ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ರಿಂಗ್‌ಗೆ ಇಳಿಯುವ ಮುನ್ನವೇ ಪದಕ ಫಿಕ್ಸ್!
- ಕಾಮನ್‌ವೆಲ್ತ್ ಕ್ರೀಡಾಕೂಟ 2026ರಲ್ಲಿ ಉದ್ಘಾಟನೆಗೂ ಮುನ್ನವೇ ಭಾರತಕ್ಕೆ ಮೊದಲ ಪದಕ ಖಾತ್ರಿ
- ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ರಿಂಗ್‌ಗೆ ಇಳಿಯುವ ಮುನ್ನವೇ ಪದಕ ಫಿಕ್ಸ್!
- ಉದ್ಘಾಟನೆಗೂ ಮುನ್ನವೇ ಪದಕ ಪಡೆದ ಭಾರತ
ಗ್ಲ್ಯಾಸ್ಗೋ: ಇಂದಿನಿಂದ (ಗುರುವಾರ, ಜು.23) ಸ್ಕಾಟ್ಲೆಂಡ್ನ ಗ್ಲ್ಯಾಸ್ಗೋನಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಆರಂಭವಾಗುತ್ತಿದ್ದು, ಕ್ರೀಡಾಕೂಟದ ಅಧಿಕೃತ ಉದ್ಘಾಟನೆಗೂ ಮುನ್ನವೇ ಭಾರತದ ಖಾತೆಗೆ ಮೊದಲ ಪದಕ ಸೇರ್ಪಡೆಯಾಗಿದೆ.
ಹೌದು, ಭಾರತದ ಪ್ರಸಿದ್ಧ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (Lovlina Borgohain in CWG 2026) ರಿಂಗ್‌ಗೆ ಇಳಿಯುವ ಮುನ್ನವೇ ದೇಶಕ್ಕೆ ಕನಿಷ್ಠ ‘ಕಂಚಿನ ಪದಕ’ ಖಚಿತಪಡಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ರಿಂಗ್‌ಗೆ ಕಾಲಿಡದೇ ಪದಕ ಗೆದ್ದ ಲೊವ್ಲಿನಾ?
ಮಹಿಳೆಯರ 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಈ ಬಾರಿ ಕೇವಲ 5 ಮಂದಿ ಸ್ಪರ್ಧಿಗಳು ಮಾತ್ರ ಭಾಗವಹಿಸುತ್ತಿದ್ದು, ಈ ಪೈಕಿ ಅದೃಷ್ಟವಶಾತ್ ಲೊವ್ಲಿನಾ ಸೇರಿದಂತೆ ಮೂವರು ಬಾಕ್ಸರ್‌ಗಳಿಗೆ ನೇರವಾಗಿ ‘ಬೈ’ (Bye) ಸಿಕ್ಕಿದ್ದರಿಂದ ಅವರು ಸೇರವಾಗಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಇನ್ನುಳಿದ ಇಬ್ಬರು ಸ್ಪರ್ಧಿಗಳು ಕೊನೆಯ ಸೆಮಿಫೈನಲಿಸ್ಟ್ ಯಾರೆಂದು ನಿರ್ಧರಿಸಲು ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಇದೊಂದು ಅದೃಷ್ಟ ಮತ್ತು ಅನುಕೂಲಕರ ‘ಡ್ರಾ’ದಿಂದಾಗಿ ಸಿಕ್ಕ ಜಯ ಎಂದು ಕ್ರೀಡಾಭಿಮಾನಿಗಳು ಹೇಳುತ್ತಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ನಿಯಮದಂತೆ, ಬಾಕ್ಸಿಂಗ್‌ನಲ್ಲಿ ಸೆಮಿಫೈನಲ್ ತಲುಪಿ ಸೋತ ಇಬ್ಬರಿಗೂ ಕಂಚಿನ ಪದಕ ನೀಡಲಾಗುತ್ತದೆ. ಹೀಗಾಗಿ, ಲೊವ್ಲಿನಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟರುವ ಕಾರಣ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಾತ್ರಿಯಾಗಿದೆ.
ಈಗ ಟಾರ್ಗೆಟ್ ‘ಬಂಗಾರ’: ಮುಂದಿನ ಎದುರಾಳಿ ಯಾರು?
ಇದೀಗ ಕಂಚಿನ ಪದಕ ಖಚಿತವಾಗಿದ್ದು, ಲೊವ್ಲಿನಾ ಈಗ ಚಿನ್ನದ ಪದಕವನ್ನು ಪಡೆಯಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಕನಸಾಗಿದೆ. ಹಾಗೂ ಲೊವ್ಲಿನಾ ಕೂಡ ಈ ಕನಸನ್ನು ನನಗಾಗಿಸಲು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಲೊವ್ಲಿನಾ ಅವರು ಟುವಾಲು ದೇಶದ ತಾಫಾಕಿ ಟಿಕೆಬಿಪಿ ಅವರನ್ನು ಎದುರಿಸಲಿದ್ದಾರೆ. ಈ ಸೆಮಿಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಭಾರತೀಯ ಬಾಕ್ಸರ್ ನೇರವಾಗಿ ಫೈನಲ್ ತಲುಪಲಿದ್ದು, ಕನಿಷ್ಠ ‘ಬೆಳ್ಳಿ ಪದಕ’ ಖಚಿತವಾಗಲಿದೆ. ಫೈನಲ್‌ನಲ್ಲಿಯೂ ಜಯಗಳಿಸಿದರೆ ಚಿನ್ನದ ಪದಕ ಭಾರತದ ಪಾಲಾಗಲಿದೆ, (ಏಜನ್ಸೀಸ್).