ ಭಾಷಣ ಮಾಡುವಾಗ ಭಾವುಕರಾದ ಸಿಎಂ, ನಾನು ಇಂದು ಅಲಿಗಢದಲ್ಲೇ ಇರಬೇಕೆಂದುಕೊಂಡಿದ್ದೆ. ಆದರೆ ಲಕ್ನೋದಲ್ಲಿ ನಡೆದ ಅಗ್ನಿ ದುರಂತದಲ್ಲಿ ನಮ್ಮ ಕೆಲವು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ತುಂಬಾ ಮನಸ್ಸಿಗೆ ನೋವಾಗಿದೆ. ಹಾಗಾಗಿ ನಾನು ತಕ್ಷಣ ಲಕ್ನೋಗೆ ಮರಳುತ್ತಿದ್ದೇನೆ ಎಂದರು.
ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವ ಸಿಎಂ ಯೋಗಿ, ಡಿಜಿಪಿ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖಾ ವರದಿ ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ,(ಏಜೆನ್ಸೀಸ್​).