HIV 
ದೇಶ

ಪ್ರೇಮ ವೈಫಲ್ಯ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ (HIV) ಇಂಜೆಕ್ಷನ್ ನೀಡಿದ ಮಹಿಳೆ! ಮುಂದೇನಾಯ್ತು?

ಪ್ರಮುಖ ಮುಖ್ಯಾಂಶಗಳು

  • ಕರ್ನೂಲ್‌ನಲ್ಲಿ ಘೋರ ಕೃತ್ಯ: ಮಾಜಿ ಪ್ರಿಯಕರನ ಪತ್ನಿಯ ಮೇಲೆ 'ಎಚ್‌ಐವಿ' ದಾಳಿ!
  • ಸಿನಿಮೀಯ ಮಾದರಿಯಲ್ಲಿ ಸೇಡು: ಅಪಘಾತದ ನಾಟಕವಾಡಿ ವೈದ್ಯೆಗೆ ಎಚ್‌ಐವಿ ಇಂಜೆಕ್ಷನ್ ಚುಚ್ಚಿದ ಕಿರಾತಕಿ
  • ಸಂಶೋಧನೆಯ ಹೆಸರಲ್ಲಿ ಎಚ್‌ಐವಿ ರಕ್ತ ಸಂಗ್ರಹ; ವೈದ್ಯೆಯ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ
ಕರ್ನೂಲ್: ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನ ಪತ್ನಿಯ ಮೇಲೆ ಎಚ್‌ಐವಿ (HIV) ವೈರಸ್ ಇರುವ ಇಂಜೆಕ್ಷನ್ ಚುಚ್ಚಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ಬೋಯ ವಸುಂಧರಾ (34) ಎಂಬಾಕೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಸುಂಧರಾ ಮತ್ತು ಕರ್ನೂಲ್‌ನ ವ್ಯಕ್ತಿಯೊಬ್ಬರು ಈ ಹಿಂದೆ ಪ್ರೀತಿಸುತ್ತಿದ್ದರು. ಆದರೆ, ಆತ ಬೇರೊಬ್ಬ ಮಹಿಳೆಯನ್ನು (ವೈದ್ಯೆ) ಮದುವೆಯಾಗಿದ್ದನ್ನು ಸಹಿಸಲಾರದ ವಸುಂಧರಾ, ಆಕೆಯ ಜೀವ ತೆಗೆಯಲು ಸಂಚು ರೂಪಿಸಿದ್ದಳು. ಈ ಕೃತ್ಯಕ್ಕೆ ಖಾಸಗಿ ಆಸ್ಪತ್ರೆಯ ನರ್ಸ್ ಕೊಂಗೆ ಜ್ಯೋತಿ ಮತ್ತು ಆಕೆಯ ಇಬ್ಬರು ಮಕ್ಕಳ ಸಹಾಯ ಪಡೆದಿದ್ದಳು.

ಸಿನಿಮೀಯ ಶೈಲಿಯ ದಾಳಿ

ಜನವರಿ 9 ರಂದು ಸಂತ್ರಸ್ತ ವೈದ್ಯೆ ಕಾಲೇಜಿನಿಂದ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ, ಆರೋಪಿಗಳು ಉದ್ದೇಶಪೂರ್ವಕವಾಗಿ ಬೈಕ್‌ನಿಂದ ಡಿಕ್ಕಿ ಹೊಡೆದಿದ್ದಾರೆ. ಅಪಘಾತವಾಗಿ ಕೆಳಗೆ ಬಿದ್ದ ವೈದ್ಯೆಗೆ ಸಹಾಯ ಮಾಡುವಂತೆ ನಟಿಸಿ ವಸುಂಧರಾ ಅಲ್ಲಿಗೆ ಬಂದಿದ್ದಾಳೆ. ಗಾಯಾಳುವನ್ನು ಆಟೋರಿಕ್ಷಾಕ್ಕೆ ಹತ್ತಿಸುವ ನೆಪದಲ್ಲಿ, ಮುಂಚಿತವಾಗಿ ಸಿದ್ಧಪಡಿಸಿಕೊಂಡಿದ್ದ ಎಚ್‌ಐವಿ ವೈರಸ್ ಹೊಂದಿದ್ದ ಇಂಜೆಕ್ಷನ್ ಅನ್ನು ಆಕೆಗೆ ಚುಚ್ಚಿದ್ದಾಳೆ. ವೈದ್ಯೆ ಕಿರುಚಿಕೊಂಡಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಎಚ್‌ಐವಿ ರಕ್ತ ಸಂಗ್ರಹಿಸಿದ್ದು ಹೇಗೆ?

ಆರೋಪಿ ಜ್ಯೋತಿ ವೃತ್ತಿಯಲ್ಲಿ ನರ್ಸ್ ಆಗಿದ್ದರಿಂದ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಚ್‌ಐವಿ ಸೋಂಕಿತರ ರಕ್ತದ ಮಾದರಿಗಳನ್ನು 'ಸಂಶೋಧನೆ'ಯ ಹೆಸರಿನಲ್ಲಿ ಸಂಗ್ರಹಿಸಿದ್ದಳು. ಇದನ್ನು ವಸುಂಧರಾ ತನ್ನ ಮನೆಯ ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟುಕೊಂಡು ದಾಳಿಗೆ ಬಳಸಿದ್ದಳು ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ತಿಳಿದುಬಂದಿದೆ.
ಜನವರಿ 10 ರಂದು ಸಂತ್ರಸ್ತೆಯ ಪತಿ (ವೈದ್ಯ) ನೀಡಿದ ದೂರಿನ ಮೇರೆಗೆ ಕರ್ನೂಲ್ ಪೊಲೀಸರು ತನಿಖೆ ಕೈಗೊಂಡು, ಜನವರಿ 24 ರಂದು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜೆನ್ಸೀಸ್).