Shiv Sena Split | ಪಕ್ಷದ ವ್ಹಿಪ್‌ಗೂ ಕವಡೆ ಕಾಸಿನ ಕಿಮ್ಮತ್ತು ನೀಡದ ಆರು ಜನ ಸಂಸದರು
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (Shiv Sena Split) ಪಕ್ಷವು ಮತ್ತೊಂದು ದೊಡ್ಡ ವಿಭಜನೆಯ ಅಂಚಿಗೆ ಬಂದು ತಲುಪಿದೆ. ದೆಹಲಿಯಲ್ಲಿ ಗುರುವಾರ ಕರೆದಿದ್ದ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಪಕ್ಷವು ಮೂರು ಸಾಲುಗಳ ಕಟ್ಟುನಿಟ್ಟಿನ ವ್ಹಿಪ್ ಜಾರಿ ಮಾಡಿದ್ದರೂ, ಲೋಕಸಭೆಯ ಒಟ್ಟು ಒಂಬತ್ತು ಸಂಸದರ ಪೈಕಿ ಕೇವಲ ಮೂವರು ಮಾತ್ರ ಸಭೆಗೆ ಹಾಜರಾಗುವ ಮೂಲಕ ಆಂತರಿಕ ಬಂಡಾಯವನ್ನು ಬಹಿರಂಗಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗಲು ಉದ್ಧವ್ ಬಣದ ರೆಬೆಲ್ ಸಂಸದರು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಈ ಹೈ-ವೋಲ್ಟೇಜ್ ಸಭೆ ನಡೆದಿದ್ದು, ಕೇವಲ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ ಮಾತ್ರ ಹಾಜರಾಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಏಕನಾಥ್ ಶಿಂದೆ ನಡೆಸಿದ ಬಂಡಾಯದಿಂದಾಗಿ ಅಖಂಡ ಶಿವಸೇನೆ ಇಬ್ಬಾಗವಾಗಿತ್ತು. ಈಗ ಅದರ ಬೆನ್ನಲ್ಲೇ ಸಂಸದರಾದ ಸಂಜಯ್ ದೇಶ್‌ಮುಖ್, ಸಂಜಯ್ ಜಾಧವ್, ನಾಗೇಶ್ ಪಾಟೀಲ್-ಅಷ್ಟಿಕರ್, ಭೌಸಾಹೇಬ್ ವಾಕಚೌರೆ, ಓಮ್ರಾಜೆ ನಿಂಬಾಳ್ಕರ್ ಮತ್ತು ಸಂಜಯ್ ದಿನಾ ಪಾಟೀಲ್ ಸೇರಿದಂತೆ ಒಟ್ಟು ಆರು ಲೋಕಸಭಾ ಸಂಸದರು ಸಭೆಗೆ ಗೈರುಹಾಜರಾಗುವ ಮೂಲಕ ಠಾಕ್ರೆ ಪಾಳಯಕ್ಕೆ ತೀವ್ರ ಆಘಾತ ನೀಡಿದ್ದಾರೆ. ಸಭೆ ಆರಂಭಕ್ಕೂ ಮುನ್ನವೇ ಸಂಸದರ ಸಹಿ ಪಡೆಯಲು ಹಾಜರಾತಿ ಪುಸ್ತಕವನ್ನು ಸಿದ್ಧಪಡಿಸಲಾಗಿತ್ತಾದರೂ, ಆರು ಪ್ರಮುಖ ಸಂಸದರು ಗೈರಾಗಿದ್ದು ಪಕ್ಷದಲ್ಲಿ ಭಾರಿ ನಡುಕ ಸೃಷ್ಟಿಸಿದೆ. ಸಂಸತ್ತಿಗೆ ಆಗಮಿಸಿದ ರಾಜ್ಯಸಭಾ ಸಂಸದ ಸಂಜಯ್ ರಾವತ್, ಗೈರಾದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಯಾರು ಸಭೆಗೆ ಬಂದಿದ್ದಾರೋ ಅವರು ನಮ್ಮವರು, ಬಾರದೇ ಇದ್ದವರು ದೇಶದ್ರೋಹಿಗಳು ಮತ್ತು ಅಪ್ರಾಮಾಣಿಕರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಮ್ಮೆ ಪಕ್ಷ ಒಡೆದಿದ್ದೇವೆ ಎಂದು ಅವರು ಬೀಗುತ್ತಿದ್ದಾರೆ, ಈ ಬಾರಿಯೂ ಅದನ್ನು ಮಾಡಿ ತೋರಿಸಲಿ ನೋಡೋಣ. ಪ್ರಜಾಪ್ರಭುತ್ವವನ್ನು ನೀವು ತಮಾಷೆ ಎಂದುಕೊಂಡಿದ್ದೀರಾ...? ಇಡಿ ಮತ್ತು ಸಿಬಿಐ ಹೆಸರಿನಲ್ಲಿ ಯಾರಿಗೆ ಬೆದರಿಕೆ ಹಾಕುತ್ತಿದ್ದೀರಿ..? ಎಂದು ಪ್ರಶ್ನಿಸಿರುವ ರಾವತ್, ನಾವು ಈಗಾಗಲೇ ಜೈಲು ನೋಡಿ ಬಂದಿದ್ದೇವೆ, ಮತ್ತೊಮ್ಮೆ ಹೋಗಲು ಸಿದ್ಧರಿದ್ದೇವೆ. ಆದರೆ ನಿಮಗೆ ತಕ್ಕ ಪಾಠ ಕಲಿಸಿಯೇ ಜೈಲಿಗೆ ಹೋಗುತ್ತೇವೆ ಎಂದು ಸವಾಲು ಹಾಕಿದ್ದಾರೆ. ಈ ತುರ್ತು ಸಭೆಗೂ ಒಂದು ದಿನದ ಮುಂಚೆಯಷ್ಟೇ, ಬಂಡಾಯ ಸಂಸದರ ಗುಂಪೊಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿತ್ತು ಎಂಬ ವರದಿಗಳು ಬಂದಿವೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಬೇಕಾದ ಮೂರನೇ ಎರಡರಷ್ಟು ಸಂಖ್ಯಾಬಲ ಅಂದರೆ ಆರು ಸಂಸದರ ಬೆಂಬಲ ತಮಗಿದೆ ಎಂದು ಅವರು ಸ್ಪೀಕರ್ ಬಳಿ ದಾವೆ ಹೂಡಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಏಕನಾಥ್ ಶಿಂದೆ ಬಣವು ಅತ್ಯಂತ ರಹಸ್ಯವಾಗಿ ಆಪರೇಷನ್ ಟೈಗರ್ ಕಾರ್ಯಾಚರಣೆ ನಡೆಸುತ್ತಿದೆ ಎಂಬ ಊಹಾಪೋಹಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲೇ ಬೀಡುಬಿಟ್ಟಿದ್ದ ಡಿಸಿಎಂ ಶಿಂದೆ ಈಗ ಮುಂಬೈಗೆ ಮರಳಿದ್ದರೂ, ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಈ ಹೊಸ ರಾಜಕೀಯ ದಂಗಲ್ ಕುರಿತು ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ಸದ್ಯಕ್ಕೆ ಯಾವುದೇ ಅಧಿಕೃತ ವಿಲೀನ ಅಥವಾ ಪಕ್ಷಾಂತರದ ಘೋಷಣೆ ಹೊರಬೀಳದಿದ್ದರೂ, ಮುಂಬರುವ ದಿನಗಳಲ್ಲಿ ಉದ್ಧವ್ ಠಾಕ್ರೆ ಅವರಿಗೆ ಮಹಾರಾಷ್ಟ್ರ ರಾಜಕಾರಣದಲ್ಲಿ ಚೇತರಿಸಿಕೊಳ್ಳಲಾಗದ ಬಿಗ್ ಶಾಕ್ ಕಾಯುತ್ತಿರುವುದಂತೂ ಸ್ಪಷ್ಟವಾಗಿದೆ(ಏಜೆನ್ಸೀಸ್).