Amit Shah | ಗೃಹ ಸಚಿವ ಅಮಿತ್ ಷಾ 
ದೇಶ

4 ದಶಕಗಳ ಇತಿಹಾಸದಲ್ಲಿ ನಡೆಯದ ಅಪಚಾರ ಇಂದು ನಡೆದಿದೆ...ವಿಪಕ್ಷಗಳ ವಿರುದ್ಧ ಗೃಹ ಸಚಿವ ಅಮಿತ್ ಷಾ ವಾಗ್ದಾಳಿ | Amit Shah

ನವದೆಹಲಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪದಚ್ಯುತಿಗೆ ವಿರೋಧ ಪಕ್ಷಗಳು ಮಂಡಿಸಿರುವ ನಿರ್ಣಯದ ಮೇಲೆ ಬುಧವಾರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah), ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಸ್ಪೀಕರ್ ಸ್ಥಾನವು ಪಕ್ಷ ರಾಜಕೀಯವನ್ನು ಮೀರಿದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾಗಿದ್ದು, ಅದರ ಮೇಲೆ ಸಂಶಯ ವ್ಯಕ್ತಪಡಿಸುವುದು ಸಂಸದೀಯ ವ್ಯವಸ್ಥೆಗೆ ಕಳಂಕ ತಂದಂತೆ ಎಂದರು.

ಸ್ಪೀಕರ್ ಇಡೀ ಸದನದ ಆಸ್ತಿ

ಸ್ಪೀಕರ್ ಅವರು ಆಡಳಿತ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅಮಿತ್ ಷಾ, ಸಭಾಧ್ಯಕ್ಷರ ಕಚೇರಿಯು ಕೇವಲ ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ, ಅದು ಇಡೀ ಸದನಕ್ಕೆ ಸೇರಿದ್ದು, ಅವರು ಎಲ್ಲಾ ಸಂಸದರ ಹಕ್ಕುಗಳ ರಕ್ಷಕ. ಅವರನ್ನು ಪಕ್ಷಪಾತದ ದೃಷ್ಟಿಯಿಂದ ನೋಡುವುದು ತಪ್ಪು ಎಂದು ಹೇಳಿದರು. ಸ್ಪೀಕರ್ ಸ್ಥಾನದ ತಟಸ್ಥತೆಯನ್ನು ಎತ್ತಿ ಹಿಡಿದ ಷಾ, ಈ ಸ್ಥಾನವು ಪ್ರಜಾಪ್ರಭುತ್ವದ ಘನತೆಯನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂದರು.

40 ವರ್ಷಗಳಲ್ಲಿ ಇದೇ ಮೊದಲು..

ಸಂಸತ್ತಿನ ಇತಿಹಾಸವನ್ನು ಮೆಲುಕು ಹಾಕಿದ ಗೃಹ ಸಚಿವರು, ಕಳೆದ ನಾಲ್ಕು ದಶಕಗಳಲ್ಲಿ ಸ್ಪೀಕರ್ ವಿರುದ್ಧ ಇಂತಹ ನಿರ್ಣಯವನ್ನು ಮಂಡಿಸಿದ ನಿದರ್ಶನಗಳಿಲ್ಲ, ಆದರೆ ಈಗ ನಡೆಯುತ್ತಿರುವ ಬೆಳವಣಿಗೆ ಸಂಸದೀಯ ರಾಜಕೀಯಕ್ಕೆ ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. 

ವಿರೋಧ ಪಕ್ಷಗಳ ಇಬ್ಬಗೆ ನೀತಿ ಪ್ರಶ್ನಿಸಿದ ಅಮಿತ್​ ಷಾ

ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಆಯ್ಕೆಯಾದ ಸಂದರ್ಭವನ್ನು ನೆನಪಿಸಿದ ಅಮಿತ್ ಷಾ, ಆಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡೂ ಒಮ್ಮತದಿಂದ ಪೀಠದವರೆಗೂ ಕರೆದುಕೊಂಡು ಹೋಗಿ ಗೌರವ ಸೂಚಿಸಿದ್ದವು, ಸ್ಪೀಕರ್ ಆಯ್ಕೆಯಾದಾಗ ಅವರೊಂದಿಗೆ ಕುರ್ಚಿಯ ಬಳಿ ಹೋದವರೇ ಇಂದು ಅವರ ನಡವಳಿಕೆಯನ್ನು ಪ್ರಶ್ನಿಸುತ್ತಿರುವುದು ವಿರೋಧಾಭಾಸ. ಇದು ಸ್ಪಷ್ಟವಾಗಿ ರಾಜಕೀಯ ಪ್ರೇರಿತ ನಡೆಯಾಗಿದೆ ಎಂದು ಕಿಡಿಕಾರಿದರು.

ಭಾರತದ ಪ್ರತಿಷ್ಠೆಗೆ ಧಕ್ಕೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಡೀ ವಿಶ್ವವೇ ಗೌರವದಿಂದ ನೋಡುತ್ತದೆ, ಈಗ ಇಂತಹ ಅನಗತ್ಯ ವಿವಾದಗಳು ಮತ್ತು ಸಾಂವಿಧಾನಿಕ ಹುದ್ದೆಗಳ ಮೇಲಿನ ದಾಳಿಗಳು ಭಾರತದ ಜಾಗತಿಕ ಖ್ಯಾತಿಗೆ ಹಾನಿ ಮಾಡುತ್ತವೆ ಎಂದು ಷಾ ಎಚ್ಚರಿಕೆ ನೀಡಿದ್ದು, ಈ ರೀತಿಯ ನಿರ್ಣಯಗಳು ನಮ್ಮ ಪ್ರಜಾಪ್ರಭುತ್ವದ ಇಮೇಜ್‌ಗೆ ಕಳಂಕ ತರುತ್ತವೆ. ಸಂಸತ್ತಿನ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ಪ್ರಯತ್ನವನ್ನು ವಿರೋಧ ಪಕ್ಷಗಳು ಕೈಬಿಡಬೇಕು ಎಂದು ಸಲಹೆ ನೀಡಿದರು(ಏಜೆನ್ಸೀಸ್​).