ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ 
ದೇಶ

ಜೂ.30ರಂದು ಉಪೇಂದ್ರ ದ್ವಿವೇದಿ ನಿವೃತ್ತಿ! ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್

ಪ್ರಮುಖ ಮುಖ್ಯಾಂಶಗಳು

  • ಜೂ.30ರಿಂದ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಭಾರತೀಯ ಸೇನಾ ಮುಖ್ಯಸ್ಥರಾಗಿ ನೇಮಕ
  • ಉಪೇಂದ್ರ ದ್ವಿವೇದಿ ಅವರ ಸ್ಥಾನಕ್ಕೆ ಧೀರಜ್​ ಅಧಿಕಾರ
ನವದೆಹಲಿ: ಪ್ರಸ್ತುತ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇದೇ ಜೂನ್.30ರಂದು ನಿವೃತ್ತಿ ಹೊಂದಲಿದ್ದಾರೆ. ಈ ಸಂದರ್ಭದಲ್ಲಿ, ಅವರ ಉತ್ತರಾಧಿಕಾರಿಯನ್ನು ಅಂತಿಮಗೊಳಿಸಲಾಗಿದ್ದು, ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೂತನ ಸೇನಾ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಸೇಠ್ ಅವರು, ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಡಿಸೆಂಬರ್ 1986ರಲ್ಲಿ 'ಆರ್ಮರ್ಡ್ ಕಾರ್ಪ್ಸ್'ನಲ್ಲಿ ನಿಯೋಜನೆಗೊಂಡ ಅವರು, ಡಿಫೆನ್ಸ್ ಸರ್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ಜೂನಿಯರ್ ಕಮಾಂಡ್ ಕೋರ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದರು ಮತ್ತು ಅತ್ಯುತ್ತಮ ಆಲ್-ರೌಂಡ್ ಸ್ಟೂಡೆಂಟ್ ಆಫೀಸರ್ ಪದಕವನ್ನು ಸ್ವೀಕರಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ದೀರ್ಘ ಅನುಭವವನ್ನು ಹೊಂದಿರುವ ಧೀರಜ್​ ಸೇಠ್​, ವಿಶಿಷ್ಟ ಮಿಲಿಟರಿ ಸೇವೆಯ ಸಮಯದಲ್ಲಿ, ಕಾರ್ಯಾಚರಣೆಗಳು, ಕಾರ್ಯತಂತ್ರದ ಯೋಜನೆ, ಸಾಮರ್ಥ್ಯ ವೃದ್ಧಿ ಮತ್ತು ಸಾಂಸ್ಥಿಕ ಅಂಶಗಳಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಅವರು ಭಾರತೀಯ ಸೇನೆಯ ಯುದ್ಧ ಸಾಮರ್ಥ್ಯವನ್ನು ಬಲಪಡಿಸಲು ಮಹತ್ತರ ಕೊಡುಗೆಗಳನ್ನು ನೀಡಿರುವುದು ಗಮನಾರ್ಹ. ಸಶಸ್ತ್ರ ಪಡೆಗಳ ಆಧುನೀಕರಣದಲ್ಲಿ ಅವರು ವಿಶೇಷ ಛಾಪು ಮೂಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ರೆಜಿಮೆಂಟ್ ಮತ್ತು ಸಶಸ್ತ್ರ ಬ್ರಿಗೇಡ್‌ಗೆ ಕಮಾಂಡರ್ ಆಗಿರುವ ಸೇಠ್, ಲೆಫ್ಟಿನೆಂಟ್ ಜನರಲ್ ಹುದ್ದೆಯನ್ನು ಪಡೆದ ನಂತರ, ಸುದರ್ಶನ ಚಕ್ರ ಕಾರ್ಪ್ಸ್‌ಗೆ ಕಮಾಂಡರ್ ಆಗಿದ್ದರು. ನಂತರದಲ್ಲಿ ಅವರು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ (GOC) ಆಗಿಯೂ ಸೇವೆ ಸಲ್ಲಿಸಿದರು. ಹಲವಾರು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದ್ದಾರೆ.
ಇದರೊಟ್ಟಿಗೆ ಲೆಫ್ಟಿನೆಂಟ್ ಜನರಲ್ ಸೇಠ್ ಅವರು ಸೌತ್ ವೆಸ್ಟರ್ನ್ ಕಮಾಂಡ್ ಮತ್ತು ಸದರ್ನ್ ಕಮಾಂಡ್ ಎರಡರಲ್ಲೂ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (GOC-in-C) ಆಗಿ ಸೇವೆ ಸಲ್ಲಿಸಿದರು. ಎರಡು ಕಾರ್ಯಾಚರಣೆಯ ಕಮಾಂಡ್‌ಗಳನ್ನು ಮುನ್ನಡೆಸುವ ಅಪರೂಪದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರ ಹೊರತಾಗಿ, ಅವರು ಅಂಗೋಲಾದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಕಾರ್ಯದರ್ಶಿ, ಸೌತ್ ವೆಸ್ಟರ್ನ್ ಕಮಾಂಡ್ ಪ್ರಧಾನ ಕಚೇರಿಯಲ್ಲಿ ಬ್ರಿಗೇಡಿಯರ್ ಜನರಲ್ ಸ್ಟಾಫ್ ಮತ್ತು ಡೈರೆಕ್ಟರ್ ಜನರಲ್ ಶಿಸ್ತು, ಸಮಾರಂಭ ಮತ್ತು ಕಲ್ಯಾಣ ಮುಂತಾದ ಹಲವಾರು ಪ್ರಮುಖ ಸಿಬ್ಬಂದಿ ಮತ್ತು ಕಾರ್ಯತಂತ್ರದ ಹುದ್ದೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ,(ಏಜೆನ್ಸೀಸ್).