Maulana Jarjis Ansari | ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡ್ತಿದ್ರು!...ಯುಪಿ ಮೌಲಾನಾ ವಿವಾದಾತ್ಮಕ ಹೇಳಿಕೆಗೆ ದೇಶಾದ್ಯಂತ ಆಕ್ರೋಶ 
ದೇಶ

ಶ್ರೀಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್ ಮಾಡ್ತಿದ್ರು!...ಯುಪಿ ಮೌಲಾನಾ ವಿವಾದಾತ್ಮಕ ಹೇಳಿಕೆಗೆ ದೇಶಾದ್ಯಂತ ಆಕ್ರೋಶ | Maulana Jarjis Ansari

Maulana Jarjis Ansari: ಕೃಷ್ಣ ಜನ್ಮಭೂಮಿ ವಿವಾದದ ನಡುವೆಯೇ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಮೌಲಾನಾ ಜಾರ್ಜಿಸ್ ಅನ್ಸಾರಿ ಎಂಬ ಧರ್ಮಪ್ರಚಾರಕ, ಶ್ರೀಕೃಷ್ಣ ಮುಸ್ಲಿಂ ಆಗಿದ್ದರು ಮತ್ತು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದು ಪ್ರತಿಪಾದಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಜೂನ್ 23 ರಂದು ಜಾರ್ಖಂಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಡಲಾದ ಭಾಷಣದ ವೈರಲ್ ವಿಡಿಯೋ ಇದಾಗಿದೆ ಎನ್ನಲಾಗಿದ್ದು, ಈ ಹೇಳಿಕೆಯು ಹಲವು ಹಿಂದೂ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

ಯುಪಿ ಮೌಲಾನಾ ಹೇಳಿದ್ದೇನು?

ಮೌಲಾನಾ ಅನ್ಸಾರಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ಶ್ರೀಮದ್ಭಗವದ್ಗೀತೆಯ ಶ್ಲೋಕವೊಂದನ್ನು ಉಲ್ಲೇಖಿಸಿದ್ದಾರೆ.
ಯೋಗೀ ಯುಂಜೀತ ಸತ್ತಮ್ ಆತ್ಮಾನಂ ರಹಸಿ ಸ್ಥಿತಃ | ಏಕಾಕೀ ಯತ-ಚಿತ್ತಾತ್ಮಾ ನಿರಾಶೀರ್ ಅಪರಿಗ್ರಹಃ. ಈ ಶ್ಲೋಕವನ್ನು ವ್ಯಾಖ್ಯಾನಿಸುತ್ತಾ, ಶ್ರೀಕೃಷ್ಣನು ಇಸ್ಲಾಂ ಧರ್ಮದ ಅನುಯಾಯಿಯಾಗಿದ್ದು, ಅದರ ತತ್ವಗಳನ್ನು ಪ್ರಚಾರ ಮಾಡುತ್ತಿದ್ದ ಎಂದು ಅವರು ವಾದಿಸಿದ್ದಾರೆ.
ನಮ್ಮ ಸಹೋದರರು ಬೇಸರ ಮಾಡಿಕೊಳ್ಳದಿದ್ದರೆ, ಶ್ರೀಕೃಷ್ಣ ಕೂಡ ದಿನಕ್ಕೆ ಐದು ಬಾರಿ ಪ್ರಾರ್ಥನೆ (ನಮಾಜ್) ಮಾಡುತ್ತಿದ್ದರು. ನಿಮಗೆ ನಂಬಿಕೆಯಿಲ್ಲದಿದ್ದರೆ ಶ್ರೀಮದ್ಭಗವದ್ಗೀತೆಯ 6ನೇ ಅಧ್ಯಾಯದ 10ನೇ ಶ್ಲೋಕವನ್ನು ನೋಡಿ ಎಂದು ಅನ್ಸಾರಿ ಶ್ಲೋಕವನ್ನು ಪಠಿಸುವ ಮೊದಲು ಹೇಳಿದ್ದಾರೆ.
ಹಿಂದೂಗಳು ತಮ್ಮ ಧರ್ಮಗ್ರಂಥಗಳನ್ನು ಗಮನವಿಟ್ಟು ಅಧ್ಯಯನ ಮಾಡಿದರೆ ಅವರು ಇಸ್ಲಾಂ ಧರ್ಮವನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ ಎಂದು ಅವರು ಮುಂದುವರಿದು ಹೇಳಿದ್ದಾರೆ. ಇಸ್ಲಾಂ ವಿಶ್ವವ್ಯಾಪಿ ಧರ್ಮವಾಗಿದ್ದು, ಇದನ್ನು ಪ್ರವಾದಿ ಮುಹಮ್ಮದ್ ಮಾತ್ರವಲ್ಲದೆ ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ಪ್ರಸ್ತುತಪಡಿಸಿದ್ದರು ಎಂದು ಪ್ರತಿಪಾದಿಸಿದ್ದಾರೆ. ಹಿಂದೂಗಳು ತಮ್ಮದೇ ಗ್ರಂಥಗಳನ್ನು ಓದಿದರೆ ಅವರು ಇಸ್ಲಾಂ ಅನ್ನು ಪ್ರೀತಿಸಲು ಪ್ರಾರಂಭಿಸುತ್ತಾರೆ. ಇಸ್ಲಾಂ ಪ್ರಪಂಚದ ಧರ್ಮ, ಇದು ಮುಸ್ಲಿಮರ ಧರ್ಮ ಮಾತ್ರವಲ್ಲ. ಶ್ರೀರಾಮನೂ ಈ ಧರ್ಮವನ್ನು ನೀಡಿದ್ದ, ಶ್ರೀಕೃಷ್ಣನೂ ಇದನ್ನು ಪ್ರಸ್ತುತಪಡಿಸಿದ್ದ ಎಂದು ಹೇಳಿದ್ದಾರೆ.

ಶ್ಲೋಕದ ನೈಜ ಅರ್ಥವೇನು...?

ಮೌಲಾನಾ ಅನ್ಸಾರಿ ಶ್ಲೋಕಕ್ಕೆ ನೀಡಿದ ವ್ಯಾಖ್ಯಾನವು ಅದರ ಮೂಲ ಅರ್ಥಕ್ಕೆ ತದ್ವಿರುದ್ಧವಾಗಿದೆ. ಭಗವದ್ಗೀತೆಯ ಅಧ್ಯಾಯ 6, ಶ್ಲೋಕ 10 ರ ನೈಜ ಅರ್ಥ, ಯೋಗಿಯಾದವನು ಮನಸ್ಸು ಮತ್ತು ದೇಹವನ್ನು ಹತೋಟಿಯಲ್ಲಿಟ್ಟುಕೊಂಡು, ಆಸೆಗಳು ಮತ್ತು ಪರಿಗ್ರಹಗಳಿಂದ (ಪಡೆದುಕೊಳ್ಳುವ ಬಯಕೆ) ಮುಕ್ತನಾಗಿ, ಏಕಾಂತದಲ್ಲಿ ನೆಲೆಸಿ ನಿರಂತರವಾಗಿ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.
ಈ ಶ್ಲೋಕದಲ್ಲಿ ನಮಾಜ್, ಇಸ್ಲಾಂ ಅಥವಾ ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸುವ ಯಾವುದೇ ಉಲ್ಲೇಖವಿಲ್ಲ.

10 ಲಕ್ಷ ರೂ. ಬಹುಮಾನ ಘೋಷಣೆ

ಈ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅಯೋಧ್ಯೆಯ ಮಹಂತ್ ವಿಷ್ಣುದಾಸ್, ಮೌಲಾನಾ ಅನ್ಸಾರಿ ನಾಲಿಗೆಯನ್ನು ಕತ್ತರಿಸಿ ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಆಕ್ರೋಶಭರಿತ ಹೇಳಿಕೆ ನೀಡಿದ್ದಾರೆ. ಕೃಷ್ಣ ಜನ್ಮಭೂಮಿ ವಿವಾದವು ಮತ್ತೊಮ್ಮೆ ರಾಜಕೀಯ ಮತ್ತು ಕಾನೂನು ಚರ್ಚೆಯ ವಸ್ತುವಾಗಿರುವ ಪ್ರಸ್ತುತ ಸಂದರ್ಭದಲ್ಲೇ ಈ ವಿವಾದಾತ್ಮಕ ಹೇಳಿಕೆಗಳು ಹೊರಬಿದ್ದಿವೆ(ಏಜೆನ್ಸೀಸ್​​).