ಲಖನೌದಲ್ಲಿ ಸಂಭವಿಸಿದ ಅಗ್ನಿ ದುರಂತ 
ದೇಶ

ಲಖನೌ ಅಗ್ನಿ ದುರಂತಕ್ಕೆ 15 ಬಲಿ; ವಸತಿಗೆ ಪಡೆದ ಜಾಗದಲ್ಲಿ ವಾಣಿಜ್ಯ ಕಟ್ಟಡ! ತನಿಖೆಯಲ್ಲಿ ಶಾಕಿಂಗ್ ಸಂಗತಿ ಬಯಲು

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪ್ರದೇಶ ಲಖನೌದ ಆಲಿಂಗಜ್​ನಲ್ಲಿ ಅಗ್ನಿ ದುರಂತ
  • ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ 15 ವಿದ್ಯಾರ್ಥಿಗಳು ಬಲಿ
  • ಅಧಿಕಾರಿಗಳ ಬೇಜವಾಬ್ದಾರಿ ತನಿಖೆಯಲ್ಲಿ ಬಯಲು
ಉತ್ತರ ಪ್ರದೇಶ: ರಾಜಧಾನಿ ಲಖನೌದ ಅಲಿಗಂಜ್​ನ ಕೋಚಿಂಗ್ ಸೆಂಟರ್​​ನಲ್ಲಿ ಸೋಮವಾರ (ಜೂ.22) ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 15 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಗೆ ಸುಟ್ಟು ಕರಕಲಾದ ಕಟ್ಟಡದ ನಿರ್ಮಾಣ ಮತ್ತು ನಿಯಮಗಳ ಉಲ್ಲಂಘನೆಯ ಸುತ್ತ ಸದ್ಯ ಪೊಲೀಸರ ತನಿಖೆ ಚುರುಕುಗೊಂಡಿದೆ.
ಈ ಕಟ್ಟಡದಲ್ಲಿ ಅನಿಮೇಷನ್ ಅಂಡ್​ ಗೇಮಿಂಗ್​ ಕೋಚಿಂಗ್​ ಕ್ಲಾಸ್​ಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಬಲಿಯಾದ ಅಮಾಯಕ ಜೀವಗಳು. ಕಟ್ಟಡದಲ್ಲಿ ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಎರಡನೇ ಮಹಡಿಯಿಂದ ತಪ್ಪಿಸಿಕೊಳ್ಳಲು ಬಿಡದಂತೆ ಅಗ್ನಿ ವ್ಯಾಪಿಸಿದ್ದೇ ಅಮಾಯಕ ಜನರ ಪ್ರಾಣವನ್ನು ಕಸಿದುಕೊಂಡಿದೆ. ಪ್ರಕರಣ ಬೆನ್ನತ್ತಿದ ಖಾಕಿ ಪಡೆ, ವಸತಿಗೆಂದು ಪಡೆದ ಕಟ್ಟಡವನ್ನು ವಾಣಿಜ್ಯ ಸಂಕೀರ್ಣವಾಗಿ ರೂಪಿಸಿಕೊಂಡಿರುವುದು ಅಕ್ಷಮ್ಯ. ಇದು ನಿಯಮ ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದಾರೆ.
ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ, ಇದನ್ನು ವಾಣಿಜ್ಯ ಮಳಿಗೆಗಳು ಮತ್ತು ಕೋಚಿಂಗ್ ಸೆಂಟರ್‌ ಆಗಿ ಬದಲಾಯಿಸಿದ್ದಾರೆ. ತನಿಖೆಯ ಪ್ರಕಾರ, 2014ರಲ್ಲೇ ಈ ಅಕ್ರಮ ಪರಿವರ್ತನೆ ನಡೆದಿದೆ ಎನ್ನಲಾಗಿದೆ. ಕಟ್ಟಡದ ಮಾಲೀಕರಾದ ವೀರೇಂದ್ರ ಪ್ರಸಾದ್ ಶುಕ್ಲಾ, ಸುರೇಂದ್ರ ಶುಕ್ಲಾ ಮತ್ತು ಧೀರೇಂದ್ರ ಶುಕ್ಲಾ ಎಂಬ ಮೂವರು ಸಹೋದರರು ಸೇರಿ ಒಟ್ಟು ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ನಾಲ್ವರ ಬಂಧನ, ಅಧಿಕಾರಿಗಳು ಅಮಾನತು

ಘಟನೆಯ ಗಂಭೀರತೆಯನ್ನು ಪರಿಗಣಿಸಿದ ಸರ್ಕಾರ, ನಾಲ್ವರ ಬಂಧನ ಬೆನ್ನಲ್ಲೇ ಈ ಅಕ್ರಮವನ್ನು ಕಡೆಗಣಿಸಿದ ಅಥವಾ ಶಾಮೀಲಾಗಿದ್ದ ಆರೋಪದ ಮೇಲೆ ನಾಲ್ಕು ಸರ್ಕಾರಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್​ ಮಾಡಲಾಗಿದೆ. ಕೇವಲ ವಸತಿ ಉದ್ದೇಶಕ್ಕೆ ಮಾತ್ರ ಅನುಮತಿ ಪಡೆದಿದ್ದ ಕಟ್ಟಡದಲ್ಲಿ, ಈ ಮಟ್ಟದ ವಾಣಿಜ್ಯ ಮತ್ತು ಶಿಕ್ಷಣ ಸಂಸ್ಥೆಗಳು ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಯಿಲ್ಲದೆ ಹೇಗೆ ಇಷ್ಟು ದಿನ ನಡೆಯುತ್ತಿತ್ತು? ಎಂಬುದರ ಕುರಿತು ಸದ್ಯ ಉನ್ನತ ಮಟ್ಟದ ತನಿಖೆ ಮುಂದುವರಿದಿದೆ,(ಏಜೆನ್ಸೀಸ್).