Commercial Cylinder Price Drop
- ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ₹183.50 ಭಾರಿ ಇಳಿಕೆ!
- ಗಗನಕ್ಕೇರಿದ್ದ ವಾಣಿಜ್ಯ ಎಲ್‌ಪಿಜಿ ದರ ಜುಲೈ ಆರಂಭದಲ್ಲೇ ದಿಢೀರ್ ಇಳಿಕೆ
- ವಾಣಿಜ್ಯ ಬಳಕೆಯ ಸಿಲಿಂಡರ್ ಪರಿಷ್ಕೃತ ದರ ಇಂದಿನಿಂದಲೇ ಜಾರಿ
ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ವಾಣಿಜ್ಯ ಮತ್ತು ಗೃಹಬಳಕೆ ಸಿಲಿಂಡರ್ ಬೆಲೆಗಳಲ್ಲಿ ಸತತವಾಗಿ ಏರಿಕೆಯಾಗಿತ್ತು. ಆದರೆ ಇಂದಿನಿಂದ (ಜುಲೈ 1 )ವಾಣಿಜ್ಯ ಬಳಕೆಯ 19 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂಪಾಯಿಗಳಷ್ಟು ಕಡಿತಗೊಳಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಆ ಮೂಲಕ ಹೋಟೆಲ್ ಮಾಲೀಕರಿಗೆ ಹಾಗೂ ರೆಸ್ಟೋರೆಂಟ್ ಮಾಲೀಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಪ್ರಸಕ್ತ ವರ್ಷದ ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯು ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ದಾಳಿಯ ನಂತರ, ಇರಾನ್ ತನ್ನ ನಿಯಂತ್ರಣದಲ್ಲಿರುವ, ವಿಶ್ವದ ಒಟ್ಟು ತೈಲ ಮತ್ತು ಅನಿಲ ಸಾರಿಗೆಯ ಶೇಕಡಾ 20 ರಷ್ಟು ಪಾಲನ್ನು ಹೊತ್ತಿರುವ ‘ಸ್ಟ್ರೈಟ್ ಆಫ್ ಹಾರ್ಮುಜ್’ (Strait of Hormuz) ಜಲಸಂಧಿಯ ಮೂಲಕ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಈ ಪೂರೈಕೆ ವ್ಯತ್ಯಯದಿಂದಾಗಿ ವಿಶ್ವಾದ್ಯಂತ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿದ್ದವು.
ಎಷ್ಟು ಇಳಿಕೆಯಾಗಿದೆ?
ಇದೀಗ ಪ್ರತಿ ಸಿಲಿಂಡರ್ ದರದಲ್ಲಿ ಬರೋಬ್ಬರಿ 183.50 ರಷ್ಟು ಇಳಿಕೆ ಮಾಡಲಾಗಿದ್ದು, ಇದು ಪ್ರಸಕ್ತ ವರ್ಷದಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಮಾಡಲಾದ ಮೊದಲ ಕಡಿತವಾಗಿದೆ. ಕಳೆದ ಜೂನ್ ತಿಂಗಳಲ್ಲಿ 3,198 ರೂಪಾಯಿ ತಲುಪಿದ್ದ 19 ಕೆಜಿಯ ಕಮರ್ಷಿಯಲ್ ಸಿಲಿಂಡರ್ ದರವು, ಸದ್ಯ 3,021 ರೂಪಾಯಿಗೆ ಇಳಿಕೆಯಾಗಿದೆ.
ಯಾವ್ಯಾವ ನಗರದಲ್ಲಿ ಸಿಲಿಂಡರ್ ದರ ಎಷ್ಟಿದೆ?
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯು ದೆಹಲಿ ಮತ್ತು ಲಕ್ನೋದಲ್ಲಿ 183.50 ರೂ., ಕೋಲ್ಕತ್ತಾದಲ್ಲಿ 174 ರೂ., ಚಂಡೀಗಢದಲ್ಲಿ 181.50ರೂ. ಮತ್ತು ಪಾಟ್ನಾದಲ್ಲಿ 173ರೂ. ರಷ್ಟು ಇಳಿಕೆಯಾಗಿದೆ.
- ದೆಹಲಿ ಕಳೆದ ಜೂನ್ ತಿಂಗಳಲ್ಲಿದ್ದ 3,113.50 ರೂ.ಬೆಲೆಯು ಈಗ 183.50ರೂ. ರಷ್ಟು ಇಳಿಕೆಯಾಗಿ 2,930ರೂ. ಕ್ಕೆ ತಲುಪಿದೆ.
- ಕೋಲ್ಕತ್ತಾ ಈ ಹಿಂದೆ ₹3,255.50 ಇದ್ದ ಸಿಲಿಂಡರ್ ದರ ಈಗ 3,081.50ರೂ. ಕ್ಕೆ ಇಳಿದಿದೆ.
- ಚಂಡೀಗಢ: ಹೊಸ ಪರಿಷ್ಕೃತ ದರ 2,954.50 ರೂ. ಆಗಿದೆ.
- ಪಾಟ್ನಾ ಇಲ್ಲಿ ಗ್ರಾಹಕರು ಈಗ ಸಿಲಿಂಡರ್‌ಗೆ 3,227ರೂ. ಪಾವತಿಸಬೇಕಾಗುತ್ತದೆ.
- ಬೆಂಗಳೂರಲ್ಲಿ 19 ಕೆ.ಜಿ ಸಿಲಿಂಡರ್ ಬೆಲೆ 3,021ರೂ.
ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಿಲ್ಲ
ಮತ್ತೊಂದೆಡೆ, ಸಾರ್ವಜನಿಕರು ಬಳಸುವ 14.2 ಕೆಜಿಯ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಜುಲೈ ತಿಂಗಳಿಗೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಪ್ರಮುಖ ನಗರಗಳಲ್ಲಿ ಗೃಹಬಳಕೆ ಅನಿಲದ ದರಗಳು ಈ ಕೆಳಗಿನಂತಿವೆ:
- ದೆಹಲಿ: 942 ರೂ.
- ಕೋಲ್ಕತ್ತಾ: 968 ರೂ.
- ಮುಂಬೈ: 941.50 ರೂ.
- ಚೆನ್ನೈ: 957.50ರೂ.
ನಾಲ್ಕು ಬಾರಿ ಏರಿಕೆ
ಯುದ್ಧ ಸಂಘರ್ಷ ಕಾರಣದಿಂದಾಗಿ ಭಾರತದಲ್ಲಿ ಸಿಲಿಂಡರ್ ಬೆಲೆ ನಾಲ್ಕು ಬಾರಿ ಏರಿಕೆ ಮಾಡಲಾಗಿತ್ತು ಭಾರಿ ನಷ್ಟದ ಹಿನ್ನೆಲೆಯನ್ನು ಉಲ್ಲೇಖಿಸಿ ತೈಲ ಕಂಪನಿಗಳು ಮಾರ್ಚ್‌ನಲ್ಲಿ 144 ರೂ., ಏಪ್ರಿಲ್‌ನಲ್ಲಿ 195.50 ರೂ. ಮತ್ತು ಮೇ ತಿಂಗಳಲ್ಲಿ ಬರೋಬ್ಬರಿ 993 ರೂ.ನಷ್ಟು ಬೆಲೆ ಏರಿಕೆ ಮಾಡಿದ್ದವು. ತದನಂತರ, ಜೂನ್‌ನಲ್ಲಿ ಮತ್ತೊಮ್ಮೆ 42 ರೂ. ಹೆಚ್ಚಿಸಲಾಗಿತ್ತು, (ಏಜೆನ್ಸೀಸ್).