Narendra Modi | ಪ್ರಧಾನಿ ನರೇಂದ್ರ ಮೋದಿ 
ದೇಶ

ಲೂಟಿ ಮಾಡಿದವರಿಗೆ ಇನ್ಮುಂದೆ ಜೈಲೇ ಗತಿ!...ಬಂಗಾಳದ ಗಾಳಿಯಲ್ಲೀಗ ಹೊಸ ತಾಜಾತನವಿದೆ ಎಂದ ಪ್ರಧಾನಿ ಮೋದಿ | Narendra Modi

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಿದವರಿಂದ ಈಗ ಅದನ್ನು ಮರಳಿ ವಸೂಲಿ ಮಾಡಲಾಗುತ್ತಿದ್ದು, ಅವರೆಲ್ಲರೂ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗಂಭೀರ ಆರೋಪ ಮಾಡಿದ್ದಾರೆ. ಹೂಗ್ಲಿ ಜಿಲ್ಲೆಯಲ್ಲಿ ನಡೆದ ಪಶ್ಚಿಮಬಂಗಾ ದಿವಸ್ (ಪಶ್ಚಿಮ ಬಂಗಾಳ ದಿನ) ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು, ತಾರಕೇಶ್ವರದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಹಿಂದಿನ ಸರ್ಕಾರಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದಿನ ಸರ್ಕಾರಗಳು ಹೇಗೆ ಕಾರ್ಯನಿರ್ವಹಿಸುತ್ತಿದ್ದವು ಎಂಬುದಕ್ಕೆ ನಾವೇ ಸಾಕ್ಷಿಯಾಗಿದ್ದೇವೆ. ಅವರು ಬಂಗಾಳವನ್ನು ಅಭಿವೃದ್ಧಿಯಲ್ಲಿ ಹಿಮ್ಮುಖವಾಗಿ ತಳ್ಳಿದ್ದಲ್ಲದೆ, ಅದನ್ನು ವಲಸೆಯ ಭೂಮಿಯನ್ನಾಗಿ ಪರಿವರ್ತಿಸಿದರು ಎಂದು ಪ್ರಧಾನಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಹಿಂದಿನ ಆಡಳಿತಗಾರರು ಅಭಿವೃದ್ಧಿಗೆ ಅಡ್ಡಿಯಾಗಿದ್ದರಿಂದಲೇ ಜನರು ಉದ್ಯೋಗ ಹಾಗೂ ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ಬಂಗಾಳವನ್ನು ತೊರೆದು ವಲಸೆ ಹೋಗುವಂತಾಯಿತು ಎಂದು ಅವರು ಕಿಡಿ ಕಾರಿದರು.

ಪಿಎಂ-ಕಿಸಾನ್ ಕಂತು ಬಿಡುಗಡೆ

ಇದೇ ಪಶ್ಚಿಮಬಂಗಾ ದಿವಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಪಿಎಂ-ಕಿಸಾನ್ (PM-Kisan) ಯೋಜನೆಯ 23ನೇ ಕಂತನ್ನು ಬಿಡುಗಡೆ ಮಾಡಿದರು. ಇದರ ಅಡಿಯಲ್ಲಿ ದೇಶಾದ್ಯಂತ ಇರುವ 9.44 ಕೋಟಿಗೂ ಹೆಚ್ಚು ಫಲಾನುಭವಿ ರೈತರ ಖಾತೆಗಳಿಗೆ 18,880 ಕೋಟಿ ರೂಪಾಯಿಗಿಂತಲೂ ಅಧಿಕ ಹಣವನ್ನು ನೇರವಾಗಿ ವರ್ಗಾಯಿಸಲಾಯಿತು.
ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ (PMFBY) ಮೋದಿ ಚಾಲನೆ ನೀಡಿದರು. ಈ ಯೋಜನೆಯು 2026-27ರ ಅವಧಿಯಲ್ಲಿ ರಾಜ್ಯದ ಸುಮಾರು 14 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿರುವ ಸುಮಾರು 50 ಲಕ್ಷ ರೈತರಿಗೆ ವಿಮಾ ರಕ್ಷಣೆ ನೀಡುವ ನಿರೀಕ್ಷೆಯಿದೆ. ಇದರ ಅಡಿಯಲ್ಲಿ ಅಂದಾಜು 28,140 ಕೋಟಿ ರೂಪಾಯಿ ಮೌಲ್ಯದ ಬೆಳೆಗಳಿಗೆ ವಿಮೆ ರಕ್ಷಣೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ, ಸುಮಾರು 590 ಕೋಟಿ ರೂಪಾಯಿ ಮೌಲ್ಯದ ವಿವಿಧ ರೈಲ್ವೆ ಯೋಜನೆಗಳನ್ನು ಪ್ರಧಾನಿಯವರು ರಾಷ್ಟ್ರಕ್ಕೆ ಸಮರ್ಪಿಸಿದರು.

ಬಂಗಾಳದ ಗಾಳಿಯಲ್ಲಿ ಹೊಸ ತಾಜಾತನ

ಯಾವ ಪಕ್ಷದ ಹೆಸರನ್ನೂ ನೇರವಾಗಿ ಉಲ್ಲೇಖಿಸದ ಪ್ರಧಾನಿ ಮೋದಿ, ಹಿಂದಿನ ಸರ್ಕಾರಗಳು ರಾಜ್ಯಕ್ಕೆ ಮಾಡಿದ ಅನ್ಯಾಯವನ್ನು ಬಿಚ್ಚಿಟ್ಟರು. ಆದರೆ ರಾಜ್ಯವು ಈಗ ಹೊಸ ಭರವಸೆ ಮತ್ತು ಪ್ರಗತಿಗೆ ಸಾಕ್ಷಿಯಾಗುತ್ತಿದೆ. ಬಂಗಾಳದ ಗಾಳಿಯಲ್ಲಿ ಈಗ ಹೊಸ ತಾಜಾತನವಿದ್ದು, ರಾಜ್ಯವು ಕೊನೆಗೂ ಸರಪಳಿಗಳಿಂದ ಮುಕ್ತವಾದಂತೆ ಭಾಸವಾಗುತ್ತಿದೆ ಎನ್ನುತ್ತಾ, ಈ ಐತಿಹಾಸಿಕ ಪಶ್ಚಿಮಬಂಗಾ ದಿವಸ್ ಪಶ್ಚಿಮ ಬಂಗಾಳದ ಸೌಹಾರ್ದಯುತ ಅಭಿವೃದ್ಧಿಗೆ ದೊಡ್ಡ ಪ್ರೇರಣೆಯಾಗಲಿ ಎಂದು ಆಶಿಸಿದರು. ಇದೇ ವೇಳೆ ಗಡಿ ಸುರಕ್ಷತೆಯ ವಿಷಯವನ್ನು ಪ್ರಸ್ತಾಪಿಸಿದ ಮೋದಿ, ಬಂಗಾಳದ ಹಿಂದಿನ ಸರ್ಕಾರವು ದೇಶದ ಗಡಿ ಬೇಲಿ ನಿರ್ಮಾಣ ಯೋಜನೆಗಾಗಿ ಭೂಮಿ ಹಸ್ತಾಂತರಿಸುವುದನ್ನು ತಡೆಹಿಡಿದಿತ್ತು. ಆದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಬಳಿಕ ಆ ಪ್ರಕ್ರಿಯೆ ವೇಗವಾಗಿ ಆರಂಭವಾಗಿದೆ ಎಂದು ಪ್ರಮುಖ ಮಾಹಿತಿ ನೀಡಿದರು(ಏಜೆನ್ಸೀಸ್​​).