Sonam Wangchuk Wife > ಸಫ್ದರ್‌ಜಂಗ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಹೊರಿಸಿ ಕೋರ್ಟ್‌ ಮೊರೆ ಹೋದ ಗೀತಾಂಜಲಿ 
ದೇಶ

ಚಿಕಿತ್ಸೆಯ ನೆಪದಲ್ಲಿ ನನ್ನ ಪತಿಯ ಬಂಧನ!...ಸಫ್ದರ್‌ಜಂಗ್ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಹೊರಿಸಿ ಕೋರ್ಟ್‌ ಮೊರೆ ಹೋದ ಗೀತಾಂಜಲಿ | Sonam Wangchuk Wife

ನವದೆಹಲಿ: ಹೋರಾಟಗಾರ ಸೋನಮ್ ವಾಂಗ್ಚುಕ್​ರನ್ನು ಸಫ್ದರ್‌ಜಂಗ್ ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರಿ ಅವರ ಪತ್ನಿ ಗೀತಾಂಜಲಿ ಅಂಗ್ಮೋ ( Sonam Wangchuk Wife) ಭಾನುವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆಯ ಮೇಲೆ ತಮಗೆ ನಂಬಿಕೆ ಇಲ್ಲದಂತಾಗಿದೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದು, ಈ ಕುರಿತು ಇಂದು ತುರ್ತು ವಿಚಾರಣೆ ನಡೆಸುವಂತೆ ವಿನಂತಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಸತತ 21 ದಿನಗಳಿಂದ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್​ರನ್ನು ಚಿಕಿತ್ಸೆಯ ನೆಪದಲ್ಲಿ ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಗೀತಾಂಜಲಿ ಆರೋಪಿಸಿದ್ದಾರೆ. ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಅವರನ್ನು ಮುಂದುವರಿಸಿರುವ ಕ್ರಮವು ಅಸಂವಿಧಾನಿಕವಾಗಿದ್ದು, ಸಂವಿಧಾನದ 19 ಮತ್ತು 21ನೇ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ 20 ದಿನಗಳಿಂದ ವಾಂಗ್ಚುಕ್​ರನ್ನು ಪರೀಕ್ಷಿಸುತ್ತಿದ್ದ ವೈದ್ಯರು ಅಥವಾ ಅವರ ಕಾನೂನು ಸಲಹೆಗಾರರನ್ನು ಭೇಟಿಯಾಗಲು ಬಿಡದೆ, ಅವರನ್ನು ಸಂಪೂರ್ಣವಾಗಿ ಐಸೊಲೇಷನ್‌ನಲ್ಲಿ ಇಡಲಾಗಿದೆ ಎಂದು ಆರೋಪಿಸಿರುವ ಪತ್ನಿ, ತಕ್ಷಣವೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿದ್ದಾರೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೀತಾಂಜಲಿ, ಸಫ್ದರ್‌ಜಂಗ್ ಆಸ್ಪತ್ರೆಯ ವರದಿಗಳ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ವಾಂಗ್ಚುಕ್​ ಪೊಟ್ಯಾಸಿಯಮ್ ಮಟ್ಟವು 2.9 ಕ್ಕೆ ಇಳಿದಿದೆ ಮತ್ತು ಇದು ಪ್ರಾಣಕ್ಕೆ ಅಪಾಯಕಾರಿ ಎಂದು ಆಸ್ಪತ್ರೆಯ ಅಧಿಕಾರಿಗಳು ಕುಟುಂಬಕ್ಕೆ ತಿಳಿಸಿದ್ದರು. ಆದರೆ ಆಸ್ಪತ್ರೆಯ ಸಾರ್ವಜನಿಕ ಹೆಲ್ತ್ ಬುಲೆಟಿನ್‌ನಲ್ಲಿ ನಿಖರವಾದ ಅಂಕಿ-ಅಂಶವನ್ನು ಬಹಿರಂಗಪಡಿಸದೆ ಕೇವಲ ಪೊಟ್ಯಾಸಿಯಮ್ ಮಟ್ಟ ಕುಸಿಯುತ್ತಿದೆ ಎಂದು ಬರೆದಿರುವುದಾಗಿ ತಿಳಿಸಿದರು.
ಸುಮಾರು 10 ಗಂಟೆಗಳ ನಿರಂತರ ವಿನಂತಿಯ ನಂತರ ರಾತ್ರಿ 10.30 ರ ಸುಮಾರಿಗೆ ರಕ್ತದ ಮಾದರಿಯನ್ನು ಸಂಗ್ರಹಿಸಲು ಕುಟುಂಬಕ್ಕೆ ಅವಕಾಶ ನೀಡಲಾಯಿತು. ಅದನ್ನು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಪೊಟ್ಯಾಸಿಯಮ್ ಮಟ್ಟ 3.5 ಇರುವುದು ಕಂಡುಬಂದಿದೆ. ಇದು ಸಹಜ ಪ್ರಮಾಣದಲ್ಲಿದೆ ಎಂದು ಗೀತಾಂಜಲಿ ಹೇಳಿದ್ದಾರೆ.

ಆಸ್ಪತ್ರೆಯಲ್ಲೇ ನೂರಕ್ಕೂ ಹೆಚ್ಚು ಪೊಲೀಸರ ಕಾವಲು!

ಕುಟುಂಬದವರ ಇಚ್ಛೆಯಂತೆ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಅಥವಾ ಡಿಸ್ಚಾರ್ಜ್ ಮಾಡಲು ಆಸ್ಪತ್ರೆ ನಿರಾಕರಿಸುತ್ತಿದೆ. ಅಲ್ಲದೆ, ವಾಂಗ್‌ಚುಕ್ ಇರುವ ವಾರ್ಡ್‌ನ ಮಹಡಿಯಲ್ಲಿ ಸುಮಾರು 30 ಪೊಲೀಸರು ಹಾಗೂ ಆಸ್ಪತ್ರೆಯಾದ್ಯಂತ 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕುಟುಂಬದವರ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ವಾಂಗ್ಚುಕ್​ ಪತ್ನಿ ದೂರಿದ್ದಾರೆ. ಇದು ವೈದ್ಯಕೀಯ ಆರೈಕೆಯಲ್ಲ, ಕಾನೂನುಬಾಹಿರ ಬಂಧನ. ಒಂದು ವೇಳೆ ಸೋನಮ್ ವಾಂಗ್ಚುಕ್​ ಅವರಿಗೆ ಏನಾದರೂ ಆದರೆ ಅದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ಸರ್ಕಾರವೇ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ವಾಂಗ್ಚುಕ್​ ಆರೋಗ್ಯ ಮತ್ತಷ್ಟು ಹದಗೆಡುವ ಮುನ್ನವೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ದೀರ್ಘಕಾಲದ ಉಪವಾಸ ಮತ್ತು ನಿರ್ಜಲೀಕರಣದಿಂದಾಗಿ ವಾಂಗ್‌ಚುಕ್ ದುರ್ಬಲಗೊಂಡಿದ್ದಾರೆ, ಆದರೆ ಅವರ ಆರೋಗ್ಯ ಸ್ಥಿರವಾಗಿದ್ದು ನಿರಂತರ ವೈದ್ಯಕೀಯ ನಿಗಾದ ಅಗತ್ಯವಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಈ ಹಿಂದೆ ತಿಳಿಸಿತ್ತು. ಇದರ ನಡುವೆಯೇ ಅವರನ್ನು ಪ್ರತಿಭಟನಾ ಸ್ಥಳದಿಂದ ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿರುವ ಕ್ರಮ ಈಗ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ(ಏಜೆನ್ಸೀಸ್​).