(ಚಿತ್ರ ಪಿಟಿಐ) 
ದೇಶ

ಸಿಲಿಂಡರ್ ಕೊರತೆ ವದಂತಿಗಳಿಗೆ ಬ್ರೇಕ್: ಯುದ್ಧದ ನಡುವೆಯೂ ಅಡುಗೆ ಅನಿಲ ಪೂರೈಕೆಗೆ ಸರ್ಕಾರದ ಗ್ಯಾರಂಟಿ! LPG cylinder crisis

ಮಹಾರಾಷ್ಟ್ರ: ಮಧ್ಯ ಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾದ ಹಿನ್ನಲೆ, ಮಹಾರಾಷ್ಟ್ರ ಸರ್ಕಾರವು ಎಲ್​ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.
ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಮಾರ್ಚ್ ತಿಂಗಳಿನಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆಯು ಕಳೆದ ಆರು ತಿಂಗಳ ಸರಾಸರಿಗಿಂತಲೂ ಹೆಚ್ಚಾಗಿದ್ದು, ಗ್ರಾಹಕರು ಭಯ ಪಡಬಾರದೆಂದು ಮಾಹಿತಿ ನೀಡಿದ್ದಾರೆ. 
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ಸಂರಕ್ಷಣಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಡಿಗ್ಗಿಕರ್ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಎಲ್‌ಪಿಜಿ ವಿತರಣಾ ಪ್ರಕ್ರಿಯೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಸೂಚಿಸಿದ್ದಾರೆ. ಆದಾಗ್ಯೂ, ಸಿಲಿಂಡರ್‌ಗಳ ಸಂಗ್ರಹಣೆ, ಸಾಗಾಣಿಕೆ ಮತ್ತು ಗ್ರಾಹಕರಿಗೆ ವಿತರಣೆಯಾಗುವವರೆಗೆ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.

ಸರಬರಾಜು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಮೇಲ್ವಿಚಾರಣೆ 

ಎಲ್​ಪಿಜಿ ಪೂರೈಕೆಯಲ್ಲಿ ಯಾವುದೇ ಅಡಚಣೆಗಳು ಆಗದಂತೆ ಜಿಲ್ಲಾಧಿಕಾರಿಗಳ ಅಡಿಯಲ್ಲಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಲ್ಲಿ ಪೊಲೀಸ್​  ವರಿಷ್ಠಾಧಿಕಾರಿ, ಜಿಲ್ಲಾ ಪೂರೈಕೆ ಅಧಿಕಾರಿ ಮತ್ತು ಸರ್ಕಾರಿ ತೈಲ ಕಂಪನಿಗಳ ಪ್ರತಿನಿಧಿಗಳು ಇರುತ್ತಾರೆ. ಅವರು ಎಲ್​ಪಿಜಿ ಪೂರೈಕೆ ಸರಪಳಿಯನ್ನು ಮೇಲ್ವಿಚಾರಣೆ ಮಾಡುವುದು, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಮತ್ತು ದೈನಂದಿನ ಪರಿಸ್ಥಿತಿಗಳ ಬಗ್ಗೆ ವರದಿ ಸಲ್ಲಿಸುತ್ತಾರೆ. 

ಅಗತ್ಯ ಸೇವೆಗಳಿಗೆ ಆದ್ಯತೆಯ ಎಲ್‌ಪಿಜಿ ಪೂರೈಕೆ

ಆಸ್ಪತ್ರೆಗಳು, ಸರ್ಕಾರಿ ಹಾಸ್ಟೆಲ್‌ಗಳು, ಶಾಲಾ ಮತ್ತು ಕಾಲೇಜು ಮೆಸ್‌ಗಳು, ಮಧ್ಯಾಹ್ನದ ಊಟದ ಅಡುಗೆಮನೆಗಳು ಮತ್ತು ಆಶ್ರಮ ಶಾಲೆಗಳಿಗೆ ಎಲ್‌ಪಿಜಿ ಹಂಚಿಕೆಗೆ ಮೊದಲ  ಆದ್ಯತೆ ನೀಡಲಾಗುತ್ತದೆ. ಜೊತೆಗೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸೀಮೆಎಣ್ಣೆ ಅಥವಾ ಕಲ್ಲಿದ್ದಲಿನಂತಹ ಪರ್ಯಾಯ ಇಂಧನಗಳನ್ನು ಬಳಸಲು ಪ್ರೇರೇಪಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಮುಂದಾದ ಸರ್ಕಾರ!

ಎಲ್​ಪಿಜಿ ಬಗ್ಗೆ ಹರಡುವ ವದಂತಿಗಳನ್ನು ತಡೆಗಟ್ಟುವ ಸಲುವಾಗಿ ರೇಡಿಯೋ, ಎಫ್‌ಎಂ ಚಾನೆಲ್‌ಗಳು, ಟಿವಿ ಮತ್ತು ಪತ್ರಿಕೆಗಳನ್ನು ಪ್ರತಿದಿನ ಪರಿಶೀಲನೆ ನಡೆಸಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ಧಿ ಮತ್ತು ದಾರಿತಪ್ಪಿಸುವ ಸಂದೇಶವನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಗ್ಯಾಸ್​ ಬುಕ್ಕಿಂಗ್​ ಅಪ್ಲಿಕೇಶನ್​ ಗಳಲ್ಲಿ ತಾಂತ್ರಿಕ ದೋಷ ಕಂಡುಬಂದರೆ ಅವುಗಳನ್ನು ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೇಡಿಕೆ ಪೂರೈಸಲು ಉತ್ಪಾದನೆ ಹೆಚ್ಚಿಸಿದ ಸರ್ಕಾರ!

ಮಹಾರಾಷ್ಟ್ರದ ಸರಾಸರಿ ಎಲ್‌ಪಿಜಿ ಬೇಡಿಕೆ ದಿನಕ್ಕೆ ಸುಮಾರು 9,000 ಮೆಟ್ರಿಕ್ ಟನ್​ಗಳಿಷ್ಟಿದ್ದು, ಹೆಚ್ಚುತ್ತಿರುವ ಅವಶ್ಯಕತೆಯನ್ನು ಪೂರೈಸುವ ಸಲುವಾಗಿ ದಿನಕ್ಕೆ 11,000 ಮೆಟ್ರಿಕ್​ ಟನ್​ಗಳಿಗೆ ಹೆಚ್ಚಿಸಲಾಗಿದೆ.  ಆದಾಗ್ಯೂ, ಮನೆಗಳಿಗೆ ಪೈಪ್ಡ್ ನೈಸರ್ಗಿಕ ಅನಿಲದ ಸಾಕಷ್ಟು ದಾಸ್ತಾನು ಲಭ್ಯವಿದೆ ಎಂದು ಅವರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್‌ನ ಸಾಕಷ್ಟು ನಿಕ್ಷೇಪಗಳು ಉಳಿದಿವೆ ಎಂದು ರಾಜ್ಯವು ದೃಢಪಡಿಸಿದೆ. ಪ್ರಸ್ತುತ ಸಂಸ್ಕರಣಾಗಾರಗಳು ಪ್ರತಿದಿನ ಸುಮಾರು 15,000 ಕಿಲೋಲೀಟರ್ ಪೆಟ್ರೋಲ್ ಮತ್ತು 38,000 ಕಿಲೋಲೀಟರ್ ಡೀಸೆಲ್ ಉತ್ಪಾದಿಸುತ್ತಿವೆ. ಇಂಧನ ಪೂರೈಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿರುವುದರಿಂದ ನಾಗರಿಕರು ಭಯ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಪುನರುಚ್ಚರಿಸಿದ್ದಾರೆ (ಏಜೆನ್ಸೀಸ್​).