- ತಮ್ಮ ಮಗಳನ್ನು ಪ್ರೀತಿ ಮಾಡಿದ ಎಂಬ ಕಾರಣಕ್ಕೆ ಯುವಕನೊಬ್ಬನ ಬರ್ಬರ ಹತ್ಯೆ
- ಪ್ರಿಯಕರನ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಣೆಗೆ ಕುಂಕುಮ ಇಟ್ಟುಕೊಂಡು ಮದುವೆಯಾದ ಯುವತಿ
- ಜೀವನ ಪೂರ್ತಿ ಆತನ ಮನೆಯಲ್ಲಿ ಸೊಸೆಯಾಗಿ ಬಾಳುವ ಪ್ರತಿಜ್ಞೆ ಮಾಡಿದ ಅಂಚಲ್
- ಸಕ್ಸಮ್ ಮೃತಪಟ್ಟರು ನನ್ನ ಪ್ರೀತಿ ಗೆದ್ದಿದೆ ಮತ್ತು ನನ್ನ ತಂದೆ ಹಾಗೂ ಸಹೋದರು ಸೋತರೆಂದ ಯುವತಿ
ಮುಂಬೈ: ತಮ್ಮ ಮಗಳನ್ನು ಪ್ರೀತಿ ಮಾಡಿದ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಂದೇಡ್ನಲ್ಲಿ ನಡೆದಿದೆ. ಈ ದುರಂತದ ನಡುವೆ ಮನಕಲಕುವ ಮತ್ತೊಂದು ಘಟನೆ ನಡೆದಿದ್ದು, ಯುವತಿ ತನ್ನ ಪ್ರಿಯಕರನ ಅಂತ್ಯಕ್ರಿಯೆ ಸಂದರ್ಭದಲ್ಲಿ ಹಣೆಗೆ ಕುಂಕುಮ ಇಟ್ಟುಕೊಂಡು, ಮದುವೆಯಾಗುವ ( Love Lives ) ಮೂಲಕ ತನ್ನ ಜೀವನ ಪೂರ್ತಿ ಆತನ ಮನೆಯಲ್ಲಿ ಸೊಸೆಯಾಗಿ ಬಾಳುವ ಪ್ರತಿಜ್ಞೆ ಮಾಡಿದ್ದಾಳೆ.
ಮೃತ ಯುವಕನನ್ನು ಸಕ್ಸಮ್ ಟೇಟ್ ಎಂದು ಗುರುತಿಸಲಾಗಿದೆ. ಯುವತಿ ಅಂಚಲ್ಗೆ ತನ್ನ ಸಹೋದರರ ಮೂಲಕ ಸಕ್ಸಮ್ ಪರಿಚಯವಾಯಿತು. ಆತನ ಮನೆಗೆ ಆಗಾಗ ಭೇಟಿ ನೀಡಿದ್ದರಿಂದ ಅವರಿಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿತು. ಮೂರು ವರ್ಷಗಳ ಕಾಲ ಅವರಿಬ್ಬರು ಪ್ರೇಮ ಪಕ್ಷಿಗಳಾಗಿ ಪ್ರೇಮಲೋಕದಲ್ಲಿ ಹಾರಾಡಿದರು. ಆದರೆ, ಅವರಿಬ್ಬರ ಪ್ರೀತಿಗೆ ಅಡ್ಡಿಯಾಗಿದ್ದು ಜಾತಿ. ಇತ್ತೀಚೆಗೆ ಜಾತಿ ವಿಚಾರಕ್ಕಾಗಿ ಅಂಚಲ್ ಕುಟುಂಬದವರು ಪ್ರೀತಿಯನ್ನು ವಿರೋಧಿಸಿದರು.
ಅನೇಕ ಬಾರಿ ಬೆದರಿಕೆ ಹಾಕಿದರು ಕೂಡ ಅದ್ಯಾವುದನ್ನು ಲೆಕ್ಕಿಸದೇ ಅಂಚಲ್, ಸಕ್ಸಮ್ನನ್ನು ಆಗಾಗ ಭೇಟಿ ಮಾಡುತ್ತಿದ್ದಳು. ಸಕ್ಸಮ್ನನ್ನು ಮದುವೆಯಾಗಲು ಅಂಚಲ್ ಮುಂದಾಗಿದ್ದಾಳೆ ಎಂಬ ವಿಚಾರ ಆಕೆಯ ಸಹೋದರರು ಮತ್ತು ತಂದೆ ಗೊತ್ತಾದಾಗ, ಕಳೆದ ಗುರುವಾರ ಸಕ್ಸಮ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ಮಾಡಿದರು. ಅಷ್ಟೇ ಅಲ್ಲದೆ, ಆತನ ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದರು.
ಭೀಕರವಾಗಿ ಕೊನೆಯುಸಿರೆಳೆದ ಸಕ್ಸಮ್ ಅಂತ್ಯಕ್ರಿಯೆ ಇತ್ತೀಚೆಗೆ ನಡೆಯಿತು. ಈ ವೇಳೆ ಸಕ್ಸಮ್ ಮನೆಗೆ ತೆರಳಿದ ಅಂಚಲ್, ಆತನ ದೇಹಕ್ಕೆ ಅರಿಸಿನ ಹಚ್ಚಿ, ತನ್ನ ಹಣೆಗೆ ಕುಂಕುಮ ಇಟ್ಟುಕೊಂಡ ಪ್ರಿಯಕರ ಶವದ ಜೊತೆ ಮದುವೆ ಮಾಡಿಕೊಂಡಳು. ಅಲ್ಲದೆ, ತನ್ನ ಉಳಿದ ಜೀವನವನ್ನು ಆತನ ಹೆಂಡತಿಯಾಗಿ ಕಳೆಯಲು ನಿರ್ಧರಿಸಿದಳು.
ಸಕ್ಸಮ್ ಮೃತಪಟ್ಟರು ನನ್ನ ಪ್ರೀತಿ ಗೆದ್ದಿದೆ ಮತ್ತು ನನ್ನ ತಂದೆ ಹಾಗೂ ಸಹೋದರು ಸೋತರು ಎಂದು ಅಂಚಲ್ ಹೇಳಿದಳು. ಅಲ್ಲದೆ, ತನ್ನ ಪ್ರಿಯಕರನನ್ನು ಕೊಂದ ಕೊಲೆಗಡುಕರಿಗೆ ಮರಣದಂಡನೆ ವಿಧಿಸುವಂತೆ ಅಂಚಲ್ ಆಗ್ರಹಿಸಿದರು. ಸದ್ಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದಾರೆ, (ಏಜೆನ್ಸೀಸ್).