ನವದೆಹಲಿ: ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಧನ ಪೂರೈಕೆ ಏರುಪೇರಾಗಿದ್ದು, ಇದರ ನೇರ ಹೊಡೆತ ಈಗ ಭಾರತದ ಅಡುಗೆ ಮನೆಗಳಿಗೆ ತಟ್ಟಿದೆ. ದೇಶದಲ್ಲಿ ಎಲ್‌ಪಿಜಿ (LPG) ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ರಾಮೀಣ ಭಾಗದ ಗ್ರಾಹಕರು ಇನ್ನು ಮುಂದೆ ಒಂದು ಸಿಲಿಂಡರ್ ಬುಕ್ ಮಾಡಿದ 45 ದಿನಗಳ ನಂತರವಷ್ಟೇ ಮುಂದಿನ ಬುಕ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಈ ಹಿಂದೆ ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಬುಕ್ಕಿಂಗ್ ಅವಧಿ 25 ದಿನಗಳಾಗಿತ್ತು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಪೂರೈಕೆ ಮತ್ತು ಬೇಡಿಕೆಯ ನಡುವೆ ಭಾರಿ ಅಂತರವಿರುವುದರಿಂದ ಈ ಅವಧಿಯನ್ನು ವಿಸ್ತರಿಸಲಾಗಿದೆ. ಮತ್ತು ನಗರ ಪ್ರದೇಶದವರಿಗೆ 25 ದಿನಗಳು ನಿಗದಿಪಡಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ (ಮಾರ್ಕೆಟಿಂಗ್) ಸುಜಾತಾ ಶರ್ಮಾ ತಿಳಿಸಿದ್ದಾರೆ.
ಹೆಚ್ಚಾದ ಬೇಡಿಕೆ, ಕುಸಿದ ಪೂರೈಕೆ
ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು ಎಂಬ ಆತಂಕದಿಂದ ಸಾರ್ವಜನಿಕರು ಏಕಾಏಕಿ ಸಿಲಿಂಡರ್ ಬುಕ್ಕಿಂಗ್ ಮಾಡಲು ಮುಗಿಬಿದ್ದಿದ್ದಾರೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಸರಾಸರಿ 60 ಲಕ್ಷ ಸಿಲಿಂಡರ್‌ಗಳು ಬುಕ್ ಆಗುತ್ತಿದ್ದರೆ, ಈಗ ಈ ಸಂಖ್ಯೆ 80 ಲಕ್ಷಕ್ಕೆ ಏರಿದೆ. ಆದರೆ, ಸರ್ಕಾರಕ್ಕೆ ದಿನವೊಂದಕ್ಕೆ ಕೇವಲ 55 ಲಕ್ಷ ಸಿಲಿಂಡರ್‌ಗಳನ್ನು ಮಾತ್ರ ವಿತರಿಸಲು ಸಾಧ್ಯವಾಗುತ್ತಿದೆ. ಈ 25 ಲಕ್ಷ ಸಿಲಿಂಡರ್‌ಗಳ ಕೊರತೆಯನ್ನು ಸರಿದೂಗಿಸಲು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ.
ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಪರ್ಯಾಯ ಇಂಧನ
ಮನೆಬಳಕೆಯ ಅನಿಲ ಪೂರೈಕೆಗೆ ಆದ್ಯತೆ ನೀಡಲು ಸರ್ಕಾರವು ವಾಣಿಜ್ಯ ಬಳಕೆಯ ಅನಿಲದ ಮೇಲೆ ನಿಯಂತ್ರಣ ಹೇರಿದೆ. ಹೋಟೆಲ್, ರೆಸ್ಟೋರೆಂಟ್ ಮತ್ತು ಆತಿಥ್ಯ ರಂಗದ ಉದ್ದಿಮೆಗಳು ಮುಂದಿನ ಒಂದು ತಿಂಗಳ ಕಾಲ ಎಲ್‌ಪಿಜಿ ಬದಲಿಗೆ ಪರ್ಯಾಯ ಇಂಧನಗಳಾದ ಸೀಮೆಎಣ್ಣೆ, ಜೈವಿಕ ರಾಶಿ (Biomass), ಕಲ್ಲಿದ್ದಲು ಮತ್ತು ಆರ್‌ಡಿಎಫ್ ಪೆಲೆಟ್‌ಗಳನ್ನು (RDF Pellets) ತಾತ್ಕಾಲಿಕವಾಗಿ ಬಳಸಲು ಪರಿಸರ ಮತ್ತು ಅರಣ್ಯ ಸಚಿವಾಲಯ ಅನುಮತಿ ನೀಡಿದೆ. ವಾಣಿಜ್ಯ ಅಡುಗೆಮನೆಗಳನ್ನು ಎಲ್‌ಪಿಜಿಯಿಂದ ಬೇರೆಡೆಗೆ ವರ್ಗಾಯಿಸುವ ಮೂಲಕ ಮನೆಗಳಿಗೆ ಹೆಚ್ಚಿನ ಅನಿಲ ಒದಗಿಸುವುದು ಸರ್ಕಾರದ ಗುರಿಯಾಗಿದೆ.
ಸೀಮೆಎಣ್ಣೆ ಹಂಚಿಕೆ ಹೆಚ್ಚಳ
ಅನಿಲದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಸೀಮೆಎಣ್ಣೆ ಹಂಚಿಕೆಯನ್ನು ಹೆಚ್ಚಿಸಿದೆ. ಪ್ರತಿ ತ್ರೈಮಾಸಿಕದಲ್ಲಿ ನೀಡಲಾಗುವ 1 ಲಕ್ಷ ಕಿಲೋ ಲೀಟರ್ ಸೀಮೆಎಣ್ಣೆಯ ಜೊತೆಗೆ ಹೆಚ್ಚುವರಿಯಾಗಿ 48,000 ಕಿಲೋ ಲೀಟರ್ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಈ ತುರ್ತು ಕ್ರಮಗಳ ಮೂಲಕ ಇಂಧನ ಭದ್ರತೆಯನ್ನು ಕಾಪಾಡಲು ಸರ್ಕಾರ ಮುಂದಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿ ಅನಗತ್ಯವಾಗಿ ಸಿಲಿಂಡರ್ ಸಂಗ್ರಹಿಸದಂತೆ ಮನವಿ ಮಾಡಿದೆ,(ಏಜೆನ್ಸೀಸ್).