Shashi Tharoor | ಕಾಂಗ್ರೆಸ್ ಸಂಸದ ಶಶಿ ತರೂರ್
ದೆಹಲಿ: ಬಾಂಗ್ಲಾದೇಶದಲ್ಲಿ ನಡೆದ ದೀಪು ಚಂದ್ರ ದಾಸ್ ಹತ್ಯೆಯನ್ನು ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, ಭಾರತದಲ್ಲಿಯೂ ಪ್ರತಿಭಟನೆಗಳು ನಡೆಯುತ್ತವೆ ಆದರೆ ಯಾರ ಮೇಲೂ ಗುಂಡು ಹಾರಿಸಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ತರೂರ್, ಹಿಂಸಾಚಾರದಂತಹ ಪ್ರಯತ್ನವನ್ನು ನಮ್ಮ ದೇಶದ ಪೊಲೀಸರು ನಿಭಾಯಿಸುತ್ತಾರೆ, ಬಾಂಗ್ಲಾದೇಶಿಗಳು ಸಹ ಅದೇ ರೀತಿ ಮಾಡಬೇಕೆಂದು ನಾವು ಬಯಸುತ್ತೇವೆ. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಕೂಡ ಈ ಅಶಾಂತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಳ್ಳಬೇಕು, ಇದು ಸರ್ಕಾರದ ಬದ್ಧತೆಯಾಗಿದೆ. ಬಾಂಗ್ಲಾದೇಶದಲ್ಲಿ ಮತದಾರರು ಸುರಕ್ಷಿತವಾಗಿಲ್ಲ, ಹಾಗೆಯೇ ಕಾನೂನುಬಾಹಿರತೆ ಮತ್ತು ಬೆದರಿಕೆಯ ವಾತಾವರಣದಲ್ಲಿ ಚುನಾವಣೆಗಳು ನಡೆಯಲು ಸಾಧ್ಯವಿಲ್ಲ ಎಂದು ತರೂರ್ ಹೇಳಿದ್ದಾರೆ.
ಗಡಿಯುದ್ದಕ್ಕೂ ಈ ರೀತಿಯ ಅಸ್ಥಿರ ವಾತಾವರಣವಿದ್ದರೂ, ಭಾರತದಲ್ಲಿಯೂ ಕೆಲವು ಗುಂಪುಗಳು ಪ್ರತಿಯಾಗಿ ಪ್ರತಿಭಟನೆಗಳನ್ನು ಆಯೋಜಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿರುವ ತರೂರ್, ನಮ್ಮ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕಿದೆ, ಆದರೆ ಅಲ್ಲಿನ ಪ್ರತಿಭಟನೆಗಳು ನಿಯಂತ್ರಣ ತಪ್ಪುತ್ತಿವೆ ಎನ್ನುವ ಅಂಶ ಯಾರ ಕಣ್ಣಿಗೂ ಕಾಣುತ್ತಿಲ್ಲ ಎಂದರು.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಕುರಿತಾದ ಪ್ರಶ್ನೆಗೆ ಉತ್ತರಿಸಿದ ತರೂರ್, ಭಾರತವು ಸರಿಯಾದ ಮಾನವೀಯ ಮನೋಭಾವದಿಂದ ವರ್ತಿಸಿದೆ, ಹಲವಾರು ವರ್ಷಗಳಿಂದ ಅವರು ನವದೆಹಲಿಯ ಉತ್ತಮ ಸ್ನೇಹಿತರಾಗಿದ್ದಾರೆ, ಸರ್ಕಾರವು ಆ ಎಲ್ಲಾ ವಿಷಯಗಳನ್ನು ಹೆಚ್ಚು ವಿವರವಾಗಿ ಅಧ್ಯಯನ ಮಾಡುವವರೆಗೆ ಹಸೀನಾ ಇಲ್ಲಿ ಸುರಕ್ಷಿತವಾಗಿ ಉಳಿಯಲು ಅವಕಾಶ ನೀಡಬೇಕು ಎಂದು ಅವರು ಹೇಳಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆದ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ಬಳಿಕ ಹಸೀನಾ ಸರ್ಕಾರ ಉರುಳಿತು. ಅದಾದ ನಂತರ ಅವರು ಭಾರತಕ್ಕೆ ಪಲಾಯನ ಮಾಡಿ ಅಂದಿನಿಂದ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ.
ಅಕ್ರಮ ಬಾಂಗ್ಲಾದೇಶಿ ವಲಸಿಗರು ಮತ್ತು ರೋಹಿಂಗ್ಯಾಗಳ ವಿಷಯದ ಕುರಿತು ಮಾತನಾಡಿದ ತರೂರ್, ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗಡೀಪಾರು ಮಾಡುವ ಹಕ್ಕು ಸರ್ಕಾರಕ್ಕೆ ಇದ್ದು, ಅಧಿಕಾರದಲ್ಲಿರುವವರು ಗಡಿಗಳನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಬೇಕು. ನಮ್ಮ ದೇಶಕ್ಕೆ ಅಕ್ರಮ ವಲಸಿಗರು ಬರುತ್ತಿದ್ದರೆ, ಅದು ನಮ್ಮ ವೈಫಲ್ಯವಲ್ಲವೇ? ನಮ್ಮ ಗಡಿಗಳನ್ನು ನಾವು ಉತ್ತಮವಾಗಿ ನಿಯಂತ್ರಿಸಬೇಕಲ್ಲವೇ? ಎಂದು ತರೂರ್ ಪ್ರಶ್ನಿಸಿದ್ದಾರೆ(ಏಜೆನ್ಸೀಸ್).