ನಿಮ್ಮ ಕೈಯಲ್ಲಿರೋ 500 ರೂಪಾಯಿ ನೋಟು ಅಸಲಿನಾ? ನಕಲಿನಾ? ಒಮ್ಮೆ ಚೆಕ್ ಮಾಡಿಕೊಳ್ಳಿ! ಖತರ್ನಾಕ್​ ದಂಪತಿ ಅರೆಸ್ಟ್​... 500 Rupee Note 
ದೇಶ

ನಿಮ್ಮ ಕೈಯಲ್ಲಿರೋ 500 ರೂಪಾಯಿ ನೋಟು ಅಸಲಿನಾ? ನಕಲಿನಾ? ಒಮ್ಮೆ ಚೆಕ್ ಮಾಡಿಕೊಳ್ಳಿ! ಖತರ್ನಾಕ್​ ದಂಪತಿ ಅರೆಸ್ಟ್​... 500 Rupee Note

ಪ್ರಮುಖ ಮುಖ್ಯಾಂಶಗಳು

  • ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದ ತೆಲಂಗಾಣದ ನಲ್ಗೊಂಡದ ದಂಪತಿ
  • ಹಾಲು ಮಾರುವವನಿಗೆ 500 ರೂ. ನಕಲಿ ನೋಟು ಕೊಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್​ ಕಪಲ್​
  • ನಕಲಿ ನೋಟುಗಳನ್ನು ಅವರು ಜನದಟ್ಟಣೆಯಿಂದ ಕೂಡಿರುವ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಮಾರಾಟ
500 Rupee Note : ಯೂಟ್ಯೂಬ್ ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದ ತೆಲಂಗಾಣದ ನಲ್ಗೊಂಡದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜು ಅಲಿಯಾಸ್ ಬೆಸವಾಡ ರಾಜೀವ್ (30) ಮತ್ತು ಆತನ ಪತ್ನಿ ದುರ್ಗಂ ಪಾವನಿ (26) ಎಂದು ಗುರುತಿಸಲಾಗಿದೆ.
ಹೈದರಾಬಾದ್​ನಲ್ಲಿರುವ ದಂಪತಿಯ ನಿವಾಸದ ಮೇಲೆ ದಾಳಿ ನಡೆಸಿದ ತೆಲಂಗಾಣ ಪೊಲೀಸರು, ಅವರ ಬಳಿಯಿದ್ದ ನಕಲಿ ಕರೆನ್ಸಿ ನೋಟುಗಳು, ಪ್ರಿಂಟರ್ ಸ್ಕ್ಯಾನರ್ ಮತ್ತು ನೋಟು ಮುದ್ರಣಕ್ಕೆ ಬಳಸುತ್ತಿದ್ದ ಪೇಪರ್ ಸ್ಟಾಕ್ ಅನ್ನು ವಶಪಡಿಸಿಕೊಂಡಿದ್ದಾರೆ.
ನಲ್ಗೊಂಡ ಡಿಎಸ್‌ಪಿ ಕೆ. ಶಿವರಾಮ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದರು. ಇದಕ್ಕಾಗಿ ಅವರು ಆನ್‌ಲೈನ್‌ನಲ್ಲಿ ಹೆಚ್‌ಪಿ ಪ್ರಿಂಟರ್‌ಗಳು, ಬಾಂಡ್ ಪೇಪರ್ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಿ, ತಮ್ಮ ಮನೆಯಲ್ಲೇ 500 ರೂಪಾಯಿಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು.
ಹೀಗೆ ಮುದ್ರಿಸಿದ ನಕಲಿ ನೋಟುಗಳನ್ನು ಅವರು ಜನದಟ್ಟಣೆಯಿಂದ ಕೂಡಿರುವ ಅಂಗಡಿಗಳು ಮತ್ತು ಮಾರುಕಟ್ಟೆಗಳಲ್ಲಿ ಚಲಾವಣೆ ಮಾಡುತ್ತಿದ್ದರು. ಸಾಕಷ್ಟು ಗ್ರಾಹಕರಿರುವ ಅಂಗಡಿಗಳಲ್ಲಿ ಈ ನಕಲಿ ನೋಟುಗಳನ್ನುಕೊಟ್ಟರೆ ಅಂಗಡಿ ಮಾಲೀಕರು ಗಮನಿಸುವುದಿಲ್ಲ ಅಂತಾ ದಂಪತಿ ಜನರಿಂದ ತುಂಬಿರುವ ಅಂಗಡಿಗಳನ್ನೇ ಟಾರ್ಗೆಟ್​ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ನಕಲಿ ನೋಟುಗಳನ್ನು ತಯಾರಿಸಲು ಉತ್ತಮ ಗುಣಮಟ್ಟದ ಬಾಂಡ್ ಪೇಪರ್‌ಗಳನ್ನು ಬಳಸುತ್ತಿದ್ದರು. ನೋಟುಗಳನ್ನು ಮುದ್ರಿಸಿದ ನಂತರ, ಅವುಗಳನ್ನು ಕತ್ತರಿ, ಅಸಲಿ ನೋಟುಗಳ ಆಕಾರಕ್ಕೆ ಕತ್ತರಿಸುತ್ತಿದ್ದರು. ಈ ದಂಪತಿ ಹಾಲಿನವನಿಗೆ ನಕಲಿ ನೋಟುಗಳನ್ನು ನೀಡಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ. ಹಾಲಿನವನಾದ ಆವುಲ ಕಿರಣ್ ಎಂಬಾತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದನು.
ದೂರು ದಾಖಲಾದ ತಕ್ಷಣ, ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು. ಈ ತಂಡವು ಕಳೆದ ದಿನ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದೆ. ಬಂಧನದ ವೇಳೆ ನಡೆಸಿದ ದಾಳಿಯಲ್ಲಿ ಅವರ ಬಳಿಯಿದ್ದ 7,500 ರೂಪಾಯಿ ಮೌಲ್ಯದ 500 ರೂಪಾಯಿಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜೆನ್ಸೀಸ್​).