ತಾಯಿ-ಮಗುವನ್ನು ಕೂದಲೆಳೆ ಅಂತರದಲ್ಲಿ ಕಾಪಾಡಿದ ದೈವ ಶಕ್ತಿ: ಸಿಸಿಟಿವಿ ದೃಶ್ಯ ನೋಡಿದ್ರೆ ಮೈ ಜುಂ ಎನ್ನುತ್ತೆ! Mother And Child Miraculously Escape  
ದೇಶ

ತಾಯಿ-ಮಗುವನ್ನು ಕೂದಲೆಳೆ ಅಂತರದಲ್ಲಿ ಕಾಪಾಡಿದ ದೈವ ಶಕ್ತಿ: ಸಿಸಿಟಿವಿ ದೃಶ್ಯ ನೋಡಿದ್ರೆ ಮೈ ಜುಂ ಎನ್ನುತ್ತೆ! Mother And Child Miraculously Escape

ಪ್ರಮುಖ ಮುಖ್ಯಾಂಶಗಳು

  • ಕಿಲಿಮನೂರ್‌ನಲ್ಲಿ ನಡೆದ ಭೀಕರ ಅಪಘಾತದ ಮೈ ಜುಂ ಎನಿಸುವ ವಿಡಿಯೋ ವೈರಲ್​
  • ಲಾರಿ ಡಿಕ್ಕಿಯಾಗುವ ಕೆಲವೇ ಸೆಕೆಂಡ್ ಮುನ್ನ ಕಾರಿನಿಂದ ಇಳಿದ ತಾಯಿ-ಮಗು
  • ಭೂಮಿ ಮೇಲೆ ದೇವರು ಇದ್ದಾನೆ ಅನ್ನೋದಕ್ಕೆ ಈ ಸಿಸಿಟಿವಿ ದೃಶ್ಯವೇ ಸಾಕ್ಷಿ
  • ಗೂಡ್ಸ್ ಲಾರಿ ಚಾಲಕನ ವಿರುದ್ಧ ಪೊಲೀಸರ ತನಿಖೆ ತೀವ್ರ
Mother And Child Miraculously Escape : ಕೊಲ್ಲುವವನಿಗಿಂತ ಕಾಯುವವನೇ ದೊಡ್ಡವನು ಮತ್ತು ಈ ಭೂಮಿ ಮೇಲೆ ದೇವರು ಇದ್ದಾನೆ ಅನ್ನೋದಕ್ಕೆ ಕೆಲವೊಮ್ಮೆ ಕಣ್ಣೆದುರೇ ಸಾಕ್ಷಿಗಳು ಸಿಕ್ಕಿಬಿಡುತ್ತವೆ. ಅದಕ್ಕೆ ಸರಿಯಾದ ಉದಾಹರಣೆ ಎಂಬಂತೆ, ತಿರುವನಂತಪುರಂನ ಕಿಲಿಮನೂರ್‌ನಲ್ಲಿ ಒಂದು ಪವಾಡವೇ ನಡೆದುಹೋಗಿದೆ.
ಹೌದು, ನಿಲ್ಲಿಸಿದ್ದ ಕಾರಿಗೆ ಸರಕು ಸಾಗಣೆ ಲಾರಿಯೊಂದು ಭೀಕರವಾಗಿ ಬಂದು ಅಪ್ಪಳಿಸುವ ಕೇವಲ ಕೆಲವೇ ಕೆಲವು ಸೆಕೆಂಡುಗಳ ಮುನ್ನವಷ್ಟೇ ತಾಯಿ ಮತ್ತು ಮಗು ಕಾರಿನಿಂದ ಕೆಳಗಿಳಿದಿದ್ದಾರೆ! ಕಾಲನ ರೂಪದಲ್ಲಿ ಬಂದ ಲಾರಿ ಕಾರನ್ನು ನುಜ್ಜುಗುಜ್ಜು ಮಾಡಿದರೂ, ವಿಧಿಯ ಆಟವನ್ನು ಸೋಲಿಸಿ ಆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಈ ಅಪಘಾತದ ಮೈ ಜುಂ ಎನಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದರೆ, 'ಅವರ ಆಯಸ್ಸು ಗಟ್ಟಿ ಇತ್ತು, ದೇವರೇ ಕೈ ಹಿಡಿದು ಕಾಪಾಡಿದ' ಎಂದು ಉದ್ಗರಿಸದೇ ಇರಲು ಸಾಧ್ಯವೇ ಇಲ್ಲ!
ಕಿಲಿಮನೂರ್‌ನ ಇಟ್ಟಚ್ಚಿರ ಎಂಬಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಯುವತಿಯೊಬ್ಬರು ತಮ್ಮ ಪತಿ ಮತ್ತು ಮಗುವಿನೊಂದಿಗೆ ಕಾರಿನಲ್ಲಿ ಸಮೀಪದ ಅಂಗಡಿಯೊಂದಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ರಸ್ತೆಯ ಒಂದು ಬದಿಯಲ್ಲಿ ಕಾರನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿದ ನಂತರ, ಯುವತಿ ಮತ್ತು ಮಗು ಕಾರಿನಿಂದ ಕೆಳಗಿಳಿದ ತಕ್ಷಣವೇ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ಈ ತೀವ್ರತೆಗೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಆ ಸಮಯದಲ್ಲಿ ಕಾರಿನೊಳಗೆ ಇದ್ದ ಯುವತಿಯ ಪತಿ ಯಾವುದೇ ಗಾಯಗಳಿಲ್ಲದೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.
ಲಾರಿಯ ನಿಯಂತ್ರಣ ತಪ್ಪಿದ್ದೇ ಈ ಭೀಕರ ಅಪಘಾತಕ್ಕೆ ಮುಖ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ತೀವ್ರತೆಗೆ ರಸ್ತೆಯಲ್ಲಿದ್ದವರೆಲ್ಲ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಸದ್ಯ ಈ ಇಡೀ ಘಟನೆಯ ಮೈ ಜುಂ ಎನಿಸುವ ದೃಶ್ಯಾವಳಿಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಅಂದಹಾಗೆ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಿಲಿಮನೂರು ಪೊಲೀಸರು ತನಿಖೆ ಕೈಗೊಂಡಿದ್ದು, ಅಜಾಗರೂಕತೆ ಹಾಗೂ ಬೇಜವಾಬ್ದಾರಿಯ ಚಾಲನೆಗಾಗಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ, (ಏಜೆನ್ಸೀಸ್​).
(ವಿಡಿಯೋ ಕ್ರೆಡಿಟ್​: Manoramanews)