ಬಂಗಾಳದಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ
- ಬಂಗಾಳದಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ
- ಪೊಲೀಸರಿಂದ 1,200 ಮಸೀದಿ ಹಾಗೂ 199 ಮಂದಿರಗಳ ಲೌಡ್‌ಸ್ಪೀಕರ್ ತೆರವು
ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಶಬ್ದ ಮಾಲಿನ್ಯದ ವಿರುದ್ಧ ಪೊಲೀಸರು ದಿಢೀರ್ ಮತ್ತು ಕಠಿಣ ಕಾರ್ಯಾಚರಣೆ ಆರಂಭಿಸಿದ್ದು, ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ. ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ, ಕೇವಲ ಎರಡು ದಿನಗಳ ಅವಧಿಯಲ್ಲಿ ಬರೋಬ್ಬರಿ 1,500ಕ್ಕೂ ಅಧಿಕ ಧಾರ್ಮಿಕ ಸಂಸ್ಥೆಗಳಿಂದ ಧ್ವನಿವರ್ಧಕಗಳನ್ನು (Loudspeaker Row in West Bengal) ತೆರವುಗೊಳಿಸಲಾಗಿದೆ ಎಂದು ವರದಿಯಾಗಿದೆ.
ನಿಗದಿತ ಶಬ್ದ ಮಿತಿಗಳನ್ನು ಮೀರಿ ವರ್ತಿಸಿದ್ದಕ್ಕಾಗಿ ಕನಿಷ್ಠ 1,279 ಮಸೀದಿಗಳು ಮತ್ತು 199 ದೇವಾಲಯಗಳ ಆಡಳಿತ ಮಂಡಳಿಗೆ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ.
ಯಾವುದೇ ತಾರತಮ್ಯವಿಲ್ಲ!
ಈ ಕಾರ್ಯಾಚರಣೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದ ಉನ್ನತ ನಾಯಕರು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೂಜಾ ಸ್ಥಳಗಳಲ್ಲಿ ಶಬ್ದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ನಗರಾಭಿವೃದ್ಧಿ ಸಚಿವ ಅಗ್ನಿಮಿತ್ರ ಪಾಲ್ ಈ ಬಗ್ಗೆ ಮಾತನಾಡಿ, ಇದು ಕೇವಲ ಮಸೀದಿಗಳಿಗೆ ಮಾತ್ರ ಸೀಮಿತವಲ್ಲ. ಧಾರ್ಮಿಕ ಸ್ಥಳಗಳಲ್ಲಿ ಶಬ್ದ ನಿರ್ಬಂಧ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಚಿವ ಸಂಪುಟ ನಿರ್ಧರಿಸಿದೆ. ದೇವಾಲಯಗಳು, ಮಸೀದಿಗಳು ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಿಗೂ ಈ ನಿಯಮ ಅನ್ವಯಿಸುತ್ತದೆ. ನಿಯಮ ಉಲ್ಲಂಘನೆಗೆ ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಯಮ ಏನು ಹೇಳುತ್ತದೆ?
ಪಶ್ಚಿಮ ಬಂಗಾಳ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳು, (2000) ಪ್ರಕಾರ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಸಲು ಪೊಲೀಸರ ಪೂರ್ವಾನುಮತಿ ಕಡ್ಡಾಯವಾಗಿದೆ. ಹಾಗೂ ಅನುಮತಿ ಪಡೆದ ಸ್ಥಳದಲ್ಲಿ ಶಬ್ದದ ಮಿತಿ ಕಟ್ಟುನಿಟ್ಟಾಗಿ 50 ರಿಂದ 75 ಡೆಸಿಬಲ್ ಒಳಗೆ ಇರಬೇಕು.
ಪಶ್ಚಿಮ ಬಂಗಾಳ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದಂತೆ ಹಗಲಿನಲ್ಲಿ 55 ಮತ್ತು ರಾತ್ರಿಯಲ್ಲಿ 45 ಡೆಸಿಬಲ್ ಶಬ್ದ ಮಿತಿ ಮೀರುವಂತಿಲ್ಲ ಎಂಬ ಸ್ಪಷ್ಟ ಉಲ್ಲೇಖವಿದೆ.
ಸ್ಥಳೀಯರ ಪ್ರತಿಕ್ರಿಯೆ
ಹಲವಾರು ಮಸೀದಿ ಮತ್ತು ದೇವಾಲಯ ಸಮಿತಿಯ ಪ್ರತಿನಿಧಿಗಳ ಪ್ರಕಾರ, ಪೊಲೀಸರು ಯಾವುದೇ ಲಿಖಿತ ಆದೇಶ ನೀಡದೆ ಮೌಖಿಕವಾಗಿ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಪೊಲೀಸರು ನೇರವಾಗಿ ಮಸೀದಿಗಳು ಮತ್ತು ದೇವಾಲಯಗಳ ಬಳಿಗೆ ತೆರಳಿ, ಮೇಲ್ಛಾವಣಿಯ ಮೇಲಿರುವ ಹೆಚ್ಚಿನ ಡೆಸಿಬಲ್ ಸಾಮರ್ಥ್ಯದ ಲೌಡ್‌ಸ್ಪೀಕರ್‌ಗಳನ್ನು ಕಳಚುವಂತೆ ಒತ್ತಾಯಿಸಿದ್ದಾರೆ.
ಕೆಲವು ಕಡೆಗಳಲ್ಲಿ ಪೊಲೀಸರ ಸಮ್ಮುಖದಲ್ಲೇ ಮಸೀದಿಗಳ ಮೇಲ್ಛಾವಣಿಯಿಂದ ಧ್ವನಿವರ್ಧಕಗಳನ್ನು ಕೆಳಗಿಳಿಸಲಾಗಿದೆ. ಇದರ ಬದಲಾಗಿ ಕಡಿಮೆ ಶಬ್ದದ ಸಣ್ಣ ಸೌಂಡ್ ಬಾಕ್ಸ್‌ಗಳನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ, (ಏಜನ್ಸೀಸ್).