ಜೈಪುರ: ರಾಜಸ್ಥಾನದ ಜೈಲು ಇತಿಹಾಸದಲ್ಲಿಯೇ ಅತ್ಯಂತ ವಿಲಕ್ಷಣ ಘಟನೆಯೊಂದು ನಡೆದಿದೆ. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಜೈಲಿನಲ್ಲೇ ಪ್ರೇಮಪಾಶಕ್ಕೆ(Married on Parole) ಸಿಲುಕಿದ್ದು, ಇದೀಗ ಮದುವೆಯಾಗಲು ಅವರಿಗೆ ಪೆರೋಲ್ ಮಂಜೂರಾಗಿದೆ.
ಜೈಪುರದ 'ಓಪನ್ ಪ್ರಿಸನ್' (ಮುಕ್ತ ಕಾರಾಗೃಹ) ವ್ಯವಸ್ಥೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಪ್ರಿಯಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಅಲಿಯಾಸ್ ಜಾಕ್ ಪರಸ್ಪರ ಭೇಟಿಯಾಗಿದ್ದರು. ಸಾಮಾನ್ಯ ಜೈಲುಗಳಿಗಿಂತ ಇಲ್ಲಿ ಕೈದಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸಂವಹನಕ್ಕೆ ಅವಕಾಶವಿರುತ್ತದೆ. ಕಳೆದ ಆರು ತಿಂಗಳಿನಿಂದ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಈ ಜೋಡಿ, ಇದೀಗ ಜನವರಿ 23ರ ಶುಕ್ರವಾರದಂದು ಅಲ್ವಾರ್‌ನ ಬರೋಡಮೇವ್‌ನಲ್ಲಿ ವಿವಾಹವಾಗಲಿದ್ದಾರೆ. ಇವರ ಮದುವೆಯ ಆಮಂತ್ರಣ ಪತ್ರಿಕೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಳೆಯ ಪ್ರೇಮಿಗಳ ಬಿಟ್ಟು ಹೊಸ ಬದುಕು
ವಿಶೇಷವೆಂದರೆ, ಈ ಹಿಂದೆ ಕೊಲೆ ಕೃತ್ಯಗಳಲ್ಲಿ ಸಾಥ್ ನೀಡಿದ್ದ ತಮ್ಮ ಹಳೆಯ ಪ್ರೇಮಿಗಳನ್ನು ಕೈಬಿಟ್ಟಿರುವ ಈ ಇಬ್ಬರು, ಈಗ ಪರಸ್ಪರ ಕೈಹಿಡಿಯುತ್ತಿದ್ದಾರೆ. ಹನುಮಾನ್ ಪ್ರಸಾದ್ ತನ್ನಗಿಂತ 10 ವರ್ಷ ಹಿರಿಯವಳಾಗಿದ್ದ ಸಂತೋಷ್ ಶರ್ಮಾಳನ್ನು ಮರೆತಿದ್ದರೆ, ಪ್ರಿಯಾ ಸೇಠ್ ತನ್ನ ಸಹ-ಆರೋಪಿ ದೀಕ್ಷಾಂತ್‌ನನ್ನು ಬಿಟ್ಟು ಹನುಮಾನ್ ಜೊತೆ ಹೊಸ ಜೀವನ ಆರಂಭಿಸಲು ಮುಂದಾಗಿದ್ದಾಳೆ.
ಆರೋಪಿಗಳ ಹಿನ್ನೆಲೆ
ವಧು ಪ್ರಿಯಾ ಸೇಠ್: 2018ರ ಮೇ ತಿಂಗಳಲ್ಲಿ ತನ್ನ ಪ್ರಿಯಕರನನ್ನೇ ಹನಿಟ್ರ್ಯಾಪ್‌ಗೆ ಸಿಲುಕಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಈಕೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈ ಕೃತ್ಯದಲ್ಲಿ ಈಕೆಯ ಮಾಜಿ ಪ್ರಿಯಕರ ದೀಕ್ಷಾಂತ್ ಕಾಮ್ರಾ ಕೂಡ ಭಾಗಿಯಾಗಿದ್ದು, ಆತನೂ ಜೈಲಿನಲ್ಲಿದ್ದಾನೆ.
ವರ ಹನುಮಾನ್ ಪ್ರಸಾದ್ (ಜಾಕ್): ಈತ ತನ್ನ ಅಂದಿನ ಪ್ರಿಯತಮೆ ಸಂತೋಷ್ ಶರ್ಮಾ ಎಂಬಾಕೆಯ ಪತಿ ಮತ್ತು ಮಕ್ಕಳನ್ನು 2017ರಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಸಂತೋಷ್ ಕೂಡ ಜೈಲು ಪಾಲಾಗಿದ್ದಾಳೆ. ಇಬ್ಬರೂ ಕೊಲೆಗಡುಕರು ಜೈಲಿನ ನಿಯಮಗಳ ಅಡಿಯಲ್ಲಿ ಮದುವೆಗಾಗಿ ರಜೆ (ಪೆರೋಲ್) ಪಡೆದಿದ್ದು, ಈ ವಿಚಿತ್ರ ಪ್ರೇಮಕಥೆ ಮತ್ತು ವಿವಾಹದ ಸುದ್ದಿ ಈಗ ಇಡೀ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).