ಸಿಎಂ ವಿಜಯ್ ಮತ್ತು ಕೆ.ಅಣ್ಣಾಮಲೈ
ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಅವರ ಯುಕೆ ಪ್ರವಾಸವನ್ನು ಟೀಕಿಸಿರುವ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ(K Annamalai) ಅವರು, ಲಂಡನ್ ಆರ್ಥಿಕತೆ ಸತ್ತಿದೆ, ಅಲ್ಲಿಂದ ನಮಗೆಷ್ಟು ಹೂಡಿಕೆ ಸಿಗುತ್ತದೆ? ಹೂಡಿಕೆ ಪಡೆಯಲು ಯುಕೆ ಸರಿಯಾದ ಸ್ಥಳವಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನನಗೆ ಲಂಡನ್ ಚೆನ್ನಾಗಿ ಗೊತ್ತು. ಅದು ಸತ್ತ ಆರ್ಥಿಕತೆ. ಅಲ್ಲಿ ಹಣವಿಲ್ಲ. ಯುಕೆಯ ಬೆಳವಣಿಗೆ ಕೇವಲ ಶೇ. 1. ನೀವು ಅಲ್ಲಿಗೆ ಹೋಗಿ ತಮಿಳುನಾಡಿನಲ್ಲಿ ಹಣ ಹೂಡಿಕೆ ಮಾಡಲು ಕೇಳಿದರೆ, ಅವರು ಏನು ಹಣ ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಭಾರತ ಈಗ 4.1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದರೆ, ಯುಕೆ 3.4 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿದೆ. ಇಲ್ಲಿಂದ ಇಷ್ಟೊಂದು ದೊಡ್ಡ ನಿಯೋಗದೊಂದಿಗೆ ಆ ದೇಶಕ್ಕೆ ತೆರಳಿ, ಬಳಿಕ ಅವರು ಇವರನ್ನು ಭೇಟಿಯಾದರೇ?, ಅವರು ಅವರನ್ನು ಭೇಟಿಯಾದರೇ?, ಅವರು ಇವರನ್ನು ನೋಡಿದರೇ?, ಅವರು ಒಳಗೆ ಹೋದರೇ? ಎಂದು ಕೇಳುವುದರಲ್ಲಿ ಅರ್ಥವೇನು? ಎಂದಿದ್ದಾರೆ.
ಮುಖ್ಯಮಂತ್ರಿಗಳು ಮಾಡಬೇಕಾಗಿರುವುದು ಚೆನ್ನೈನಿಂದ ಲಂಡನ್‌ಗೆ ಎಮಿರೇಟ್ಸ್ ವಿಮಾನದಲ್ಲಿ ಹೋಗುವ ಬದಲು, ಚೆನ್ನೈನಿಂದ ಕೊಯಮತ್ತೂರು ಅಥವಾ ಮಧುರೈಗೆ ಇಂಡಿಗೋ ವಿಮಾನದಲ್ಲಿ ಹೋಗಬೇಕು. ಈಗಾಗಲೇ ಅಲ್ಲಿ ಕಾರ್ಯನಿರ್ವಹಿಸುತತ್ತಿರುವ ಕಂಪನಿಗಳ ವಿಸ್ತರಣೆಗೆ ಉತ್ತೇಜನ ನೀಡುವಂತೆ ಪ್ರತಿಪಾದಿಸಿದ್ದಾರೆ. ಬಾಂಬೆಗೆ ಹೋಗಿ, ದೆಹಲಿಗೆ ಹೋಗಿ, ಬೆಂಗಳೂರಿಗೆ ಹೋಗಿ. ಅಲ್ಲಿಂದ ಹೂಡಿಕೆ ತನ್ನಿ. ಎಲ್ಲದಕ್ಕೂ ನೀವು ವಿದೇಶಕ್ಕೆ ಹೋಗಬೇಕಾಗಿಲ್ಲ ಎಂದು ಹೇಳಿದ್ದಾರೆ.
ಇನ್ನೂ ವಿಜಯ್ ಸೆಪ್ಟೆಂಬರ್ 10ರಿಂದ ಯುಕೆಗೆ ಆರು ದಿನಗಳ ಪ್ರವಾಸವನ್ನು ಕೈಗೊಂಡಿದ್ದರು. ಈ ಪ್ರವಾಸವು ಸುಮಾರು 15,000 ಕೋಟಿ ರೂಪಾಯಿಗಳ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ. ಸುಮಾರು 10,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸರ್ಕಾರ ಹೇಳಿದೆ (ಏಜೆನ್ಸೀಸ್).